ರೊಸೇಯೂ (ಡೊಮಿನಿಕಾ): ಇಂದಿನಿಂದ ಕೆರಿಬಿಯನ್ನರ ನಾಡಿನಲ್ಲಿ ಟೀಮ್ ಇಂಡಿಯಾ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಳಿದ. ವಿಂಡೀಸ್ ಹಾಗೂ ಟೀಮ್ ಇಂಡಿಯಾ ನಡುವಿನ ಟೆಸ್ಟ್ ಪಂದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25 ರ ಕೂಟದ ಮೊದಲ ಪಂದ್ಯವಾಗಿರಲಿದೆ.
ಇತ್ತೀಚೆಗಷ್ಟೇ ಟೆಸ್ಟ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸೋತ ಟೀಮ್ ಇಂಡಿಯಾ ಗೆಲುವಿನ ಹಾದಿಯನ್ನೇರುವ ತಯಾರಿಯಲ್ಲಿದ್ದು, ಏಕದಿನ ವಿಶ್ವಕಪ್ ಅರ್ಹತಾ ಕೂಟದಿಂದಲೇ ಹೊರಬಿದ್ದ ವೆಸ್ಟ್ ವಿಂಡೀಸ್ ಕೂಡ ಗೆಲುವಿನ ಲಯವನ್ನು ಪಡೆಯಲು ತಯಾರಿಯನ್ನು ನಡೆಸಿದೆ.
ಟೀಮ್ ಇಂಡಿಯಾದಲಿ ಬದಲಾವಣೆಯ ಗಾಳಿ ಬೀಸಿದ್ದು, ಈ ಟೆಸ್ಟ್ ಸರಣಿಗೆ ಅಚ್ಚರಿಯೆಂಬಂತೆ ಅನುಭವಿ ಚೇತೇಶ್ವರ್ ಪೂಜಾರ ಅವರನ್ನು ಕೈಬಿಡಲಾಗಿದೆ. ಇನ್ನು ಈ ಋತುವಿನ ಐಪಿಎಲ್ ನಲ್ಲಿ ಸ್ಫೋಟಕವಾಗಿ ಬ್ಯಾಟ್ ಬೀಸಿದ ಯಶಸ್ವಿ ಜೈಸ್ವಾಲ್ ಟೆಸ್ಟ್ ತಂಡಕ್ಕೆ ಸೇರಿಕೊಂಡಿದ್ದಾರೆ.
ಸಾಮಾನ್ಯವಾಗಿ ಯಶಸ್ವಿ ಜೈಸ್ವಾಲ್ ಓಪನಿಂಗ್ ಆಗಿ ಕಣಕ್ಕಿಳಿಯುತ್ತಾರೆ ಆದರೆ ಟೆಸ್ಟ್ ನಲ್ಲಿ ಶುಭಮನ್ ಗಿಲ್ ಆರಂಭಿಕರಾಗಿ ರೋಹಿತ್ ಅವರೊಂದಿಗೆ ಕ್ರಿಸ್ ಗಳಿಯುತ್ತಾರೆ. ಈ ಬಗ್ಗೆ ಕಪ್ತಾನ ರೋಹಿತ್ ಶರ್ಮಾ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
“ನನ್ನೊಂದಿಗೆ ಆರಂಭಿಕರಾಗಿ ಜೈಸ್ವಾಲ್ ಆಡಲಿದ್ದಾರೆ. ಶುಭಮನ್ ಗಿಲ್ ಅವರು ವನ್ ಡೌನ್ ಸ್ಥಾನಕ್ಕೆ ಬರುತ್ತಾರೆ. ಗಿಲ್ ಅವರು ಈ ಬಗ್ಗೆ ಕೋಚ್ ರಾಹುಲ್ ಅವರೊಂದಿಗೆ ಚರ್ಚಸಿದ್ದಾರೆ. ನಾನು ಅನೇಕ ಸಲ ವನ್ ಡೌನ್ ಅಥವಾ 4ನೇ ಕ್ರಮಾಂಕದಲ್ಲಿ ಆಡಲು ಬಂದಿದ್ದೇನೆ. ಈಗ ತಂಡಕ್ಕಾಗಿ ಇದನ್ನು ಮಾಡುತ್ತಿದ್ದೇನೆ. ಓಪನಿಂಗ್ ಜೈಸ್ವಾಲ್ ಹೋದರೆ ಎಡ – ಬಲ ಜೊತೆಯಾಟ ಬರುತ್ತದೆ” ಎಂದು ಗಿಲ್ ರಾಹುಲ್ ಬಳಿ ಹೇಳಿರುವುದಾಗಿ ರೋಹಿತ್ ಹೇಳಿದ್ದಾರೆ.
ಆರಂಭಿಕರಾಗಿ ಎಡಗೈ ಆಟಗಾರ ಬರಬೇಕೆಂದು ದೀರ್ಘಕಾಲದ ಹುಡುಕಾಟವಾಗಿತ್ತು.ಈಗ ನಾವು ಆ ಎಡಗೈ ಆಟಗಾರನನ್ನು ಪಡೆದಿದ್ದೇವೆ. ಜೈಸ್ವಾಲ್ ಉತ್ತಮವಾಗಿ ಪ್ರದರ್ಶನ ನೀಡುವ ಭರವಸೆಯಿದೆ ಎಂದು ರೋಹಿತ್ ಹೇಳಿದರು.
ಇಲ್ಲಿನ “ವಿಂಡ್ಸರ್ ಪಾರ್ಕ್’ನಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಆಡಲಿದೆ. ಇದು 2 ಟೆಸ್ಟ್ ಗಳ ಸರಣಿಯಾಗಿದ್ದು, ಬಳಿಕ 3 ಏಕದಿನ ಹಾಗೂ 5 ಟಿ20 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ.