ಶಿಲ್ಲಾಂಗ್: ಮಾರಣಾಂತಿಕ ಕೋವಿಡ್ 19 ವೈರಸ್ ನಿಂದ ಜಗತ್ತು ತತ್ತರಿಸಿ ಹೋಗಿದ್ದು ಹಲವೆಡೆ ಲಾಕ್ ಡೌನ್ ಮುಂದುವರಿಸುವ ತೀರ್ಮಾನ ಕೈಗೊಂಡಿವೆ. ಏತನ್ಮಧ್ಯೆ ಭಾರತದಲ್ಲಿಯೂ ಏಪ್ರಿಲ್ 14ರ ನಂತರ ಲಾಕ್ ಡೌನ್ ಮುಂದುವರಿಯುತ್ತಾ ಅಥವಾ ಅಂತ್ಯಗೊಳ್ಳುತ್ತಾ ಎಂಬ ಚರ್ಚೆ ಆರಂಭವಾಗಿದೆ. ಆದರೆ ಏಪ್ರಿಲ್ 15ರಿಂದ ರಾಜ್ಯದ ಹಲವೆಡೆ ಲಾಕ್ ಡೌನ್ ಸಡಿಲಗೊಳಿಸುವುದಾಗಿ ಮೇಘಾಲಯ ಘೋಷಿಸಿದೆ.
ಮೇಘಾಲಯದಲ್ಲಿ ಯಾವುದೇ ಕೋವಿಡ್ 19 ಪ್ರಕರಣ ಪತ್ತೆಯಾಗದಿರುವ ಹಿನ್ನೆಲೆಯಲ್ಲಿ ಏಪ್ರಿಲ್ 15ರಂದು ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಕೃಷಿ ಚಟುವಟಿಕೆ ಪುನರಾರಂಭಗೊಳ್ಳಲಿದೆ ಎಂದು ಮೇಘಾಲಯ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ.
ಮೇಘಾಲಯದಲ್ಲಿ ಈವರೆಗೆ ಯಾವುದೇ ಕೋವಿಡ್ 19 ವೈರಸ್ ಪ್ರಕರಣ ಪತ್ತೆಯಾಗಿಲ್ಲ. ಶಿಕ್ಷಣ ಸಂಸ್ಥೆಗಳು ಏಪ್ರಿಲ್ ಅಂತ್ಯದವರೆಗೆ ರಜೆ ಮುಂದುವರಿಸಲಿದೆ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಭಾಗಶಃವಾಗಿ ತೆರವುಗೊಳಿಸಿದ ಮೊದಲ ರಾಜ್ಯ ಮೇಘಾಲಯ ಎಂದು ವರದಿ ತಿಳಿಸಿದೆ.
ಆದರೆ ಕೋವಿಡ್ 19 ವೈರಸ್ ಕ್ಷಿಪ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಉಳಿದ ರಾಜ್ಯಗಳು ಲಾಕ್ ಡೌನ್ ಮುಂದುವರಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ವರದಿ ವಿವರಿಸಿದೆ.
ಏಪ್ರಿಲ್ 15ರಿಂದ ಸರ್ಕಾರಿ ಕಚೇರಿಗಳು ಪೂರ್ಣ ಪ್ರಮಾಣದ ಸಿಬ್ಬಂದಿಗಳೊಂದಿಗೆ ಕಾರ್ಯಾಚರಿಸಲಿವೆ. ಶಾಲಾ, ಕಾಲೇಜುಗಳು ಏಪ್ರಿಲ್ 30ರವರೆಗೆ ಬಂದ್ ಮಾಡಲಾಗುವುದು ಎಂದು ಸಚಿವ ಸಂಪುಟದ ಸಭೆ ಬಳಿಕ ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ರೈತರು ಗದ್ದೆ ಕೆಲಸದಲ್ಲಿ ತೊಡಗಿಕೊಳ್ಳಬಹುದು. ಗ್ರಾಮೀಣ ಪ್ರದೇಶದಲ್ಲಿ ವಾರದ ಸಂತೆ ನಡೆಯಲಿದೆ. ಆದರೆ ಕೋವಿಡ್ 19ಗೆ ವಿಧಿಸಿದ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದೆ.