ಲಕ್ನೋ: ಕಾನೂನು ಉಲ್ಲಂಘಿಸುವ ರಾಜಕಾರಣಿಗಳು, ಕ್ರಿಮಿನಲ್ಸ್ ಹಾಗೂ ಸ್ವಯಂಘೋಷಿತ ಗೋ ರಕ್ಷಕರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಪ್ರದೇಶದ ನೂತನ ಪೊಲೀಸ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಸುಲ್ಖಾನ್ ಸಿಂಗ್ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ಒಂದು ವೇಳೆ ಕ್ರಿಮಿನಲ್ಸ್ ಗಳಾಗಲಿ, ಸ್ವಯಂಘೋಷಿತ ಗೋರಕ್ಷಕರಾಗಲಿ ಕಾನೂನು ಚೌಕಟ್ಟು ದಾಟಿ ಗೂಂಡಾಗಿರಿ ನಡೆಸಿದರೆ ಜಾಗ್ರತೆ, ರಾಜ್ಯದಲ್ಲಿ ಗೂಂಡಾಗಿರಿಯನ್ನು ನಿರ್ನಾಮ ಮಾಡುವುದಾಗಿ ಶಪಥಗೈದಿದ್ದಾರೆ.
ಕ್ರಿಮಿನಲ್ ಚಟುವಟಿಕೆ ಸೇರಿದಂತೆ ಕಾನೂನು ಬಾಹಿರ ಕೃತ್ಯ ಯಾರೇ ನಡೆಸಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಖಡಕ್ ಆದೇಶ ನೀಡಿರುವುದಾಗಿ ಸಿಂಗ್ ತಿಳಿಸಿದ್ದಾರೆ.
ನಮಗೆ ಮುಖ್ಯಮಂತ್ರಿಗಳೇ ಆದೇಶ ನೀಡಿದ್ದಾರೆ, ಹಾಗಾಗಿ ಬೇರೆ ಯಾರಿಗೂ ತಲೆಬಾಗಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದಾರೆ.ಕಾನೂನು ಉಲ್ಲಂಘಿಸುವವರು ಯಾವುದೇ ಒಂದು ನಿರ್ದಿಷ್ಟ ಪಕ್ಷದವರು ಎಂಬುದು ಮುಖ್ಯವಲ್ಲ, ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.