ಸುಮಾರು ಎರಡು ವರ್ಷಗಳೇ ಆಗಿತ್ತು, ಶ್ರೀನಗರ ಕಿಟ್ಟಿ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ. ಬಿಡುಗಡೆಯಾದ ಕೊನೆಯ ಚಿತ್ರ ಎಂದರೆ ಅದು “ನಮಸ್ತೇ ಮೇಡಮ್’. ಅದಾದ ನಂತರ ಅವರ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಈಗ ಇದೇ ತಿಂಗಳ 16ರಂದು ಕಿಟ್ಟಿ ಅಭಿನಯದ “ಸಿಲಿಕಾನ್ ಸಿಟಿ’ ಬಿಡುಗಡೆಯಾಗುತ್ತಿದೆ. ಇಷ್ಟಕ್ಕೂ ಈ ಗ್ಯಾಪ್‌ನಲ್ಲಿ ಕಿಟ್ಟಿ ಏನು ಮಾಡುತ್ತಿದ್ದರು ಎಂದರೆ, “ಬೈಟೆ ಕೊ ಕಾಮ್ ನಹೀ, ದೋ ರುಪಾಯಿ ಕಾ ಕಮಾಯಿ ನಹಿ …’ ಎಂದು ನಗುತ್ತಾರೆ ಅವರು.
ಕಿಟ್ಟಿ ಕಳೆದೆರೆಡು ವರ್ಷಗಳಿಂದ ಬಿಝಿಯಾಗಿದ್ದರು. ಅವರ ಅಭಿನಯದ ಒಂದಲ್ಲ ಒಂದು ಸಿನಿಮಾಗಳು ಸೆಟ್ಟೇರುತ್ತಲೇ ಇದ್ದವು. ಚಿತ್ರೀಕರಣ ನಡೆಯುತ್ತಲೇ ಇದ್ದವು. ಆದರೆ, ಯಾವೊಂದು ಚಿತ್ರ ಬಿಡುಗಡೆ ಮಾತ್ರ ಆಗಲಿಲ್ಲ ಎಂಬ ವಿಚಿತ್ರ. ಲೆಕ್ಕ ಹಾಕಿದರೆ, ಕಿಟ್ಟಿ ಅಭಿನಯದ ಎಂಟು ಚಿತ್ರಗಳು ವಿವಿಧ ಹಂತಗಳಲ್ಲಿ ನಿಂತಿವೆ. “ಅನಾರ್ಕಲಿ’, “ಪಾಪು’, “ಸುಬ್ರಹ್ಮಣಿ’, “ದ್ರೋಹ’, “ಶಂಕ್ರ’, “ಏ ರಾಮ್’, “ಕೆಟ್ಟವನು’ ಮತ್ತು “ಗೀತಾಂಜಲಿ’ ಚಿತ್ರಗಳು ಶುರುವಾಗಿ ಕಾರಣಾಂತರಗಳಿಂದ ಬಿಡುಗಡೆಯಾಗಿಲ್ಲ.
ಕೆಲವು ಚಿತ್ರಗಳ ಒಂದು ಹಾಡು ಚಿತ್ರೀಕರಣಗೊಂಡರೆ ಮುಗಿದಂತೆ. ಇನ್ನೂ ಕೆಲವು ಚಿತ್ರಗಳಿಗೆ ಕೆಲವು ದಿನಗಳ ಚಿತ್ರೀಕರಣ ಬಾಕಿ ಇದೆ. ಒಟ್ಟಾರೆ ಒಂದಲ್ಲ ಒಂದು ಕಾರಣಗಳಿಗೆ ಈ ಚಿತ್ರಗಳು ನಿಂತಿವೆ. ಈ ಎಲ್ಲಾ ಚಿತ್ರಗಳಿಂದ ಕಚ್ಚಿಕೊಂಡಿರುವ ಮೊತ್ತವೇ ಸುಮಾರು 16 ಕೋಟಿಯಷ್ಟು ಆಗಬಹುದು ಎಂದು ಅಂದಾಜಿಸುತ್ತಾರೆ ಅವರು. ಈ ಮಧ್ಯೆ ಅವರೇನು ಮಾಡುತ್ತಿದ್ದರು? ಎಂಬ ಪ್ರಶ್ನೆ ಸಹಜ. “ಬೈಟೆ ಕೊ ಕಾಮ್ ನಹೀ, ದೋ ರುಪಾಯಿ ಕಾ ಕಮಾಯಿ ನಹಿ ಎನ್ನುತ್ತಾರಲ್ಲ ಹಾಗೆ ಪರಿಸ್ಥಿತಿ.
ಒಂದಲ್ಲ ಒಂದು ಕೆಲಸಗಳಿವೆ. ಆದರೆ, ಹೊಸ ಚಿತ್ರಗಳನ್ನ ಒಪ್ಪೋಣ ಅಂದರೆ, ಬಾಕಿ ಇರುವ ಚಿತ್ರಗಳ ತಂಡದವರು ಬಂದು ಚಿತ್ರೀಕರಣ ಮಾಡೋಣ ಎಂದು ಬಿಟ್ಟರೆ? ಅದೊಂಥರಾ ಹಿಂಸೆ. ಒಂದೊಂದು ಚಿತ್ರಕ್ಕೆ ಒಂದೊಂದು ತರಹ ಗೆಟಪ್‌ಗ್ಳಿರುತ್ತವೆ. ಅದನ್ನು ಮೇಂಟೇನ್ ಮಾಡಬೇಕು. ಬದಲಾದರೆ ಆ ಚಿತ್ರಗಳಿಗೆ ಸಮಸ್ಯೆ. ಅದೇ ಕಾರಣಕ್ಕೆ ಹೊಸ ಚಿತ್ರಗಳನ್ನು ಒಪ್ಪಲಿಕ್ಕೂ ಆಗದೆ, ಹಳೆಯ ಚಿತ್ರಗಳನ್ನು ಬಿಡಲಿಕ್ಕೂ ಆಗದೆ ಸುಮ್ಮನೆ ಕೂತಿದ್ದೆ. ಗೆಲುವು-ಸೋಲು ಆಮೇಲೆ, ಮೊದಲು ಚಿತ್ರಗಳನ್ನು ಮುಗಿಸಿದರೆ ಸಾಕು’ ಎನ್ನುತ್ತಾರೆ ಅವರು.
ಹಾಗಾದರೆ, ಆ ಚಿತ್ರಗಳ ಗತಿಯೇನು ಎಂದರೆ? “ಒಬ್ಬೊಬ್ಬರನ್ನೇ ಕರೆದು ಮಾತಾಡಿಸುತ್ತೇನೆ. ಹೇಗಾದರೂ ಮಾಡಿ ಬಿಡುಗಡೆ ಮಾಡಿಸುವ ಪ್ರಯತ್ನ ಮಾಡುತ್ತೇನೆ’ ಎನ್ನುತ್ತಾರೆ ಅವರು. ಈ ಗ್ಯಾಪ್‌ನಲ್ಲಿ ಅವರು ಒಂದಿಷ್ಟು ಸುತ್ತಾಟ ನಡೆಸಿದರಂತೆ. ಅದರ ಜೊತೆಗೆ “ಮೋಡ ಕವಿದ ವಾತಾವರಣ’ ಎಂಬ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕಾಗಿಯೇ ಉದ್ದಗೂದಲು, ಗಡ್ಡ ಬಿಟ್ಟಿದ್ದಾರೆ. “ಚಿತ್ರ ತಡವಾಗುವುದಕ್ಕೆ ಸ್ವಲ್ಪ ಸಮಯವಿದೆ. ಟೆಸ್ಟ್ ಶೂಟ್ ಮಾಡುವ ಯೋಚನೆ ಇದೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸುತ್ತಿದ್ದಾರೆ’ ಎಂದು ವಿವರ ಕೊಡುತ್ತಾರೆ ಕಿಟ್ಟಿ.