ಗದಗ: ತಾಲೂಕಿನ ಲಕ್ಕುಂಡಿಯ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮಕ್ಕೆ ಭಾನುವಾರ (ನ.24) ಚಾಲನೆ ನೀಡಲಾಯಿತು.
ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಸಾಂಸ್ಕೃತಿಕವಾಗಿ, ಪಾರಂಪರಿಕವಾಗಿ, ಶ್ರೀಮಂತಾಗಿರುವ ಲಕ್ಕುಂಡಿ, ಲೊಕ್ಕಿಗುಂಡಿ ಎಂಬ ಹೆಸರಿನಿಂದ ರಾಮಾಯಣ, ಮಹಾಭಾರತದ ಕಾಲದಿಂದಲೂ ಪ್ರಸಿದ್ಧಿ ಹೊಂದಿದೆ. ಇಲ್ಲಿಯವರೆಗೆ ಲಕ್ಕುಂಡಿಯ ಇತಿಹಾಸ, ಶಿಲ್ಪಕಲೆಗಳು, ಶಾಸನಗಳನ್ನು ನಿರ್ಲಕ್ಷ್ಯ ಮಾಡಿದ್ದೇವು. ಇಂದು ಜಾಗೃತರಾಗಿ ನಮ್ಮ ಇತಿಹಾಸ, ಪರಂಪರೆ, ಸಂಸ್ಕೃತಿ ಹಾಗೂ ಶ್ರೀಮಂತಿಕೆಯನ್ನು ಜಗತ್ತಿಗೆ ಪರಿಚಯಿಸಬೇಕಿದೆ. ಲಕ್ಕುಂಡಿಯು ಜಾಗತಿಕ, ಪಾರಂಪರಿಕ ಪಟ್ಟಿಯಲ್ಲಿ ಸೇರುವುದು ಸನ್ನಿಹಿತವಾಗಿದೆ. ಯುನೆಸ್ಕೋ ಆ ಸ್ಥಾನಮಾನ ಕೊಡುವುದಕ್ಕೆ ಬಹಳ ದಿನ ಬೇಕಾಗಿಲ್ಲ ಎಂದರು.
101 ಬಾವಿ, 101 ದೇವಸ್ಥಾನಗಳ ಇತಿಹಾಸ ಹೊಂದಿರುವ ಲಕ್ಕುಂಡಿಯಲ್ಲಿ ಪ್ರಾಚ್ಯಾಶೇಷಗಳ ಸಂಗ್ರಹಣೆ ಮೂಲಕ ಹುದುಗಿ ಹೋಗಿರುವ ದೇವಸ್ಥಾನ ಹಾಗೂ ಬಾವಿಗಳ ಅನ್ವೇಷಣೆ ಹಾಗೂ ಮರುಸೃಷ್ಟಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಲಕ್ಕುಂಡಿಯಲ್ಲಿರುವ ಶಾಸನಗಳು ಹಾಗೂ ಶಿಲ್ಪಕಲೆಗಳನ್ನು ಕೆಲವರು ಮನೆ ಮಡಿಕೊಂಡಿದ್ದಾರೆ, ಕೆಲವರು ಕುರಿ, ಆಕಳು ಕಟ್ಟಿದ್ದಾರೆ. ಆದರೆ ಅನ್ವೇಷಣೆ ಮೂಲಕ ಹೊಸದಾಗಿ 5 ಬಾವಿಗಳನ್ನು ಗುರುತಿಸಿಲಾಗಿದೆ, 5 ಶಾಸನಗಳು ಪತ್ತೆ ಮಾಡಲಾಗಿದೆ. ಲಕ್ಕುಂಡಿಯಲ್ಲಿ ಕೈಗೊಂಡಿರುವ ಪ್ರಾಚ್ಯಾವಶೇಷಗಳ ಅನ್ವೇಷಣೆ ರಾಜ್ಯಕ್ಕೆ ದಿಕ್ಸೂಚಿಯಾಗಬೇಕು. ಇದರ ಪ್ರೇರಣೆ ಕರ್ನಾಟಕದ ತುಂಬೆಲ್ಲ ಹರಡಬೇಕು. ಜೀರ್ಣೋದ್ಧಾರ ಆಗಬೇಕು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಶಾಸಕ ಸಿ.ಸಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಡಿ.ಆರ್. ಪಾಟೀಲ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಸಲ್ಮಾ ಫಾಹಿಮ್, ನಿರ್ದೇಶಕ ಡಾ. ಕೆ.ವಿ. ರಾಜೇಂದ್ರ, ಹಂಪಿ ವಿವಿಯ ಕುಲಪತಿ ಪರಮಶಿವಮೂರ್ತಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಸೇರಿ ಹಲವರು ಇದ್ದರು.
ಲಕ್ಕುಂಡಿಯಲ್ಲಿ ಹಮ್ಮಿಕೊಂಡಿರುವ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮದಲ್ಲಿ ದೊರಕಿರುವ ಶಾಸನಗಳನ್ನು, ಶಿಲ್ಪಕಲೆಗಳನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಯಿತು.