Advertisement
ಕನ್ನಡಿ-ದರ್ಪಣ: ಇದೊಂದೇ ನಮ್ಮನ್ನು ನಾವು ಸಂಪೂರ್ಣವಾಗಿ ನೋಡಿಕೊಳ್ಳಲು ಸಹಾಯ ಮಾಡುವಂತಹ ವಸ್ತು ಎಂದರೆ ತಪ್ಪಾಗಲಾರದು. ನಮ್ಮ ಬಾಹ್ಯ ಸೌಂದರ್ಯವನ್ನು ಮಾತ್ರವಲ್ಲ, ಎಷ್ಟೋ ಸಲ ನಮ್ಮ ಆಂತರಿಕ ನೋವನ್ನೂ ಪ್ರತಿಬಿಂಬಿಸುವ ಶಕ್ತಿ ಅದಕ್ಕಿದೆ. ಏಕೆಂದರೆ ಅದರ ಮುಂದೆ ನಿಂತರೆ ಅದರೊಳಗೆ ಕಾಣುವುದು ನಮ್ಮ ಪ್ರತ್ಯಕ್ಷ ಸ್ವರೂಪ ಅಲ್ಲವೇ!
Related Articles
Advertisement
ಎಷ್ಟೋ ಸಲ ಕನ್ನಡಿ ಇಲ್ಲದೇ ನಾವು ಬದುಕಲು ಸಾಧ್ಯವೇ ಇಲ್ಲವಾ ಅನ್ನಿಸಿಬಿಡುತ್ತದೆ. ನಮಗೆ ಮೊದಲು ಆತ್ಮವಿಶ್ವಾಸ ತುಂಬುವುದೇ ಕನ್ನಡಿ, ನಾನು ಚೆನ್ನಾಗಿ ಕಾಣಿಸುತ್ತಿದ್ದೇನೆ. ನಾನು ಯಾರಿಗಿಂತ ಏನೂ ಕಡಿಮೆ ಇಲ್ಲ. ನಾನು ಮಾಡುತ್ತಿರುವ ಕೆಲಸಗಳು ನನಗೆ ಮೆರುಗು ತಂದಿವೆ… ಈ ಎಲ್ಲಾ ಮನಸ್ಸಿನ ಭಾವನೆಗಳನ್ನು ನಮ್ಮ ಮೂಲಕವೇ ಕನ್ನಡಿ ನಮಗೆ ತೋರಿಸಿಕೊಡುತ್ತದೆ.
ಕನ್ನಡಿಯ ಮೋಹ ಬಹಳ ಹಿಂದಿನದು. ಬೇಲೂರಿನ ಚನ್ನಕೇಶವ ದೇವಾಲಯದಲ್ಲಿ ಶಿಲಾಬಾಲಿಕೆಯೊಬ್ಬಳು ಕನ್ನಡಿ ಹಿಡಿದು ಮುಖ ನೋಡಿಕೊಳ್ಳುತ್ತ ಬಳುಕಿ ನಿಂತಿರುವ ಕೆತ್ತನೆ ಪ್ರಸಿದ್ಧವೂ ಅದ್ಭುತವೂ ಹೌದು. ಯುವತಿಯರು ಕನ್ನಡಿಯೆದುರು ನಿಂತಾಗ ಆ ಕ್ರಿಯೆಯಲ್ಲಿ ಯಾವ ಪರಿ ತನ್ಮಯರಾಗಿರುತ್ತಾರೆ ಎಂಬುದಕ್ಕೆ ಆ ಕೆತ್ತನೆ ಸಾಕ್ಷೀರೂಪದಂತಿದೆ.
ಕನ್ನಡಿಯ ಬಗ್ಗೆ ಹಲವು ಮೂಢನಂಬಿಕೆಗಳಿವೆ. ವಾಮಾಚಾರದಲ್ಲಿ ಕನ್ನಡಿಯನ್ನು ಮನುಷ್ಯನ ಆತ್ಮದ ಪ್ರತಿಬಿಂಬ ಎಂದು ನಂಬುತ್ತಾರೆ. ಹಾಗಾಗಿ ಮಾಟ-ಮಂತ್ರಗಳಲ್ಲಿ ಕನ್ನಡಿ ಬಳಕೆಯಾಗುತ್ತದೆ. ಕನ್ನಡಿ ಸುಳ್ಳು ಹೇಳುವುದಿಲ್ಲವಂತೆ. ಹಾಗಾಗಿ ಕೆಟ್ಟ ವಸ್ತುಗಳನ್ನು ಕನ್ನಡಿಯಲ್ಲಿ ನೋಡಬಾರದಂತೆ. ಹಾಗೆಯೇ, ನವಜಾತ ಶಿಶುವಿಗೆ ಒಂದು ವರ್ಷ ತುಂಬುವವರೆಗೆ ಕನ್ನಡಿಯಲ್ಲಿ ಅದರ ಮುಖ ತೋರಿಸಬಾರದಂತೆ.
ಕನ್ನಡಿ ಒಡೆದವರು ಏಳು ವರ್ಷ ದುರದೃಷ್ಟ ಅನುಭವಿಸುತ್ತಾರೆ ಎಂಬುದು ಇನ್ನೊಂದು ಮೂಢನಂಬಿಕೆ. ಕನ್ನಡಿ ನಮ್ಮ ಆತ್ಮದ ಪ್ರತಿಬಿಂಬವಾಗಿರುವುದರಿಂದ ಅದನ್ನು ಒಡೆದರೆ ನಮ್ಮಾತ್ಮವನ್ನೇ ಒಡೆದಂತೆ. ಆತ್ಮ ಏಳು ವರ್ಷಕ್ಕೊಮ್ಮೆ ನವೀಕರಣಗೊಳ್ಳುತ್ತದೆ ಎಂಬ ಮತ್ತೂಂದು ಮೂಢನಂಬಿಕೆಯನ್ನು ಇದಕ್ಕೆ ತಳುಕು ಹಾಕಿ, ಕನ್ನಡಿ ಒಡೆದರೆ ಏಳು ವರ್ಷ ಕೆಡುಕು ಎಂಬ ದಂತಕತೆ ಹುಟ್ಟಿಕೊಂಡಿತು. ಒಡೆದ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಬಾರದು ಎಂದು ಹೇಳುವುದನ್ನು ನೀವೆಲ್ಲ ಕೇಳಿರುತ್ತೀರಿ.
ತ್ರಿಕೋನಾಕಾರದ ಮಾಳಿಗೆಯಿರುವ ಮನೆಗೆ ದುಷ್ಟ ಶಕ್ತಿಗಳು ಬರುತ್ತವೆ ಎಂಬ ನಂಬಿಕೆ ಬೌದ್ಧರಲ್ಲಿದೆ. ಅದಕ್ಕೆ ಅವರು ಬಾಗಿಲಿನ ಎದುರು ವೃತ್ತಾಕಾರದ ಪುಟ್ಟ ಕನ್ನಡಿಯೊಂದನ್ನು ನೇತುಹಾಕುತ್ತಾರೆ. ಅದು ಕೆಟ್ಟ ಶಕ್ತಿಗಳು ಮನೆಗೆ ಪ್ರವೇಶಿಸದಂತೆ ತಡೆಯುತ್ತದೆಯಂತೆ.
ದಕ್ಷಿಣ ಅಮೆರಿಕದ ಮನೆಗಳಲ್ಲಿ ಯಾರಾದರೂ ಸತ್ತರೆ ಕೂಡಲೇ ಕನ್ನಡಿ ಹಾಗೂ ಪ್ರತಿಬಿಂಬ ತೋರಿಸುವ ಟೀವಿ ಮುಂತಾದ ಎಲ್ಲಾ ನಯವಾದ ವಸ್ತುಗಳನ್ನು ವಸ್ತ್ರದಿಂದ ಮುಚ್ಚಿಡುತ್ತಾರೆ. ಅಂತ್ಯಸಂಸ್ಕಾರ ಮುಗಿದ ನಂತರವಷ್ಟೇ ಆ ಬಟ್ಟೆ ತೆಗೆಯುತ್ತಾರೆ. ಮುಚ್ಚಿಡದಿದ್ದರೆ ಸತ್ತವರ ಆತ್ಮ ಕನ್ನಡಿಯಲ್ಲಿ ಅಡಗಿಕೊಂಡು ಶಾಶ್ವತವಾಗಿ ಅಲ್ಲೇ ನೆಲೆಸಿಬಿಡುತ್ತದೆ ಎಂಬ ನಂಬಿಕೆ ಅವರದು! ಗ್ರೀಸ್‌ನಲ್ಲೂ ಸಾವು ಉಂಟಾದ ಮನೆಯಲ್ಲಿ ಕನ್ನಡಿ ಬಳಸುವುದಿಲ್ಲ. ದುಃಖದಲ್ಲಿರುವಾಗ ಕನ್ನಡಿ ನೋಡಬಾರದು ಎಂಬುದು ಅವರ ನಂಬಿಕೆ.
ಭೂತಗಳಿಗೆ ಕನ್ನಡಿಯಲ್ಲಿ ಪ್ರತಿಬಿಂಬ ಕಾಣಿಸುವುದಿಲ್ಲವಂತೆ. ಏಕೆಂದರೆ ಅವು ಸಾವಿಲ್ಲದ ಜೀವಗಳು. ಅವು ಆತ್ಮವನ್ನೇ ಕಳೆದುಕೊಂಡಿರುತ್ತವೆ. ಹಾಗಾಗಿ ಜನರ ಆತ್ಮವನ್ನು ಎತ್ತಿ ತೋರಿಸುವ ಕನ್ನಡಿಯಲ್ಲಿ ಭೂತ ಪಿಶಾಚಿಗಳು ಕಾಣಿಸುವುದಿಲ್ಲವಂತೆ. ಎರಡು ಕನ್ನಡಿಗಳನ್ನು ಎದುರುಬದುರು ಇಡುವುದು ಅಶುಭ ಎಂಬ ಇನ್ನೊಂದು ನಂಬಿಕೆಯೂ ಇದೆ. ಇವೆಲ್ಲಕ್ಕೂ ಯಾವುದೇ ಆಧಾರವಿಲ್ಲ. ಜನರ ಮನಸ್ಸಿನಲ್ಲಿ ಉಳಿದುಕೊಂಡು ಬಂದಿವೆ ಅಷ್ಟೆ.
ನಂಬಿಕೆಗಳೇನೇ ಇದ್ದರೂ ಕನ್ನಡಿ ನಮ್ಮ ವ್ಯಕ್ತಿತ್ವವನ್ನು ನಮಗೆ ತೋರಿಸುತ್ತದೆ ಎಂಬುದಂತೂ ನಿಜ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವ ಸಂಕೀರ್ಣ ಪ್ರಕ್ರಿಯೆಯಲ್ಲಿ ಕನ್ನಡಿಗೂ ಪಾತ್ರವಿದೆ. ಈಗಲೇ ಎದ್ದುಹೋಗಿ ಕನ್ನಡಿ ಮುಂದೆ ನಿಂತು ಒಂದು ಸ್ಮೈಲ್ ಕೊಡಿ, ಅದರ ಖುಷಿ ಏನೆಂಬುದು ತಿಳಿಯುತ್ತದೆ.