ಹುಬ್ಬಳ್ಳಿ: ವನ್ಯಜೀವಿಗಳ ಕುರಿತು ಸಾಕ್ಷ್ಯಚಿತ್ರ ನಿರ್ಮಾಣ ಹೆಸರಿನಲ್ಲಿ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ಸರಕಾರದ ಬೊಕ್ಕಸಕ್ಕೆ ಹಾನಿ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಹಿರೇಮಠ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಹಾಗೂ ವನ್ಯಜೀವಿ ಸಂಪತ್ತಿನ ಬಗ್ಗೆ ವೈಲ್ಡ್‌ಲೈಫ್ ಕರ್ನಾಟಕ ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ. ಸಾಕ್ಷ್ಯಚಿತ್ರ ತಯಾರಿಸಲು 2014ರಲ್ಲಿ ಕೆಲ ವ್ಯಕ್ತಿಗಳೊಂದಿಗೆ ಅರಣ್ಯ ಇಲಾಖೆ ಒಡಂಬಡಿಕೆ ಮಾಡಿಕೊಂಡಿತ್ತು. ಆದರೆ ಎರಡು ವರ್ಷಗಳಲ್ಲಿ ಮುಗಿಯಬೇಕಾದ ಚಿತ್ರೀಕರಣ ಅವಧಿಯನ್ನು ಮತ್ತೆ ಮುಂದುವರಿಸಲಾಯಿತು.
ಚಿತ್ರೀಕರಣ ಒಪ್ಪಂದದ ಪ್ರಕಾರ ಎಲ್ಲ ಹಕ್ಕುಗಳು ಅರಣ್ಯ ಇಲಾಖೆಗೆ ಒಳಪಟ್ಟಿವೆ. ಆದರೆ ನಿಯಮ ಉಲ್ಲಂಘಿಸಿದ ಅವರು ಲಾಭಕ್ಕಾಗಿ ಚಿತ್ರೀಕರಣದ ಹೆಚ್ಚುವರಿ 400 ಗಂಟೆಗಳ ಫೋಟೇಜನ್ನು ಕಾನೂನು ಬಾಹಿರವಾಗಿ ಫ್ರಾನ್ಸ್ 5, ಜರ್ಮನಿಯ ಸರ್ವಸ್ ಟಿವಿ, ಸ್ವೀಡನ್‌ನ ಎಸ್‌ವಿಟಿ, ಬೆಲ್ಜಿಯಂನ ವಿಆರ್‌ಟಿ, ಡೆನ್ಮಾರ್ಕ್ ನ ಡಿಆರ್, ಎಸ್ಟೊನಿಯಾದ ಇಟಿವಿ, ಕೊರಿಯಾದ ಕೆಬಿಎಸ್, ಭಾರತದಲ್ಲಿ ಡಿಸ್ಕವರಿ, ತೈವಾನ್‌ನ ಪಿಟಿಎಸ್, ಎಸ್‌ಬಿಎಸ್ ಬ್ರಾಡ್‌ಕಾಸ್ಟ್‌ದಿ ಆಸ್ಟೇಲಿಯನ್ ಬ್ರಾಡ್ ಕಾಸ್ಟ್ ಪ್ರೀಮಿಯರ್, ಬಿಬಿಸಿ ಅರ್ಥ್ಗೆ ಮಾರಾಟ ಮಾಡಿದ್ದಾರೆ. ಚಿತ್ರದ ಕಾಪಿರೈಟ್ ಹಾಗೂ ಸಹ ಮಾಲೀಕತ್ವ ಹೊಂದಿದ್ದರೂ ಕರ್ನಾಟಕ ಅರಣ್ಯ ಇಲಾಖೆ ಗಮನಕ್ಕೆ ತಾರದೇ ಚಿತ್ರೀಕರಣದ ಫುಟೇಜ್ ಮಾರಾಟ ಮಾಡಲಾಗಿದೆ. ವೈಲ್ಡ್‌ಲೈಫ್ ಕನ್ಜರ್ವೇಶನ್ ಆ್ಯಕ್ಟ್, ಕಾಪಿರೈಟ್ ಆ್ಯಕ್ಟ್, ನ್ಯಾಷನಲ್ ಟೈಗರ್ ಕನ್ಜರ್ವೇಶನ್ ಆ್ಯಕ್ಟ್, ಫಾರಿನ್ ಕಾಂಟ್ರಿಬ್ಯೂಷನ್ ರೆಗ್ಯುಲೇಶನ್ ಆ್ಯಕ್ಟ್, ಮನಿ ಲಾಂಡರಿಂಗ್ ಆ್ಯಕ್ಟ್, ಪ್ರಿವೆನ್ಶನ್ ಆಫ್ ಕರಪ್ಶನ್ ಆ್ಯಕ್ಟ್ ಉಲ್ಲಂಘನೆಯಾಗಿರುವುದು ಕಂಡು ಬರುತ್ತದೆ ಎಂದು ಆರೋಪಿಸಿದರು. ಚಿತ್ರ ನಿರ್ಮಾಣ ಸಂದರ್ಭದಲ್ಲಿ ಸರಕಾರಿ ಸೌಲಭ್ಯಗಳಲ್ಲದೇ ಜಂಗಲ್ ಲಾಡ್ಜ್-ರೆಸಾರ್ಟ್‌ಗಳನ್ನು ವಸತಿಗಾಗಿ ಬಳಸಿಕೊಳ್ಳಲಾಗಿದೆ. ವಾಣಿಜ್ಯೇತರ ಸಾಕ್ಷ್ಯಚಿತ್ರದ ಉದ್ದೇಶ ಹೊಂದಿದ್ದರೂ ಚಿತ್ರದ ವಾಣಿಜ್ಯ ಉದ್ದೇಶಕ್ಕೆ ವ್ಯವಸ್ಥಿತವಾಗಿ “ಮಡ್ ಸ್ಕಿಪರ್’, “ವೈಲ್ಡ್ ಕರ್ನಾಟಕ’ ಹಾಗೂ “ರೌಂಡ್‌ಗ್ಲಾಸ್’ ಸಂಸ್ಥೆಗಳನ್ನು ರಚಿಸಿಕೊಂಡು ವ್ಯಾಪಕ ಪ್ರಮಾಣದಲ್ಲಿ ಚಿತ್ರದ ಪ್ರಚಾರ ಮಾಡಲಾಗಿದೆ. ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ಕುರಿತು ತನಿಖೆ ನಡೆದು ತಪ್ಪಿತಸ್ಥರೆಲ್ಲರಿಗೆ ಶಿಕ್ಷೆಯಾಗಬೇಕು. ಅವರಿಂದ ಸರಕಾರಕ್ಕಾದ ನಷ್ಟ ಭರಿಸಿಕೊಳ್ಳಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ ಎಂದರು.