ಕುಂದಾಪುರ: ನಗರ ಪ್ರವೇಶ ಮಾಡದೆ ಕುಂದಾಪುರ ಹಲವಾರು ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುವ ಮಹತ್ವಾಕಾಂಕ್ಷಿ ರಿಂಗ್ ರೋಡ್ ಕಾಮಗಾರಿಗೆ ಶಿಲಾನ್ಯಾಸವಾಗಿ 1 ವರ್ಷ 9 ತಿಂಗಳಾಗಿದೆ. ಆದರೆ, ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಈ ರಿಂಗ್ ರೋಡ್‌ಗೆ ಅತ್ಯಂತ ಅಗತ್ಯವಾದ ಸಿಆರ್‌ಝಡ್ ಇಲಾಖೆ ನಿರಾಕ್ಷೇಪಣೆ ಪತ್ರವನ್ನು ಪಡೆದಿದ್ದೇ ಶಿಲಾನ್ಯಾಸವಾಗಿ 1 ವರ್ಷ 2 ತಿಂಗಳ ನಂತರ. ಹೀಗಾಗಿ ಶಿಲಾನ್ಯಾಸವಾದರೂ ಕಾಮಗಾರಿ ಆರಂಭಕ್ಕೆ ಮುಹೂರ್ತ ಸಿಕ್ಕಿಲ್ಲ. ಕುಂದಾಪುರ ಪುರಸಭೆಯ ಹೊಸ ಆಡಳಿತವಾದರೂ ಅದನ್ನು ಆರಂಭೀಸೀತೇ ಎನ್ನುವುದು ಜನರ ನಿರೀಕ್ಷೆ.
ಮೀನುಗಾರಿಕೆ ವಲಯ ಎಂದು ಗುರುತಿಸಿ ಕೊಂಡಿರುವ ಖಾರ್ವಿಕೇರಿ, ಪಂಚಗಂಗಾವಳಿ, ಮದ್ದುಗುಡ್ಡೆ ಪ್ರದೇಶದಲ್ಲಿ ರಿಂಗ್ ರೋಡ್ ಹಾದುಹೋಗಿದೆ. ರಿಂಗ್‌ರೋಡ್ ನಿರ್ಮಾಣ ವಾದರೆ ನಗರದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ನಗರದೊಳಗೆ ಪ್ರವೇಶ ಪಡೆಯದೆ ಕೋಡಿ ಮೊದಲಾದ ಭಾಗಗಳಿಗೆ, ಪುರಸಭೆ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಹೆದ್ದಾರಿಯಿಂದ ರಿಂಗ್ ರೋಡ್ ಮೂಲಕ ಹೋಗಲು ಸಾಧ್ಯವಿದೆ.
ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮನವಿಯಂತೆ ಕಚ್ಚಾ ರಸ್ತೆಯನ್ನು ಕಾಂಕ್ರಿಟೀಕರಣದ ಮೂಲಕ ಅಭಿವೃದ್ಧಿಪಡಿಸಲು ಸರಕಾರದಿಂದ 20 ಕೋ. ರೂ. ಮಂಜೂರಾಗಿತ್ತು.
19.8 ಕೋ. ರೂ. ವೆಚ್ಚದಲ್ಲಿ ಕಾಮಗಾರಿಗೆ ಟೆಂಡರ್ ಆಗಿತ್ತು. ಕಳೆದ ವರ್ಷದ ಜ. 5ರಂದು ಪುರಸಭೆ ಅಧ್ಯಕ್ಷೆಯಾಗಿದ್ದ ವೀಣಾ ಭಾಸ್ಕರ ಮೆಂಡನ್ ಮೂಲಕ ಭೂಮಿ ಪೂಜೆ ಕೂಡಾ ನಡೆದಿತ್ತು. ಲೋಕೋಪಯೋಗಿ ಇಲಾಖೆ ಮೂಲಕ ಕಾಮಗಾರಿಗೆ ಚಾಲನೆ ದೊರೆತಿತ್ತು. ಆದರೆ ಕಾಮಗಾರಿ ಸ್ಥಗಿತವಾಗಿತ್ತು.
ಹೀಗೆ ವಿಳಂಬವಾದರೆ ಮಂಜೂರಾದ ಮೊತ್ತದಲ್ಲಿ ಮುಂದಿನ ದಿನಗಳಲ್ಲಿ ಕಾಮಗಾರಿ ನಡೆಸುವುದು ಕೂಡ ಗುತ್ತಿಗೆದಾರರಿಗೆ ಕಷ್ಟವಾಗಲಿದೆ. ಸಿಮೆಂಟ್, ಕಬ್ಬಿಣ, ಜಲ್ಲಿ ಮೊದಲಾದವುಗಳ ಬೆಲೆ ಹೆಚ್ಚಿದರೆ ಈಗ ಮಂಜೂರಾದ ನಿರ್ದಿಷ್ಟ ಮೊತ್ತದಲ್ಲಿ ಕಾಮಗಾರಿ ಗುಣಮಟ್ಟದಲ್ಲಿ ಮುಗಿಸುವುದು ಅಸಾಧ್ಯ. ಕಳಪೆ ಗುಣಮಟ್ಟ ಮಾಡುವಂತಿಲ್ಲ. ಕೈಯಿಂದ ಹಣ ಹಾಕುವಂತಿಲ್ಲ ಎಂಬಂತಹ ಸ್ಥಿತಿ. ಹೆಚ್ಚುವರಿ ಅನುದಾನ ಈ ಗ್ಯಾರಂಟಿಯುಗದಲ್ಲಿ ಈ ಸರಕಾರದಿಂದ ತರುವುದು ಹರಸಾಹಸವೇ ಸರಿ. ಒಟ್ಟಿನಲ್ಲಿ ಸಾರ್ವಜನಿಕರ ಆವಶ್ಯಕತೆಗೆ ಜನಪ್ರತಿನಿಧಿಗಳು ಮಂಜೂರು ಮಾಡಿಸಿದ ದೊಡ್ಡ ಮೊತ್ತದ ಅನುದಾನ ಸದುಪಯೋಗ ಮಾಡುವಲ್ಲಿ ಅಧಿಕಾರಿಗಳು ಸೋತಿದ್ದಾರೆ.
ನಿರ್ವಹಣೆಯಿಲ್ಲ, ಎಲ್ಲೆಡೆ ಹೊಂಡಗುಂಡಿ
ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ರಿಂಗ್‌ರೋಡ್ ಅನಂತರದ ದಿನಗಳಲ್ಲಿ ನಿರ್ವಹಣೆ ಕಾಣದೆ ವರ್ಷಗಳೇ ಸಂದುಹೋಗಿತ್ತು. ಹೊಸ ಕಾಮಗಾರಿಗೆ ಶಿಲಾನ್ಯಾಸವಾದದ್ದು ಗಮನಿಸಿದರೆ ಇಷ್ಟು ಹೊತ್ತಿಗೆ ರಸ್ತೆ ಕಾಂಕ್ರೀಟ್‌ನಿಂದ ಪಳಪಳ ಹೊಳೆಯಬೇಕಿತ್ತು. ಆದರೆ, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.
ಈಗ ಅದು ಹೊಂಡಗುಂಡಿ ರೋಡು ಕುಂದಾಪುರ ರಿಂಗ್ ರೋಡು ಎಂಬಂತಾಗಿದೆ. ಒಂದು ಮಳೆ ಬಿದ್ದರೆ ಸಾಕು ನೀರು ತುಂಬಿದ ಹೊಂಡದ ದುರವಸ್ಥೆಯಿಂದ ಸಂಚಾರವೇ ಸಾಧ್ಯವಾಗುತ್ತಿಲ್ಲ. ಜತೆಗೆ ಪೈಪ್‌ಲೈನ್ ಕಾಮಗಾರಿಯೂ ನಡೆದು ರಸ್ತೆ ಗಬ್ಬೆದ್ದು ಹೋಗಿದೆ.
ಹೇಗಿರಲಿದೆ ರಿಂಗ್ ರೋಡ್?
- 915 ಮೀ. ಹಾಗೂ 1,110 ಮೀ.ನಂತೆ ತಲಾ 9.98 ಕೋ.ರೂ. ವೆಚ್ಚದಲ್ಲಿ ಒಟ್ಟು 19.96 ಕೋ. ರೂ. ಗಳಲ್ಲಿ ಕಾಮಗಾರಿ ನಡೆಯಲಿದೆ.
- ಒಂದು ಬದಿಯಲ್ಲಿ ಚರಂಡಿ, ಇನ್ನೊಂದು ಬದಿಯಲ್ಲಿ ತಡೆಗೋಡೆ ಇರಲಿದ್ದು ಪಾದಚಾರಿ ಪಥ ಇರಲಿದೆ.
- ಕಾಮಗಾರಿ ಎರಡು ಹಂತದಲ್ಲಿ ಗುತ್ತಿಗೆಯಾಗಿದೆ. ಈ ಪೈಕಿ ಒಬ್ಬರು ಸ್ವಲ್ಪಮಟ್ಟಿನ ಕಾಮಗಾರಿ ನಡೆಸಿದ್ದಾರೆ. ಇನ್ನೊಬ್ಬರು ಆರಂಭಿಸಿಲ್ಲ.
-ಲಕ್ಷ್ಮೀ ಮಚ್ಚಿನ