ಶ್ರೀನಗರ : “ಇಸ್ಲಾಂ ಗಾಗಿ ನಡೆಯುತ್ತಿರುವ ಹೋರಾಟದಲ್ಲಿ ನೀವು ಮಧ್ಯ ಪ್ರವೇಶಿಸಿದರೆ ನಾವು ನಿಮ್ಮ ಶಿರಚ್ಛೇದನ ಮಾಡಿ ಲಾಲ್ ಚೌಕದಲ್ಲಿ ನೇತು ಹಾಕುತ್ತೇವೆ’ ಎಂದು ಹಿಜ್‌ಬುಲ್ ಮುಜಾಹಿದೀನ್ ಉಗ್ರ ಸಂಘಟನೆ ಹುರಿಯತ್ ನಾಯಕರಿಗೆ ಬೆದರಿಕೆ ಹಾಕಿದೆ.
ಹಿಜ್‌ಬುಲ್ ನಾಯಕ ಝಾಕೀರ್ ಮೂಸಾ ಬಿಡುಗಡೆ ಮಾಡಿರುವ ಆಡಿಯೋ ಸಂದೇಶದಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿ ಹುರಿಯತ್ ನಾಯಕರಿಗೆ ಈ ಬೆದರಿಕೆ ಹಾಕಿದ್ದಾನೆ. ಸಾಮಾಜಿಕ ಜಾಲ ತಾಣಗಳಲ್ಲಿ ಈ ಆಡಿಯೋ ವೈರಲ್ ಆಗಿದೆ.
“ಸೋಗಲಾಡಿತನದ ಎಲ್ಲ ಹುರಿಯತ್ ನಾಯಕರಿಗೆ ನಾನು ಎಚ್ಚರಿಕೆ ಕೊಡುತ್ತಿದ್ದೇನೆ. ನೀವು ಇಸ್ಲಾಮಿಕ್ ಹೋರಾಟದಲ್ಲಿ ತಲೆ ಹಾಕಬಾರದು. ಹಾಕಿದಿರೆಂದರೆ ನಿಮ್ಮ ತಲೆಗಳನ್ನು ಕಡಿದು ಲಾಲ್ ಚೌಕದಲ್ಲಿ ನೇತು ಹಾಕುತ್ತೇನೆ’ ಎಂದು ಝಾಕೀರ್ ಮೂಸಾ ಬೆದರಿಕೆ ಒಡ್ಡಿರುವ ಧ್ವನಿ ಆಡಿಯೋ ದಲ್ಲಿ ಕೇಳಿ ಬಂದಿದೆ.
ಹಿಜ್‌ಬುಲ್ ಉಗ್ರವಾದಿ ನಾಯಕರು ಈ ಆಡಿಯೋ ಮೂಲಕ ಕೊಟ್ಟಿರುವ ಸ್ಪಷ್ಟ ಸಂದೇಶವೇನೆಂದರೆ, “ನಾವು ಕಾಶ್ಮೀರದಲ್ಲಿ ಶರೀಯತ್ ಜಾರಿಗೆ ತರುವುದಕ್ಕೆ ಹೋರಾಡುತ್ತಿದ್ದೇವೆ; ಕಾಶ್ಮೀರ ಸಮಸ್ಯೆಯನ್ನು ರಾಜಕೀಯ ಹೋರಾಟವೆಂದು ಕರೆದು ಅದನ್ನು ಬಗೆಹರಿಸುವುದಕ್ಕೆ ನಾವು ಸಿದ್ಧರಿಲ್ಲ’ ಎಂಬುದೇ ಆಗಿದೆ.
“ಕಾಶ್ಮೀರದಲ್ಲಿನ ನಮ್ಮ ಹೋರಾಟವು ಇಸ್ಲಾಮ್ ಗಾಗಿ, ಶರೀಯತ್ ಗಾಗಿ ಎಂಬುದನ್ನು ಪ್ರತ್ಯೇಕತಾವಾದಿ ಹುರಿಯತ್ ನಾಯಕರು ಅರ್ಥಮಾಡಿಕೊಳ್ಳಬೇಕು’ ಎಂದು ಮೂಸಾ ಗುಡುಗಿರುವುದು ಆಡಿಯೋದಲ್ಲಿ ಕೇಳಿಬಂದಿದೆ.
ಹುರಿಯತ್ ನಾಯಕರ ಹಿಪಾಕ್ರಸಿ ವಿರುದ್ಧ ಕಾಶ್ಮೀರದ ಜನರು ಒಂದಾಗಬೇಕು ಎಂದು ಮೂಸಾ ಕರೆ ನೀಡಿದ್ದಾನೆ.
“ನಾವೆಲ್ಲರೂ ನಮ್ಮ ಧರ್ಮವನ್ನು (ಇಸ್ಲಾಂ) ಪ್ರೀತಿಸಬೇಕು ಮತ್ತು ನಾವು ಇಸ್ಲಾಂ ಗಾಗಿ ಹೋರಾಡುತ್ತಿರುವುದನ್ನು ಮನಗಾಣಬೇಕು. ಒಂದೊಮ್ಮೆ ಹುರಿಯತ್ ನಾಯಕರು ಹಾಗಲ್ಲವೆಂದು ತಿಳಿದಿದ್ದರೆ ನಾವು “ಆಜಾದಿ ಕಾ ಮತ್‌ಲಬ್ ಕ್ಯಾ – ಲಾ ಇಲಾಹಾ ಇಲ್ ಅಲಾಹಿ’ ಎಂಬ ಘೋಷಣೆಯನ್ನು ಕೇಳುತ್ತಿರುವುದಾದರೂ ಏಕೆ? ಹುರಿಯತ್ ಸಮೂಹದವರು ತಮ್ಮ ರಾಜಕಾರಣಕ್ಕಾಗಿ ಮಸೀದಿಗಳನ್ನು ಬಳಸುವುದು ಏಕೆ?’ ಎಂದು ಮೂಸಾ ಪ್ರಶ್ನಿಸಿದ್ದಾನೆ.