Advertisement

ಕೊನೆಗೊಂಡ ಓಲಿ ಆಡಳಿತ ಬದಲಾಗುವುದೇ ನೇಪಾಲ?

11:45 PM Dec 21, 2020 | mahesh |

ಕಳೆದ ಕೆಲವು ತಿಂಗಳಿಂದ ಭಾರತಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಗಳನ್ನು ಎದುರೊಡ್ಡುತ್ತಾ ಬರುತ್ತಿದ್ದ ನೇಪಾಲದ ಕೆ.ಪಿ. ಓಲಿ ಶರ್ಮಾ ಸರಕಾರ ವಿಸರ್ಜನೆಗೊಂಡಿದೆ. ಚೀನದ ಕೈಗೊಂಬೆ ಎಂಬ ಆರೋಪ ಎದುರಿಸಿದ್ದ ಓಲಿ, ಪಕ್ಷದೊಳಗಿನವರ ಜತೆ ರಾಜಿ ಮಾಡಿಕೊಳ್ಳುವ ಬದಲು, ಸರಕಾರವನ್ನೇ ವಿಸರ್ಜಿಸಿಬಿಟ್ಟಿದ್ದಾರೆ.

Advertisement

ಅವಧಿಗೂ ಮುನ್ನ ಸಂಸತ್‌ ವಿಸರ್ಜನೆ ಆಗಿರುವುದು ಹಾಗೂ ಚುನಾವಣ ದಿನಾಂಕ ಘೋಷಿಸಿರುವುದನ್ನು ಪ್ರಚಂಡ ಬಣ ಹಾಗೂ ವಿಪಕ್ಷಗಳು ತೀವ್ರವಾಗಿ ವಿರೋಧಿಸುತ್ತಿವೆ. ನೇಪಾಲ ಆಡಳಿತದ ಈ ಪತನವು ಹಲವು ಪ್ರಶ್ನೆಗಳನ್ನು, ಅಭಿಪ್ರಾಯಗಳನ್ನು ಹುಟ್ಟುಹಾಕಿದೆ. ಇದು ನೇಪಾಲದಲ್ಲಿ ಹೆಚ್ಚುತ್ತಿದ್ದ ಚೀನದ ಹಸ್ತಕ್ಷೇಪವನ್ನು ತಗ್ಗಿಸಬಹುದೇ? ಓಲಿ ಜನರ ಅನುಕಂಪ ಗಿಟ್ಟಿಸಲು ಹೀಗೆ ಮಾಡುತ್ತಿದ್ದಾರಾ? ಚೀನ ಚುನಾವಣೆಯ ಸಮಯದಲ್ಲಿ ಹಸ್ತಕ್ಷೇಪ ಮಾಡುವುದೇ? ಅಥವಾ ಭಾರತ ಪರ ಇರುವ ಆಡಳಿತ ಬರಬಹುದೇ ಎನ್ನುವ ಪ್ರಶ್ನೆಗಳೇಳುತ್ತಿವೆ. ಇದೇನೇ ಇದ್ದರೂ, ಇಂಥ ಸ್ಥಿತಿ ಎದುರಾಗಿರುವುದಕ್ಕೆ ಖುದ್ದು ಓಲಿಯವರೇ ಕಾರಣ ಎನ್ನುವುದು ಸತ್ಯ. ಸಾಂವಿಧಾನಿಕ ಮಂಡಳಿ ಕಾಯ್ದೆ ಸಂಬಂಧ ಅವರು ಇತ್ತೀಚೆಗೆ ತಂದಿದ್ದ ತಿದ್ದುಪಡಿ ಅಧ್ಯಾದೇಶ ಈ ವಿದ್ಯಮಾನಕ್ಕೆ ಕಾರಣ ಎನ್ನಲಾಗುತ್ತದಾದರೂ, ಅದೊಂದೇ ಸರಕಾರದ ವಿಸರ್ಜನೆಗೆ ಕಾರಣವಂತೂ ಅಲ್ಲ. ಕಳೆದೊಂದು ವರ್ಷದಿಂದ ಪ್ರಚಂಡ ನೇತೃತ್ವದ ಕಮ್ಯುನಿಸ್ಟ್‌ ಪಾರ್ಟಿ ಆಫ್ ಚೀನದ ನಾಯಕರನ್ನು ಕಡೆಗಣಿಸುತ್ತಲೇ ಬಂದಿದ್ದ ಓಲಿ, ಈ ಬಣದಿಂದ ಭಾರೀ ಒತ್ತಡ, ಸವಾಲುಗಳನ್ನು ಎದುರಿಸಲಾರಂಭಿಸಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ, ಓಲಿಯವರ ಅತಿಯಾದ ಚೀನ ಪ್ರೇಮ, ಖುದ್ದು ಅವರ ಪಕ್ಷ ಎನ್‌ಸಿಪಿಯಲ್ಲೇ ಅಸಮಾಧಾನಕ್ಕೆ ಕಾರಣವಾಗಿತ್ತು.

ಕಳೆದ ವರ್ಷ ಚೀನ ಅಧ್ಯಕ್ಷ ಜಿನ್‌ಪಿಂಗ್‌ ನೇಪಾಲ ಪ್ರವಾಸ ಕೈಗೊಂಡದ್ದೂ ಹಾಗೂ ತಮ್ಮ ಚೀನ ನಿಷ್ಠೆಯನ್ನು ಮೆರೆಯಲು ಓಲಿ “ಜಿನ್‌ಪಿಂಗ್‌ ರಾಜಕೀಯ ಸಿದ್ಧಾಂತ’ದ ಕುರಿತು ತರಬೇತಿ ಶಿಬಿರವನ್ನು ಆಯೋಜಿಸಿದ್ದೆಲ್ಲ ತೀವ್ರ ಟೀಕೆಗೆ ಕಾರಣವಾಗಿತ್ತು. ನೇಪಾಲ ಸರಕಾರ ಚೀನದತ್ತ ಹೆಚ್ಚು ವಾಲುತ್ತಿದೆ ಎನ್ನುವುದಕ್ಕಿಂತ ಹೆಚ್ಚಾಗಿ, ಈ ವೇಳೆಯಲ್ಲಿ ಅದು ಭಾರತದಿಂದ ಅನಗತ್ಯವಾಗಿ ವಿಮುಖವಾಗುತ್ತಿದೆ ಎನ್ನುವುದು ನೇಪಾಲಿಯರ ಹಾಗೂ ಅಲ್ಲಿನ ರಾಜಕಾರಣಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಒಂದೆಡೆ ಭಾರತ-ಚೀನದ ನಡುವೆ ಗಡಿ ಭಾಗದಲ್ಲಿ ಬಿಕ್ಕಟ್ಟು ಆರಂಭವಾಗುತ್ತಿದ್ದಂತೆಯೇ, ಇನ್ನೊಂದೆಡೆ ಓಲಿ ಸರಕಾರ ಕಾಲಾಪಾನಿ, ಲಿಂಪಿಯಾಧುರಾ ಹಾಗೂ ಲಿಪುಲೇಖ್‌ ಪ್ರದೇಶಗಳು ನೇಪಾಲದ ಭಾಗವೆಂದು ವಾದಿಸಲಾರಂಭಿಸಿತು. ಅಲ್ಲದೇ, ಈ ಕುರಿತು ನಕ್ಷೆಯನ್ನೂ ಬಿಡುಗಡೆ ಮಾಡಿ ಭಾರತಕ್ಕೆ ಅಸಮಾಧಾನ ಮೂಡಿಸಿತ್ತು. ಇನ್ನು ರಾಮಜನ್ಮಭೂಮಿಯ ವಿಚಾರದಲ್ಲೂ ಅನಗತ್ಯ ವಿವಾದ ಹುಟ್ಟುಹಾಕುವ ಕೆಲಸ ಮಾಡಿ, ನೇಪಾಲಿಯರಿಂದಲೇ ತೀವ್ರ ವಿರೋಧ ಎದುರಿಸಿದರು ಓಲಿ. ಎಲ್ಲಕ್ಕಿಂತ ಹೆಚ್ಚಾಗಿ, ತಮ್ಮ ದೇಶದಲ್ಲಿ ಕೋವಿಡ್‌ ಹೆಚ್ಚಾಗಲು ಭಾರತದಿಂದ ಬಂದವರೇ ಕಾರಣ ಎಂಬಂಥ ಕ್ಷುಲ್ಲಕ ಹೇಳಿಕೆ ನೀಡಿ ರೋಗ ತಡೆಯುವಲ್ಲಿನ ತಮ್ಮ ಅಸಾಮರ್ಥ್ಯವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿದರು. ಈ ಎಲ್ಲ ಸಂಗತಿಗಳೂ ಅವರ ವಿರುದ್ಧದ ಅಸಮಾಧಾನ ಭುಗಿಲೇಳಲು ಕಾರಣವಾಗಿತ್ತು.

ನೇಪಾಲಕ್ಕೆ ಒಂದು ರೀತಿಯಲ್ಲಿ ಹಿರಿಯಣ್ಣನಂತೆಯೇ ಇರುವ ಭಾರತ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಡದಂತೆ ತಡೆಯಲು ಬಹಳ ಪ್ರಬುದ್ಧ ನಡೆಗಳನ್ನು ಇಡುತ್ತಾ ಬಂದಿದೆ. ಇತ್ತೀಚೆಗಷ್ಟೇ ಭಾರತದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿಗಳು ನೇಪಾಲ ಪ್ರವಾಸ ಕೈಗೊಂಡು ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ ಮಹತ್ತರ ಒಪ್ಪಂದಗಳನ್ನೂ ಮಾಡಿಕೊಂಡಿದ್ದರು. ಇದೇನೇ ಇದ್ದರೂ ಮುಂದೆ ಯಾರು ಅಧಿಕಾರಕ್ಕೆ ಬರಲಿದ್ದಾರೆ ಎನ್ನುವ ಕುತೂಹಲವಂತೂ ಚೀನ ಮತ್ತು ಭಾರತಕ್ಕೆ ಇದೆ. ಮತ್ತೆ ಚೀನ ಪರ ಆಡಳಿತ ಬರುವುದೋ, ಭಾರತ ಪರ ಆಡಳಿತವೋ ಎನ್ನುವುದಕ್ಕೆ ಸಮಯವೇ ಉತ್ತರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next