ಬೆಳಗಾವಿ: ನಾನು ಮಾತನಾಡುವಾಗ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಹೇಳಿಲ್ಲ. ಅಕ್ಕನ ಹೆಸರು ಏನೆಂದು ಮಾತನಾಡಿದ್ದೇನೆ. ಎಕ್ಸ್‌ಟ್ರಾ ಪೆಗ್ ಎಂದರೆ ಸಾರಾಯಿ ಅಂತ ಯಾಕೆ ತಿಳಿದುಕೊಳ್ಳುತ್ತೀರಿ? ಪೆಗ್ ಎಂದರೆ ಎನರ್ಜಿ ಡ್ರಿಂಕ್ ಎಂದು ಮಾಜಿ ಶಾಸಕ ಸಂಜಯ ಪಾಟೀಲ್ ಸ್ಪಷ್ಟಪಡಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಅವರ ಹೆಸರು ಎಲ್ಲಿದ್ದರೆ ತೋರಿಸಿ? ಅಕ್ಕಾಬಾಯಿ ಎಂದರೆ ಅವರೇ ಎಂದು ಯಾಕೆ ತಿಳಿದು ಕೊಳ್ಳುತ್ತೀರಿ? ನನ್ನ ತಾಯಿ, ಪತ್ನಿ, ಮಗಳೂ ಮಹಿಳೆಯೇ. ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಭಾರತೀಯ ಸಂಸ್ಕೃತಿ ಕಲಿಸಿದೆ. ನಾನು ಯಾವ ಮಹಿಳೆಯನ್ನೂ ಅವಮಾನಿಸಿಲ್ಲ. ಅಕ್ಕಾಬಾಯಿ ಅಂತ ಅವರೇ ಅಲ್ಲ, ನಮ್ಮ ಮನೆಯ ಹೆಣ್ಣು ಮಗಳಿಗೆ ನಾನು ಅಂದಿದ್ದೇನೆ. ನಾನು ಏನಾದರೂ ತಪ್ಪು ಮಾತನಾಡಿದ್ದರೆ ಇಲ್ಲಿಯೇ ಶಿಕ್ಷೆ ನೀಡಲಿ. ಲಕ್ಷ್ಮೀಯವರ ಹೆಸರನ್ನು ತೆಗೆದುಕೊಂಡಿದ್ದರೆ ಚುನಾವಣ ಆಯೋಗಕ್ಕೆ ದೂರು ನೀಡಲಿ, ಸಂಪೂರ್ಣ ತನಿಖೆಯಾಗಲಿ ಎಂದರು.
ಜನರನ್ನು ರಾತ್ರಿ ನಮ್ಮ ಮನೆಗೆ ಕಳುಹಿಸಿ ಗೂಂಡಾಗಿರಿ, ದಬ್ಟಾಳಿಕೆ ಮಾಡಿ ದ್ದಾರೆ. ಪ್ರತಿಭಟನೆ ನಡೆಸಿದ್ದಕ್ಕೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇನೆ. ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಈ ಚುನಾವಣೆಯಲ್ಲಿ ಸೋಲಿನ ಭಯ ಆರಂಭವಾಗಿದೆ. ಇಂಥ ಹೇಳಿಕೆ ನೀಡುವ ಮೂಲಕ ಎಲ್ಲ ಮಹಿಳೆಯರು, ಎಲ್ಲ ಸಮಾಜದವರು ಎನ್ನುತ್ತಿದ್ದಾರೆ. ಪಕ್ಕದ ಕ್ಷೇತ್ರದ ಡಾ| ಅಂಜಲಿ ನಿಂಬಾಳ್ಕರ್, ಪ್ರಿಯಾಂಕಾ ಜಾರಕಿಹೊಳಿ ಅವರೂ ಮಹಿಳೆಯೇ. ಅವರು ಯಾಕೆ ಮಾತನಾಡುತ್ತಿಲ್ಲ. ಲಕ್ಷ್ಮೀ ಮಾತ್ರ ಮಹಿಳೆಯೇ? ಇತ್ತೀಚೆಗಷ್ಟೇ ನನಗೆ ಹೃದಯ ಬೈಪಾಸ್ ಸರ್ಜರಿ ಆಗಿದೆ. 90 ವರ್ಷದ ನನ್ನ ತಾಯಿ ಮನೆಯಲ್ಲಿದ್ದಾಗ ಏಕಾಏಕಿ ದಾಳಿ ಮಾಡಿದರೆ ಹೇಗೆ? ಆರೋಗ್ಯಕ್ಕೆ ಸಮಸ್ಯೆಯಾದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಪಾಟೀಲ್ ಹೇಳಿಕೆ ಬಿಜೆಪಿ ಕಾರ್ಯಸೂಚಿ ಅಲ್ಲ: ಶೆಟ್ಟರ್
ಬೆಳಗಾವಿ: ಸಂಜಯ ಪಾಟೀಲ್ ಹೇಳಿಕೆ ಬಿಜೆಪಿ ಕಾರ್ಯಸೂಚಿ ಅಲ್ಲವೇ ಅಲ್ಲ. ಅವರ ಹೇಳಿಕೆ ತಪ್ಪಾಗಿದ್ದರೆ ತಪ್ಪು ಎನ್ನೋಣ. ಯಾವ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಅವರ ಜತೆ ಚರ್ಚಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಲಿಂಗಾಯತ ಸಮಾಜಕ್ಕೂ ಸಂಜಯ ಪಾಟೀಲ್ ಹೇಳಿಕೆಗೂ ಸಂಬಂಧವಿಲ್ಲ. ನಾವು ಎಲ್ಲ ಕಾರ್ಯಕ್ರಮಗಳಲ್ಲೂ ವೇದಿಕೆ ಮೇಲೆ ಇರುತ್ತೇವೆ. ಎಲ್ಲರ ಭಾಷಣವನ್ನು ಗ್ರಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರ ಬಗ್ಗೆ ಕಾಂಗ್ರೆಸ್‌ನವರು ಕೀಳಾಗಿ ಮಾತನಾಡಿದ್ದಾರೆ. ಏಕವಚನದಲ್ಲಿ ಸಾಕಷ್ಟು ಸಲ ನಮ್ಮ ನಾಯಕರ ಬಗ್ಗೆಯೂ ಮಾತಾಡಿದ್ದಾರೆ. ಗೃಹಲಕ್ಷ್ಮಿ ಯೋಜನೆ ಬಗ್ಗೆ ಎಚ್‌ಡಿಕೆ ಹೇಳಿಕೆಯನ್ನು ಗಮನಿಸಿಲ್ಲ. ಇದಕ್ಕೆ ಕುಮಾರಸ್ವಾಮಿಯವರೇ ಉತ್ತರ ನೀಡಬಹುದು ಎಂದರು.