Advertisement
ಸಂಸದ ಉದಾಸಿ ಸ್ಪರ್ಧೆಗೆ ಹಿಂದೇಟು ಹಾಕಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಹಲವು ಮಂದಿ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ವಿಧಾನಸಭೆ ಚುನಾವಣೆಯಲ್ಲಿ ಅದ್ಭುತ ಗೆಲುವು ಸಾಧಿ ಸಿರುವ ಕಾಂಗ್ರೆಸ್‌ನಲ್ಲೂ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಿದ್ದು, ಹಿರಿಯರು-ಕಿರಿಯರು ಸೇರಿ ಹೊಸ ಮುಖಗಳ ಹೆಸರು ಕೇಳಿಬರುತ್ತಿದೆ.
ಸಂಸದ ಉದಾಸಿ ಸ್ಪ ರ್ಧಿಸುವುದಿಲ್ಲ ಎಂಬುದು ಪಕ್ಕಾ ಆಗುತ್ತಿದ್ದಂತೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ಹಾವೇರಿ ಹಾಗೂ ಗದಗ ಜಿಲ್ಲೆಯ ಹಿರಿಯ, ಕಿರಿಯ ಹಾಗೂ ಹೊಸ ಮುಖಗಳು ಈ ಕ್ಷೇತ್ರದತ್ತ ಚಿತ್ತ ನೆಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಮಾಜಿ ಸಚಿವ ಬಿ.ಸಿ. ಪಾಟೀಲ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕಾಂತೇಶ, ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಹಾವೇರಿಯ ಮಂಜುನಾಥ ಮಡಿವಾಳರ, ರಾಣೆಬೆನ್ನೂರಿನ ಕೆ. ಶಿವಲಿಂಗಪ್ಪ, ನ್ಯಾಯವಾದಿ ಸಂದೀಪ ಪಾಟೀಲ, ಹುಬ್ಬಳ್ಳಿಯ ಡಾ|ಮಹೇಶ ನಾಲವಾಡ, ಗದಗ ಜಿಲ್ಲೆಯ ಡಾ| ಶೇಖರ ಸಜ್ಜನರ, ಕರಬಸಪ್ಪ ಹಂಚಿನಾಳ ಹೀಗೆ ಅನೇಕರ ಹೆಸರು ಕೇಳಿಬರುತ್ತಿದೆ.
Related Articles
ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಗ್ಗರಿಸಿದ್ದು, ಈ ಬಾರಿ ಶತಾಯಗತಾಯ ಮತ್ತೆ ಕ್ಷೇತ್ರ ಕೈವಶಕ್ಕೆ ತಂತ್ರಗಾರಿಕೆ ಹೆಣೆಯುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು-ಗ್ಯಾರಂಟಿಗಳ ಜಾರಿ ಕಾಂಗ್ರೆಸ್ಸಿಗರಲ್ಲಿ ಹುಮ್ಮಸ್ಸು ಹೆಚ್ಚಿಸಿದೆ. ಹೀಗಾಗಿ ಈ ಕ್ಷೇತ್ರದಿಂದ ಕಣಕ್ಕಿಳಿಯಲು ಹಲವು ಕಾಂಗ್ರೆಸ್ ಆಕಾಂಕ್ಷಿಗಳು ಮುಂದಾಗಿದ್ದಾರೆ. ಇದರಲ್ಲಿ ಪ್ರಮುಖವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಿರಹಟ್ಟಿ ಕ್ಷೇತ್ರದ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅವರ ಪುತ್ರ ಆನಂದಸ್ವಾಮಿ ಗಡ್ಡದೇವರಮಠ, ಕೆಪಿಸಿಸಿ ಪದವೀಧರ ಘಟಕದ ರಾಜ್ಯಾಧ್ಯಕ್ಷ ಡಾ| ಆರ್.ಎಂ. ಕುಬೇರಪ್ಪ, ಹಾವೇರಿ ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಅವರ ಹೆಸರು ಮುನ್ನೆಲೆಗೆ ಬಂದಿದೆ.
Advertisement
ಬಿಜೆಪಿ ರಣತಂತ್ರಬಿಜೆಪಿ ಭದ್ರಕೋಟೆ ಎಂದು ಕರೆಯಿಸಿಕೊಳ್ಳುವ ಈ ಕ್ಷೇತ್ರದಲ್ಲಿ ಮತ್ತೆ ಹಿಡಿತ ಸಾಧಿ ಸಿ ಕ್ಷೇತ್ರ ಕೈತಪ್ಪಿ ಹೋಗದಂತೆ ನೋಡಿಕೊಳ್ಳಲು ಬಿಜೆಪಿ ವರಿಷ್ಠರು ರಣತಂತ್ರ ಹೆಣೆಯುತ್ತಿದ್ದಾರೆ. ಲೋಕಸಭೆ ಟಿಕೆಟ್ ಆಕಾಂಕ್ಷಿಯಲ್ಲ ಎನ್ನುತ್ತಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಒಂದು ವೇಳೆ ಬಿಜೆಪಿ ವರಿಷ್ಠರು ಸೂಚಿಸಿದರೆ ಕಣಕ್ಕಿಳಿದರೂ ಅಚ್ಚರಿ ಇಲ್ಲ ಎಂಬ ಮಾತುಗಳು ಬಿಜೆಪಿ ವಲಯದಲ್ಲೇ ಕೇಳಿಬರುತ್ತಿದೆ. ಈ ನಡುವೆ ಮತ್ತೆ ಬಿಜೆಪಿ ಪಾಳೆಯ ಸೇರಿಕೊಂಡಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್ ಹೆಸರು ಕೂಡ ಈ ಲೋಕಸಭೆ ಕ್ಷೇತ್ರಕ್ಕೆ ಕೇಳಿಬರುತ್ತಿದೆ. ಅಲ್ಲದೇ ಪಕ್ಷದ ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಕಳೆದ ವಿಧಾನಸಭೆ ಚುನಾವಣೆ ಕಣದಿಂದ ದೂರ ಉಳಿದಿದ್ದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ತಮ್ಮ ಪುತ್ರ ಕಾಂತೇಶಗೆ ರಾಜಕೀಯ ನೆಲೆ ಕಲ್ಪಿಸಿಕೊಡಲು ಯತ್ನಿಸುತ್ತಿದ್ದು, ಕ್ಷೇತ್ರಾದ್ಯಂತ ಸಂಚಾರ ನಡೆಸಿದ್ದಾರೆ. ಈ ಎಲ್ಲ ಬೆಳವಣಿಗೆ ನಡುವೆ ಯಾರಿಗೆ ಟಿಕೆಟ್ ನೀಡಿದರೂ ಸ್ಥಳೀಯರಿಗೆ ಅವಕಾಶ ಕಲ್ಪಿಸಿಕೊಡಬೇಕೆಂಬ ಒತ್ತಾಯ ಹೆಚ್ಚುತ್ತಿದೆ.