ಪಣಂಬೂರು: ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದ ಆಶ್ರಯದಲ್ಲಿ 3 ದಿನಗಳ ಪ್ರೀಮಿಯರ್ ಸರ್ಫಿಂಗ್ ಸ್ಪರ್ಧೆಯನ್ನು ಪಣಂಬೂರು ಬೀಚ್ ನಲ್ಲಿ ಮಂತ್ರ ಸರ್ಫ್ ಕ್ಲಬ್ ಆಯೋಜಿಸಿದ್ದು, ರವಿವಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಸರ್ಫಿಂಗ್ ವಾತಾವರಣದ ಬಗ್ಗೆ ಸರ್ಫಿಂಗ್ ಪಟುಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಮತ್ತೆ ಮಂಗಳೂರಿಗೆ ಬರುತ್ತೇವೆ ಎಂದು ಹೇಳಿದರು. ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರವಾಸಿಗರೂ ಸರ್ಫಿಂಗ್ ಸ್ಪರ್ಧೆಯನ್ನು ಕಂಡು ರೋಮಾಂಚನ ಗೊಂಡರು. ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಚೆನ್ನೈ ಮೂಲದ ಟಿಟಿ ಗ್ರೂಪ್, ಗ್ಲೋಬಲ್ ಆಕ್ಷನ್ ಕೆಮರಾ ಬ್ರಾಂಡ್ ಗೋ ಪ್ರೋ ಆಕ್ಷನ್ ಸಹಕಾರ ನೀಡಿತ್ತು.
ಪಂದ್ಯಾವಳಿಯ ಅನಂತರ ಮಾತನಾಡಿದ ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಅರುಣ್ ವಾಸು ಮಾತನಾಡಿ, “ನಾವು ಮಂಗಳೂರಿನಲ್ಲಿ ಸ್ಪರ್ಧಿಸುತ್ತಿರುವ ಸರ್ಫರ್ ಗಳ ಗುಣಮಟ್ಟದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಎಲ್‌ಎ ಒಲಿಂಪಿಕ್ಸ್‌ನ ದೃಷ್ಟಿಯಲ್ಲಿ ನಾವು ಯುವ ಮತ್ತು ಮುಂಬರುವ ಸಫìರ್‌ಗಳನ್ನು ಗುರುತಿಸಲು ಶ್ರಮಿಸುತ್ತಿದ್ದೇವೆ. ಸರ್ಫಿಂಗ್ ಕ್ರೀಡೆಯನ್ನು ಬೆಳೆಸುವಲ್ಲಿ ದ.ಕ. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸಹಾಯ ಮಾಡುತ್ತಿದೆ ಮತ್ತು ಹೊಸ ಪ್ರತಿಭೆಗಳನ್ನು ಪತ್ತೆಹಚ್ಚಲು ಮತ್ತು ತರಬೇತಿ ನೀಡಲು ನಮಗೆ ಅನುವು ಮಾಡಿಕೊಟ್ಟಿದೆ ಎಂದು ಶ್ಲಾಘಿಸಿದರು.
ಮಹಿಳೆಯರ ಓಪನ್ ಸರ್ಫ್ ಸ್ಪರ್ಧೆಯಲ್ಲಿ 16 ವರ್ಷ ವಯಸ್ಸಿನ ಗೋವಾದ ಶುಗರ್ ಬನಾರ್ಸೆ ಗೆಲುವಿಗೆ ಸಂತಸ ವ್ಯಕ್ತ ಪಡಿಸಿ, ಮಹಿಳಾ ಮುಕ್ತ ಸರ್ಫ್ ವಿಭಾಗದಲ್ಲಿ ಭಾಗವಹಿಸಲು ನನಗೆ ಅವಕಾಶ ಮಾಡಿಕೊಟ್ಟ ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ಮತ್ತು ತೀರ್ಪುಗಾರರಿಗೆ ನಾನು ಮತ್ತು ಕೃತಜ್ಞತೆ ಸಲ್ಲಿಸುತ್ತೇನೆ. ಸಮುದ್ರ ಉಗ್ರವಾಗಿದ್ದರೂ ನನ್ನ ತರಬೇತಿ ಸಹಕಾರಿಯಾಯಿತು ಎಂದರು.
ಕಠಿಣ ತರಬೇತಿಯಿಂದ ಗೆಲುವು
ಪ್ರಶಸ್ತಿ ಗಳಿಸಿರುವ ಕನ್ನಡಿಗ ರಮೇಶ್ ಬುಧಿಯಾಲ್ ಮಾತನಾಡಿ, ನನಗೆ ತುಂಬಾ ಸಂತೋಷವಾಗಿದೆ. ರಾಷ್ಟ್ರಮಟ್ಟದಲ್ಲಿ ಚಾಂಪಿಯನ್ ಆಗಿರುವುದು ದೊಡ್ಡ ಅನುಭವ. ಪ್ರಬಲ ಸ್ಪರ್ಧೆಯ ನಡುವೆ ಗೆಲುವು ಲಭಿಸಿರುವುದು ಕಠಿನ ತರಬೇತಿಯ ಫಲವಾಗಿದೆ ಎಂದರು.