ಬೆಂಗಳೂರು: ರಾಜ್ಯದಲ್ಲಿ ಕೆಲ ದಿನ ವಿರಾಮ ನೀಡಿದ್ದ ಮಳೆ ಮತ್ತೆ ಅಬ್ಬರಿಸಲು ಶುರುವಾಗಿದ್ದು, ಮುಂದಿನ ನಾಲ್ಕೈದು ದಿನ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.
ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಅಬ್ಬರ ತುಸು ಹೆಚ್ಚಿರಲಿದ್ದು, ಅದರಲ್ಲೂ ಕೊಡಗಿನಲ್ಲಿ ಮಂಗಳವಾರದಿಂದ ಮೂರು ದಿನ “ಆರೆಂಜ್ ಅಲರ್ಟ್’ (11.56 ಸೆಂ.ಮೀ.ನಿಂದ 20.44 ಸೆಂ.ಮೀ.) ನೀಡಲಾಗಿದೆ.
ಉಳಿದಂತೆ ದಕ್ಷಿಣ ಭಾಗದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ “ಯೆಲ್ಲೋ ಅಲರ್ಟ್’ (6.45 ಸೆಂ.ಮೀ.ನಿಂದ 11.55 ಸೆಂ.ಮೀ.) ಘೋಷಿಸಲಾಗಿದೆ. ಉತ್ತರ ಒಳನಾಡಿನಲ್ಲಿ ಕೂಡ ಮಳೆ ನಿರೀಕ್ಷೆ ಇದೆ. ಆದರೆ, ದಕ್ಷಿಣ ಭಾಗಕ್ಕೆ ಹೋಲಿಸಿದರೆ ತುಸು ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ತುಮಕೂರು, ಚಿಕ್ಕಮಗಳೂರು, ಹಾಸನ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.
ಸೆಪ್ಟೆಂಬರ್ 6ರಂದು ರಾಜ್ಯದ ಬಹುತೇಕ ಎಲ್ಲ ಭಾಗಕ್ಕೂ “ಯೆಲ್ಲೋ ಅಲರ್ಟ್’ ವ್ಯಾಪಿಸಿದೆ.
ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಹಾವೇರಿ ಮತ್ತು ಧಾರವಾಡ ಹೊರತುಪಡಿಸಿ ಉಳಿದೆಡೆ ಧಾಕಾಕಾರ ಮಳೆಯಾಗುವ ಸೂಚನೆ ಇದೆ. ಇನ್ನು ಭಾನುವಾರ ಬೆಂಗಳೂರು ನಗರ, ಗ್ರಾಮಾಂತರ ಸೇರಿ ವಿವಿಧೆಡೆ ಮಳೆ ಸುರಿದಿದೆ.