Advertisement

ಕಾಡು ಕುಡಿಗಳು-ಕಾನ್ವೆಂಟ್‌ ಮಕ್ಕಳ ಸಮಾಗಮ

09:16 PM Sep 23, 2019 | Lakshmi GovindaRaju |

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆ ಅಂಗಳದಲ್ಲಿ ಬೀಡುಬಿಟ್ಟಿರುವ ಗಜಪಡೆ ಸೋಮವಾರದ ಮಧ್ಯಾಹ್ನದ ಬಿಸಿಲಿನ ತಾಪಕ್ಕೆ ಬಸವಳಿದು ಮಜ್ಜನದಲ್ಲಿ ನಿರತವಾಗಿದ್ದರೆ, ತಾತ್ಕಾಲಿಕ ಟೆಂಟ್‌ ಶಾಲೆಯಲ್ಲಿ ಅಕ್ಷರಾಭ್ಯಾಸ ಮಾಡುತ್ತಿದ್ದ ಮಾವುತ, ಕಾವಾಡಿ ಮಕ್ಕಳು ಮಕ್ಕಳ ದಸರಾದಲ್ಲಿ ಕಾರ್ಯಕ್ರಮ ನೀಡಲು ಸನ್ನದ್ಧರಾಗುತ್ತಿರುವುದು ವಿಶೇಷವಾಗಿತ್ತು.

Advertisement

ಸೋಮವಾರದ ಬೆಳಗ್ಗೆ ತಾಲೀಮು ಮುಗಿಸಿದ ಆನೆಗಳು ಕೆಲಕಾಲ ವಿಶ್ರಾಂತಿ ಪಡೆದು, ನಂತರ ಮಾವುತರು ಹಾಗೂ ಕಾವಾಡಿಗರ ಜೊತೆ ನೀರಿನಲ್ಲಿ ಆಟವಾಡಿದವು. ಸಾರ್ವಜನಿಕ ಶಿಕ್ಷಣ ಇಲಾಖೆ ಅರಮನೆ ಆವರಣದಲ್ಲಿ ಮಾವುತರು ಮತ್ತು ಕವಾಡಿಗಳ ಮಕ್ಕಳಿಗಾಗಿ ವಿಶೇಷ ಶಾಲೆ ತೆರೆದು ಅಲ್ಲಿ ಪಾಠಪ್ರವಚನ ನಡೆಸುತ್ತಿದೆ. ಪ್ರತಿದಿನ ಪಾಠ ಪ್ರವಚನದ ಜತೆಗೆ ಸಂಗೀತ, ನೃತ್ಯವನ್ನು ಮಕ್ಕಳು ಕಲಿಯುತ್ತಿದ್ದಾರೆ.

ಸೆ.30 ಮತ್ತು ಅ.1ರಂದು ಜಗನ್ಮೋಹನ ಅರಮನೆಯಲ್ಲಿ ನಡೆಯಲಿರುವ ಎರಡು ದಿನಗಳ ಮಕ್ಕಳ ದಸರಾದಲ್ಲಿ ಕಾರ್ಯಕ್ರಮ ನೀಡಲು ಅಣಿಯಾಗುತ್ತಿದ್ದಾರೆ. ಬಿಆರ್‌ಸಿ ಎಂ.ಕೆ.ನಾಗೇಶ್‌, ನೋಡಲ್‌ ಅಧಿಕಾರಿ ಕುಸುಮಾ ಅವರು ಟೆಂಟ್‌ ಶಾಲೆಗೆ ಆಗಮಿಸಿ ಮಕ್ಕಳ ದಸರಾದಲ್ಲಿ ಅರ್ಧ ಗಂಟೆ ಕಾರ್ಯಕ್ರಮ ನೀಡಲು ಮಕ್ಕಳನ್ನು ತಯಾರು ಮಾಡಬೇಕೆಂದು ಸಲಹೆ ನೀಡಿದರು. ಮಕ್ಕಳ ಯಾವ ಕಾರ್ಯಕ್ರಮ ನೀಡುತ್ತಾರೆಂಬ ಮಾಹಿತಿಯನ್ನು ಶಿಕ್ಷಕರಿಂದ ಪಡೆದರು.

ಕಾಡಿನ ಮಕ್ಕಳ ಸ್ನೇಹ ಸಂಪಾದನೆ: ನಗರದ ಫಿನಿಕ್ಸ್‌ ಇಂಟರ್‌ ನ್ಯಾಷನಲ್‌ ಅಕಾಡೆಮಿ 1, 2 ಮತ್ತು 3ನೇ ತರಗತಿಯ 50 ಮಕ್ಕಳು ಅರಮನೆ ಆವರಣದಲ್ಲಿರುವ ಟೆಂಟ್‌ ಶಾಲೆಗೆ ಭೇಟಿ ನೀಡಿ ಕಾಡಿನ ಮಕ್ಕಳೊಂದಿಗೆ ಬೆರೆತು ಹಾಡು, ನೃತ್ಯದಲ್ಲಿ ಪಾಲ್ಗೊಂಡು ಖುಷಿಪಟ್ಟರು. ಜೊತೆಗೆ ಅಂಬಾರಿ ಹೊತ್ತ ಆನೆಯ ಚಿತ್ರಕ್ಕೆ ಬಣ್ಣ ತುಂಬುವ ಮೂಲಕ ಮಕ್ಕಳು ಗಮನ ಸೆಳೆದರು. ನಂತರ ಮಾವುತರ ಹಾಗೂ ಕಾವಾಡಿಗರ ಮಕ್ಕಳು ಕೋಲು ಮಾತಾಡುತ್ತಾವೆ ಜನಪದ ಗೀತೆಯನ್ನು ನೂತನ ಸ್ನೇಹಿತರಿಗೆ ಹೇಳಿಕೊಟ್ಟರು. ಆ ಮಕ್ಕಳು ಇಂಗ್ಲಿಷ್‌ ಪದ್ಯವನ್ನು ಹೇಳಿ ಖುಷಿಪಡಿಸಿದರು. ಬಳಿಕ ಚಾಕಲೇಟ್‌ ತಿಂದು ಪರಸ್ಪರ ಥ್ಯಾಂಕ್ಸ್‌ ಹೇಳಿಕೊಂಡರು.

ದಸರಾ ವೇಳೆ ಅರಮನೆ ಆವರಣದ ವಾತಾವರಣ ಹೇಗಿರುತ್ತದೆ ಮತ್ತು ಮಾವುತರು, ಕಾವಾಡಿ ಮಕ್ಕಳೊಂದಿಗೆ ನಮ್ಮ ಮಕ್ಕಳು ಸೇರಿ ಆಡಲೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅನುಮತಿ ಮೇರೆಗೆ ಇಲ್ಲಿಗೆ ಕರೆದುಕೊಂಡು ಬಂದೆವು. ಅರಮನೆ, ಆನೆ ನೋಡಿ ಮಕ್ಕಳು ಖುಷಿಪಟ್ಟರು ಎಂದು ಫಿನಿಕ್ಸ್‌ ಇಂಟರ್‌ ನ್ಯಾಷನಲ್‌ ಅಕಾಡೆಮಿ ಪ್ರಾಂಶುಪಾಲರಾದ ತೇಜಸ್ವಿನಿ ಸಂತೋಷ್‌ ಕುಮಾರ್‌ ತಿಳಿಸಿದರು. ಟೆಂಟ್‌ ಶಾಲೆಯ ಶಿಕ್ಷಕರಾದ ನಾಗೇಂದ್ರ ಕುಮಾರ್‌, ಬಸವರಾಜು, ಎಂದು ಫಿನಿಕ್ಸ್‌ ಇಂಟರ್‌ ನ್ಯಾಷನಲ್‌ ಅಕಾಡೆಮಿ ಶಿಕ್ಷಕಿ ಹರಿನಾಕ್ಷಿ ಇತರರಿದ್ದರು.

Advertisement

ದಿನಕ್ಕೊಂದು ವಚನ ಕಲಿಯುತ್ತಿರುವ ಮಕ್ಕಳು: ಮಕ್ಕಳ ದಸರಾದಲ್ಲಿ ಹಾಡಲು “ಆನೆ ಬರುತ್ತಾವೆ ನೋಡಿ, ಮೈಸೂರು ಅರಸರ ಅರಮನೆಗೆ ಆನೆ ಬರುತ್ತಾವೆ ನೋಡಿ…ಎಂಬ ಹೊಸ ಹಾಡನ್ನು ಟೆಂಟ್‌ ಶಾಲೆಯ ಮಕ್ಕಳು ಆನೆ ಬಗ್ಗೆ ಕಲಿಯುತ್ತಿದ್ದಾರೆ. ಶಿಕ್ಷಕಿ ಸುಬ್ಬಲಕ್ಷ್ಮೀ ಅವರು ದೇಶಭಕ್ತಿ, ಪರಿಸರ ಗೀತೆ, ವಚನ ಗಾಯನ ಕಲಿಸುತ್ತಿದ್ದಾರೆ. ಸೋಮವಾರ ಬಸವಣ್ಣರ “ಮಡಕೆಯ ಮಾಡುವರೆ ಮಣ್ಣ ಮೊದಲು, ಶಿವಪಥವರಿವೊಡೆ, ಗುರುಪಥ ಮೊದಲು, ಕೂಡಲ ಸಂಗಮ ದೇವರನರಿವೊಡೆ ಶರಣರ ಸಂಗವೆ ಮೊದಲು ಎಂಬ ವಚನವನ್ನು ಸುಶ್ರಾವ್ಯವಾಗಿ ಹಾಡಿದರು. ಹೀಗೆ ಪ್ರತಿ ದಿನ ಒಂದೊಂದು ವಚನಗಳನ್ನು ಮಕ್ಕಳಿಗೆ ಕಲಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next