ತಾಯಿಯ ಗರ್ಭದಲ್ಲಿ, ಭ್ರೂಣಾವಸ್ಥೆಯಲ್ಲಿರುವ “ಮಗು’ವಿಗೆ ಬಾಲ ಇರುತ್ತದೆ! ಎಂಟನೆಯ ವಾರದವರೆಗೂ ಇರುವ ಬಾಲ ಕ್ರಮೇಣ ಕರಗಿ ಹೋಗುತ್ತದೆ. ಚಕ್ಕಳ ಮಕ್ಕಳ ಹಾಕಿಕೊಂಡು ಕುಳಿತಾಗ ಬೆನ್ನು ಮೂಳೆಯ ಕೊನೆಯ ಮೂಳೆ ತ್ರಿಕೋನಾಕಾರವಿರುವ “ಕಾಕ್ಕಿಕ್ಸ್’ ಸಿಗುತ್ತದೆ. ಇದೇ ಮೊದಲು ಬಾಲವಾಗಿತ್ತು.
ಕಪಿ, ಕೋತಿಗಳಂತೆ ನಮಗೆ ಏಕೆ ಬಾಲವಿಲ್ಲ ಎಂದು ನಿಖರವಾಗಿ ಗೊತ್ತಿಲ್ಲ. ಕೋತಿಗಳು ಸಮತೋಲನ ಸಾಧಿಸಲು ಮತ್ತು ಮರದಿಂದ ಮರಕ್ಕೆ ಹಾರುವಾಗ ಹಿಡಿದುಕೊಳ್ಳಲು ಬಾಲ ಬೇಕಾಗಿತ್ತು. ನೆಟ್ಟಗೆ ಎರಡು ಕಾಲಿನ ಮೇಲೆ ನಾವು ನಡೆಯುವುದರಿಂದ ಹಿಂದೆ ಬಾಲ ಇದ್ದಿದ್ದರೆ, ಸಮತೋಲನ ಏರುಪೇರಾಗಿ ನಾವು ಹಿಂದಕ್ಕೆ ಬೀಳುತ್ತಿದ್ದೆವು. ಆದ್ದರಿಂದ ಮನುಷ್ಯನಿಗೆ ಬಾಲ ಅನಗತ್ಯ. ಅನವಶ್ಯಕವಾದ ದೇಹದ ಬಾಗಗಳು ಜೀವಿಗಳಿಂದ ಇಲ್ಲವಾಗುವುದು ಪ್ರಕೃತಿ ನಿಯಮ. ಹಿಂದಿನಿಂದಲೂ ಅದು ನಡೆದುಕೊಂಡು ಬಂದಿದೆ. ಇವೆಲ್ಲದರಿಂದಾಗಿ ಮನುಷ್ಯನಿಂದ ಬಾಲ ಮರೆಯಾಯಿತು.
ಆದರೆ ಜಗತ್ತಿನ ಅಲ್ಲಲ್ಲಿ ಬಾಲವಿದ್ದ ಮಗು ಹುಟ್ಟಿದ ಬಗ್ಗೆ ವರದಿಗಳು ವರದಿಯಾಗುತ್ತಿರುತ್ತವೆ. 1880ರ ದಶಕದಲ್ಲಿ ಬಾಲ ಇದ್ದ ಮಕ್ಕಳು ಹುಟ್ಟಿದ ದಾಖಲೆಯಿದೆ. ಆಗಿನಿಂದ ಈಗಿನವರೆಗೂ ಬಾಲ ಸಹಿತ ಹುಟ್ಟಿದ ಮಕ್ಕಳ ಸಂಖ್ಯೆಯ ದಾಖಲೆ 100ಕ್ಕಿಂತ ಕಡಿಮೆ. ಕೆಲವೊಮ್ಮೆ ಕೊಬ್ಬಿನ (ಮೇದಸ್ಸಿನ) ಅಂಗಾಂಶವಿರುವ ಚರ್ಮದ ಚೀಲ ಕಂಡು ಬಂದಿದ್ದು ಇದನ್ನು ಶಸ್ತ್ರಚಿಕಿತ್ಸಕರು ತೆಗೆದು ಹಾಕಿದ್ದಾರೆ. ಬಾಲ ಇರುವ ಮಗು ಹುಟ್ಟಿದ್ದರ ಬಗ್ಗೆ ವರದಿ ಬಾರತದಲ್ಲೂ ಪ್ರಕಟವಾಗಿತ್ತು.
ತೀರಾ, ಅಪರೂಪಕ್ಕೊಮ್ಮೆ, ಈ ಬಾಲದಂತಹ ರಚನೆ ಮೆದುಳು ಬಳ್ಳಿಯ ನರಗಳೊಂದಿಗೆ ಸಂಬಂಧವನ್ನು ಹೊಂದಿರುತ್ತದೆ. ಆಗ ನ್ಯೂರೊ ಸರ್ಜನ್‌ಗಳ ಸಹಾಯದಿಂದ ಶಸ್ತ್ರ ಚಿಕಿತ್ಸೆ ನಡೆಸಿ ಬಾಲವನ್ನು ಕ್ಷೇಮವಾಗಿ ತೆಗೆದುಹಾಕುತ್ತಾರೆ.
– ಸಂಪಟೂರು ವಿಶ್ವನಾಥ್