Advertisement

ನಾನೇಕೆ ದೇವೇಗೌಡರ ಬಳಿ ಹೋಗಲಿ?

06:00 AM Oct 30, 2018 | Team Udayavani |

ಬಾಗಲಕೋಟೆ: “ನಿಮ್ಮನ್ನು ಸಿಎಂ ಮಾಡುತ್ತೇನೆಂದು ದೇವೇಗೌಡರು ಯಡಿಯೂರಪ್ಪಗೆ ಫೋನ್‌ ಮಾಡಿದರೆ ಅವರ ಮನೆಗೆ ಹೋಗಿ ತೊಡೆ ಮೇಲೆ ಕುಳಿತುಕೊಳ್ಳುತ್ತಾರೆ’ ಎಂಬ ದಿನೇಶ್‌ ಗುಂಡೂರಾವ್‌ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, “ನಾನೇಕೆ ದೇವೇಗೌಡರ ಮನೆಗೆ ಹೋಗಲಿ. ನನಗೇನು ಸಂಬಂಧ? ನನಗೆ ಸಹಾಯ ಮಾಡುತ್ತೇನೆ ಎಂದು ಹೇಳಿ 20:20 ತಿಂಗಳ ಅಧಿಕಾರದಲ್ಲಿ ಟೋಪಿ ಹಾಕಿ ದ್ರೋಹ ಮಾಡಿದ್ದಾರೆ. ಅಪ್ಪ-ಮಕ್ಕಳ ಪಕ್ಷದ ಜತೆಗೆ ಈ ಜನ್ಮದಲ್ಲಿ ಸಂಬಂಧ ಸಾಧ್ಯವಿಲ್ಲ’ ಎಂದು ಹೇಳಿದರು.

Advertisement

ಜಮಖಂಡಿ ಉಪ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಅವರು ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ದಿನೇಶ್‌ ಗುಂಡೂರಾವ್‌ ತಲೆತಿರುಕ ಹೇಳಿಕೆ ನೀಡಿದ್ದಾರೆ. ಈಚೆಗೆ ಅವರು ಜವಾಬ್ದಾರಿಯುತವಾಗಿ ಮಾತನಾಡುವುದನ್ನೇ ಬಿಟ್ಟಿದ್ದಾರೆ. ಸಿಎಂ ಕುಮಾರಸ್ವಾಮಿ ಉತ್ತರ ಕರ್ನಾಟಕ ಅಭಿವೃದ್ಧಿ ವಿರೋಧಿ ಎಂದರು. ಶ್ರೀರಾಮುಲು ಅವರನ್ನು 420 ಎಂದಿರುವುದು ವಾಲ್ಮೀಕಿ ಸಮಾಜಕ್ಕೆ ಮಾಡಿದ ಅವಮಾನ. ಬಳ್ಳಾರಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸಮಾಜದವರು ಒಂದೇ ಒಂದು ಓಟು ಹಾಕಿದ್ರೂ ಶ್ರೀರಾಮುಲು ಮತ್ತು ವಾಲ್ಮೀಕಿ ಸಮಾಜಕ್ಕೆ ಜನರು ಮಾಡುವ ಅಪಮಾನ. ಕುಮಾರಸ್ವಾಮಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಹೋಗಲಿಲ್ಲ. ದೇವೇಗೌಡರು ಪ್ರಶಸ್ತಿ ಪಡೆಯಲು ಹೋಗಲಿಲ್ಲ. ಆ ಮೂಲಕ ಇಡೀ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದರು. 

ಸರ್ಕಾರವೇ ಬಂದರೂ ನನ್ನನ್ನು ಸೋಲಿಸಲಾಗದು
ಮೊಳಕಾಲ್ಮೂರು: ಪಟ್ಟಣದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದ ಶಾಸಕ ಬಿ. ಶ್ರೀರಾಮುಲು ತಮ್ಮ ವಿರುದ್ಧದ ಟೀಕೆಗಳಿಗೆ ಎದಿರೇಟು ನೀಡಿದ್ದಾರೆ. “ಇಡೀ ಸರ್ಕಾರವೇ ಬಂದರೂ ಬಳ್ಳಾರಿಯಲ್ಲಿ ತಮ್ಮನ್ನು ಸೋಲಿಸಲು ಆಗದು’ ಎಂದು ಗುಡುಗಿದ್ದಾರೆ. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಕ್ಷೇತ್ರದಲ್ಲಿ ಒಬ್ಬ ಶ್ರೀರಾಮುಲುನನ್ನು ಸೋಲಿಸಲು ಕಾಂಗ್ರೆಸ್‌ನ ಬಹುತೇಕ ನಾಯಕರು ಹಾಗೂ ಇಡೀ ವಿಧಾನಸೌಧಕ್ಕೆ ಬೀಗ ಹಾಕಿ ಸಮ್ಮಿಶ್ರ ಸರ್ಕಾರದ ಸಚಿವರು ಬಳ್ಳಾರಿಯಲ್ಲಿ ಠಿಕಾಣಿ ಹೂಡಿದ್ದಾರೆ. ಬಿಜೆಪಿಯನ್ನು ಸೋಲಿಸಲೆಂದೇ ಸಮ್ಮಿಶ್ರ ಸರ್ಕಾರ ಒಗ್ಗೂಡಿದೆ. ಶಿವಮೊಗ್ಗ ಮತ್ತು ಮಂಡ್ಯ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಬಳ್ಳಾರಿ ಕ್ಷೇತ್ರದಲ್ಲಿ ಮಾತ್ರ ಕಣಕ್ಕಿಳಿಸಿದ್ದಾರೆ. ಸಚಿವ ಡಿ.ಕೆ. ಶಿವಕುಮಾರ್‌ ಎಷ್ಟೇ ಹಣ ಸುರಿದರೂ ನೂರಕ್ಕೆ ನೂರರಷ್ಟು ನನ್ನ ಜಿಲ್ಲೆಯ ಜನರು ಸಹೋದರಿ ಶಾಂತಾ ಅವರನ್ನೇ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪರಂ ರಾಹು, ದೇವೇಗೌಡ-ರೇವಣ್ಣ ಕೇತು, ಜೆಡಿಎಸ್‌ ಶನಿ: ಈಶ್ವರಪ್ಪ
ಬಾಗಲಕೋಟೆ: “ಚಾಮುಂಡೇಶ್ವರಿಯಲ್ಲಿ ನನ್ನ ಸೋಲಿಗೆ ರಾಹು, ಕೇತು, ಶನಿ ಕಾರಣ ಎಂದು ಸಿದ್ದರಾಮಯ್ಯ ಹೇಳಿದ್ದರು. ಡಾ.ಜಿ.ಪರಮೇಶ್ವರ್‌ ರಾಹು, ದೇವೇಗೌಡ ಮತ್ತು ರೇವಣ್ಣ ಕೇತು, ಜೆಡಿಎಸ್‌ ಪಕ್ಷವೇ ಶನಿ. ಜನತಾ ದಳದ ಶನಿಗಳನ್ನು ಕಟ್ಟಿಕೊಂಡು ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಬಿಜೆಪಿ ನಾಯಕ ಕೆ.ಎಸ್‌. ಈಶ್ವರಪ್ಪ ವಿಶ್ಲೇಷಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ದನದ ಮಾಂಸ ತಿಂತಾರೋ, ಎಮ್ಮೆ ಮಾಂಸ ತಿಂತಾರೋ ಅವರಿಗೆ ಬಿಟ್ಟ ವಿಚಾರ. ಆದರೆ, ಮನುಷ್ಯರು ತಿನ್ನುವ
ಪದಾರ್ಥ ತಿನ್ನಲಿ. ಸಿದ್ದರಾಮಯ್ಯ, ದೇವೇಗೌಡರ ಬೆನ್ನಿಗೆ ಚಾಕು ಹಿಡಿದು ನಿಂತರೆ, ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ಬೆನ್ನಿಗೆ ಚಾಕು ಹಿಡಿದು ನಿಂತಿದ್ದಾರೆ. ಇವರು ಯಾವಾಗ ಸಾಯುತ್ತಾರೋ ಗೊತ್ತಿಲ್ಲ. ಸಮ್ಮಿಶ್ರ ಸರ್ಕಾರ ಮುಳುಗುತ್ತಿರುವ ಹಡಗು. ಕಾಂಗ್ರೆಸ್‌-ಜೆಡಿಎಸ್‌ನವರು ಈಜು ಬಾರದವರು. ಒಬ್ಬರಿಗೊಬ್ಬರು ತಬ್ಬಿಕೊಂಡಿದ್ದಾರೆ. ಉಪ ಚುನಾವಣೆ ಮುಗಿಯುತ್ತಿದ್ದಂತೆ ಮುಳುಗಿ ಹೋಗುತ್ತಾರೆ. ಇದಕ್ಕೆ ಟೆಸ್ಟ್‌ ಡೋಸೆಜ್‌ (ಇಂಜೆಕ್ಷನ್‌) ಉಪ ಚುನಾವಣೆ ಎಂದರು.

ಕಾಂಗ್ರೆಸ್‌ನವರು ಹೆಣ್ಣು ಮಕ್ಕಳ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಶೋಭಾಗೆ ಸಿದ್ದರಾಮಯ್ಯ ಅವಳು ಎನ್ನುತ್ತಾರೆ. ಸಿದ್ದರಾಮಯ್ಯ ಪತ್ನಿ
ನನಗೆ ತಾಯಿ ಸಮಾನ. ಲಕ್ಷ್ಮೀ ಹೆಬ್ಟಾಳಕರ ಅವರನ್ನು ಕಾಲಕಸ ಎಂದು ಕಾಂಗ್ರೆಸ್‌ನವರೇ ಕರೆದಿದ್ದಾರೆ. ನಾನೇ ಮುಖ್ಯಮಂತ್ರಿ ಎಂದು
ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ. ಬ್ರಹ್ಮ ಬಂದರೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದಿಲ್ಲ ಎಂದರು.

Advertisement

ಉಪಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ಪತನಗೊಳ್ಳುವುದು ಖಚಿತ. ಜಮಖಂಡಿಯಲ್ಲಿ ಬಿಜೆಪಿ ಅಭ್ಯರ್ಥಿ ಜಯ ಸಾಧಿಸಲಿದ್ದಾರೆ. ಬಿಜೆಪಿ ಆಪರೇಷನ್‌ ಕಮಲ ಮಾಡಲ್ಲ. ಉಪಚುನಾವಣೆ ಬಳಿಕ ಕಾಂಗ್ರೆಸ್‌ ಪಕ್ಷದ ಅತೃಪ್ತ ಶಾಸಕರೇ ನಮಗೆ ಬೆಂಬಲ ನೀಡಲಿದ್ದಾರೆ.
● ಜಗದೀಶ ಶೆಟ್ಟರ್‌ ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next