Advertisement

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

12:44 PM Nov 08, 2024 | Team Udayavani |

ಅದು ಯಾರದ್ದೇ ಸಿನಿಮಾವಾಗಿರಲಿ, ಅದು ಗೆಲ್ಲಬೇಕು.. ಸದ್ಯ ಕನ್ನಡ ಚಿತ್ರರಂಗದ ಮಂದಿ ಇಂತಹ ಒಂದು ಮನಸ್ಥಿತಿ, ಹಾರೈಕೆಯೊಂದಿಗೆ ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣ ಒಂದು ಸಿನಿಮಾ ಇದ್ದರೆ ಅದು ಹತ್ತು ಸಿನಿಮಾಗಳಿಗೆ ಹೊಸ ದಾರಿ ತೆರೆಯುತ್ತದೆ. ಅದೇ ಕಾರಣದಿಂದ ಪ್ರತಿ ಶುಕ್ರವಾರ ಹೊಸ ನಿರೀಕ್ಷೆ. ಅಂತಹ ನಿರೀಕ್ಷೆಯೊಂದಿಗೆ ತೆರೆಕಂಡಿರುವ ಚಿತ್ರ “ಬಘೀರ’.

Advertisement

ಶ್ರೀಮುರಳಿ ನಾಯಕರಾಗಿರುವ ಈ ಚಿತ್ರವನ್ನು ಪ್ರೇಕ್ಷಕರು ಇಷ್ಟಪಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೂಂದು ಗೆಲುವು ಸಿಕ್ಕಿದೆ. ಹಬ್ಬದ ಸಮಯದಲ್ಲಿ ತೆರೆಕಂಡ ಈ ಚಿತ್ರ ಕಲೆಕ್ಷನ್‌ ನಲ್ಲೂ ನಿರ್ಮಾಪಕರ ಮೊಗದಲ್ಲಿ ನಗು ತಂದಿದೆ. ಇತ್ತೀಚೆಗೆ ಈ ಸಂಭ್ರಮವನ್ನು ಚಿತ್ರತಂಡ ಸಕ್ಸಸ್‌ಮೀಟ್‌ ಮೂಲಕ ಆಚರಿಸಿದೆ.

ನಟ ಶ್ರೀಮುರಳಿ ಈ ಗೆಲುವಿನಿಂದ ಹೆಚ್ಚೇ ಖುಷಿಯಾಗಿದ್ದಾರೆ. “ನನ್ನ ಮೂರು ವರ್ಷಗಳ ಶ್ರಮಕ್ಕೆ ಪ್ರತಿಫ‌ಲ ಸಿಕ್ಕಿದೆ. ಈ ಗೆಲುವನ್ನು ಅಭಿಮಾನಿಗಳಿಗೆ ಅರ್ಪಿಸುತ್ತೇನೆ. ಅವರಿಂದಲೇ ಈ ಗೆಲುವು ಸಾಧ್ಯವಾಗಿರುವುದು. ಚಿತ್ರ ಬಿಡುಗಡೆಯಾದ ದಿನದಿಂದ ಅವರು ತೋರುತ್ತಿರುವ ಒಲವು. ಈ ಚಿತ್ರದ ಗೆಲುವು. ಇನ್ನೂ ಈ ಯಶಸ್ಸಿಗೆ ನಾನೊಬ್ಬ ಮಾತ್ರ ಕಾರಣನಲ್ಲ. ಇಡೀ ತಂಡದ ಶ್ರಮದಿಂದ ಈ ಯಶಸ್ಸು ದೊರಕಿದೆ. ಅದರಲ್ಲಿ ಮುಖ್ಯವಾದವರು, ಯಾವುದೇ ಕೊರತೆ ಬಾರದ ಹಾಗೆ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕ ವಿಜಯ್‌ ಕಿರಗಂದೂರು ಹಾಗೂ ಪ್ರಶಾಂತ್‌ ನೀಲ್‌ ಅವರ ಕಥೆಯನ್ನು ಮನಮುಟ್ಟುವಂತೆ ನಿರ್ದೇಶಿಸಿರುವ ಡಾ.ಸೂರಿ. ಈ ಚಿತ್ರದ ಛಾಯಾಗ್ರಹಣ ಹಾಗೂ ಸಂಗೀತದ ಬಗ್ಗೆ ಕೂಡ ಉತ್ತಮ ಮಾತುಗಳು ಕೇಳಿ ಬರುತ್ತಿದೆ. ಛಾಯಾಗ್ರಾಹಕ ಎ.ಜೆ.ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಸೇರಿದಂತೆ ಎಲ್ಲಾ ತಂತ್ರಜ್ಞರಿಗೆ ಹಾಗೂ ಸಹ ಕಲಾವಿದರಿಗೆ ಧನ್ಯವಾದ ಹೇಳುತ್ತೇನೆ. ಹತ್ತು ವರ್ಷಗಳ ಹಿಂದೆ ಡಾ. ಸೂರಿ ಅವರ ಜೊತೆಗೆ ಒಂದು ಚಿತ್ರದ ಕುರಿತು ಮಾತನಾಡಿದ್ದೆ. ಆ ಚಿತ್ರವನ್ನು ಸೂರಿ ಅವರು ಬೇಗ ಆರಂಭಿಸಲಿ’ ಎಂದರು.

ನಿರ್ದೇಶಕ ಡಾ.ಸೂರಿ ಮಾತನಾಡಿ, ಇದು ನಮ್ಮ ನಿರೀಕ್ಷೆಗೂ ಮೀರಿದ ಗೆಲುವು. ಹಬ್ಬದ ಸಮಯದಲ್ಲಿ ಇಷ್ಟು ಜನರು ಬಂದು ನಮ್ಮ ಸಿನಿಮಾ ನೋಡಿ ಪ್ರೋತ್ಸಾಹಿಸಿರುವುದು ನಿಜಕ್ಕೂ ಸಂತೋಷವಾಗಿದೆ. ಅವರೆಲ್ಲರಿಗೂ ನಾನು, ನನ್ನ ತಂಡ ಚಿರಋಣಿ. ನನ್ನ ಮೇಲೆ ನಂಬಿಕೆಯಿಟ್ಟು ಬಿಗ್‌ ಬಜೆಟ್‌ ನ ಚಿತ್ರ ನಿರ್ದೇಶಿಸಲು ಅವಕಾಶ ನೀಡಿದ ನಿರ್ಮಾಪಕ ವಿಜಯ್‌ ಕಿರಗಂದೂರು ಅವರಿಗೆ, ಒಳ್ಳೆಯ ಕಥೆ ಕೊಟ್ಟ ಪ್ರಶಾಂತ್‌ ನೀಲ್‌ ಅವರಿಗೆ, ಬಘೀರನ ಪಾತ್ರಕ್ಕೆ ಜೀವ ತುಂಬಿದ ಮುರಳಿ ಅವರಿಗೆ ಹಾಗೂ ಇಡೀ ತಂಡಕ್ಕೆ ನನ್ನ ಧನ್ಯವಾದ ಎಂದರು.

Advertisement

ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌, ಛಾಯಾಗ್ರಾಹಕ ಎ.ಜೆ.ಶೆಟ್ಟಿ, ಸಂಕಲನಕಾರ ಪ್ರಣವ್‌ ಶ್ರೀಪ್ರಸಾದ್‌, ಕಲಾ ನಿರ್ದೇಶಕ ರವಿ ಸಂತೆಹೆಕ್ಲು ಸೇರಿದಂತೆ ಅನೇಕ ತಂತ್ರಜ್ಞರು ಹಾಗೂ ಅಚ್ಯುತ ಕುಮಾರ್‌, ಗರುಡರಾಮ್, ರಘು ರಾಮನಕೊಪ್ಪ ಮುಂತಾದ ಕಲಾವಿದರು ಬಘೀರ ಗೆಲುವನ್ನು ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next