Advertisement

ಇನ್ನಷ್ಟು ಮಠ-ಮಂದಿರಗಳ ಸ್ವಾಧೀನದ ಹಠ ಏಕೆ?

08:15 AM Feb 18, 2018 | |

ಈಗಾಗಲೇ ಸರ‌ಕಾರದ ನಿಯಂತ್ರಣದಲ್ಲಿರುವ ರಾಜ್ಯದ ಪ್ರಸಿದ್ಧ ದೇವಸ್ಥಾನಗಳ ಸ್ಥಿತಿಗತಿ ಹೇಗಿದೆ? ಅಲ್ಲಿರುವ ಅವ್ಯವಸ್ಥೆಯ ಕುರಿತು ಎಷ್ಟು ಹೇಳಿದರೂ ಕಡಿಮೆಯೇ ಎಂದರೆ ತಪ್ಪಾಗದು. ಮುಜರಾಯಿ ಇಲಾಖೆಯ ಅಧೀನದ ದೇವಸ್ಥಾನಗಳ ವ್ಯವಸ್ಥಾಪನಾ ಮಂಡಳಿಗಳು ರಾಜಕಾರಣಿಗಳ ಹಿಂಬಾಲಕರ, ಪುಢಾರಿಗಳ ಪ್ರತಿಷ್ಠೆ ಮೆರೆಯುವ ತಾಣಗಳಾಗಿವೆ. ಸಾವಿರಾರು ಮೈಲು ದೂರದ ಸ್ಥಳಗಳಿಂದ ಬರುವ ಯಾತ್ರಿಗಳು ಕನಿಷ್ಟ ಸೌಲಭ್ಯವೂ ಇಲ್ಲದೇ ಯಾಕಾದರೂ ಬಂದೆವಪ್ಪ ಎಂದು ದುಃಖೀಸುವ ಸ್ಥಿತಿಯಲ್ಲಿವೆ. 

Advertisement

ಮಠ-ಮಂದಿರಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಯತ್ನಕ್ಕೆ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸದ್ಯಕ್ಕಂತೂ ಚುನಾವಣೆಯ ಹೊತ್ತಿಗೆ ವಿವಾದ ಮೈಮೇಲೆಳೆದುಕೊಳ್ಳುವುದು ಬೇಡ ಎಂಬ ನಿರ್ಣಯಕ್ಕೆ ಬಂದಂತಿದೆ ಸಿದ್ದರಾಮಯ್ಯನವರ ಸರಕಾರ. ಈ ನಿಟ್ಟಿನಲ್ಲಿ ಇದು ಸರಕಾರದ ಮೊದಲ ಪ್ರಯತ್ನವೇನಲ್ಲ. ಹಿಂದೂ ಮಠ-ಮಂದಿರಗಳ ಮೇಲೆ ಬಹಳ ಸಮಯದಿಂದ ಸರಕಾರ ಕಣ್ಣು ಹಾಕಿರುವುದು ಈಗಾಗಲೇ ಜಗಜ್ಜಾಹೀರಾಗಿದೆ. 2000ನೇ ಇಸವಿಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ ನೀಡಿದ ನಿರ್ದೇಶನದಂತೆ ಜನಾಭಿಪ್ರಾಯ ಕೇಳಿರುವುದಾಗಿಯೂ ಮಠ-ಮಂದಿರಗಳನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತರುವ ಯಾವ ಇರಾದೆಯೂ ತಮಗಿಲ್ಲ ಎನ್ನುವ ಸಕಾರದ ಸಮಜಾಯಿಷಿಯನ್ನು ಎಷ್ಟರ ಮಟ್ಟಿಗೆ ನಂಬಬೇಕೋ ಬಿಡಬೇಕೋ ಎನ್ನುವುದನ್ನು ಮಹಾಜನತೆ ಯೋಚಿಸಬೇಕಾಗಿದೆ. ನ್ಯಾಯಾಲಯದ ಮೇಲೆ ತಮಗೆ ಬಹಳ ಗೌರವವಿದೆ ಎನ್ನುವ ಸವಿನುಡಿಯಾಡುತ್ತಾ, ತಮ್ಮ ವೋಟ್‌ ಬ್ಯಾಂಕ್‌ ರಾಜಕಾರಣಕ್ಕೆ ಧಕ್ಕೆ ಬರುವ ಸಾಧ್ಯತೆಯಿರುವ ತಮಗಿಷ್ಟವಿಲ್ಲದ, ನ್ಯಾಯಾಲಯಗಳ ಆದೇಶಗಳನ್ನು ಶತಾಯಗತಾಯ ಪಾಲಿಸದಿರಲು ಅಥವಾ ಕತ್ತಲೆ ಕೋಣೆಗೆ ಸಾಗಹಾಕುವ ದಾರಿ ಹುಡುಕಿಕೊಳ್ಳುತ್ತವೆ ನಮ್ಮ ಸರಕಾರಗಳು. ಅದರಲ್ಲೂ ಅಲ್ಪಸಂಖ್ಯಾತ ಸಮುದಾಯದ ಕುರಿತಾದಂತೆ ಬರುವ ಮಾನವೀಯ ನೆಲೆಯ ನ್ಯಾಯ ಸಮ್ಮತವೆನ್ನಿಸಿದ ನ್ಯಾಯಾಲಯಗಳ ಆದೇಶವನ್ನು ಬುಡಮೇಲು ಮಾಡಲು ಸಂವಿಧಾನವನ್ನೇ ತಿದ್ದುಪಡಿ ಮಾಡುವಷ್ಟು ಉದಾರತೆಯನ್ನೂ ಮೆರೆಯುತ್ತವೆ! ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ. ಇದೆಂತಹ ನ್ಯಾಯ?

ದ್ವಂದ್ವ ನೀತಿ 
ಧಾರ್ಮಿಕ ಹಕ್ಕು ನಮ್ಮ ಸಂವಿಧಾನ ನೀಡಿದ ಮೂಲಭೂತ ಹಕ್ಕಾಗಿದೆ. ತಮಗಿಷ್ಟ ಬಂದ ಧರ್ಮ ಅನುಸರಿಸುವ, ಆಚರಿಸುವ ಸ್ವಾತಂತ್ರ್ಯ ಎಲ್ಲಾ ನಾಗರಿಕರಿಗಿದೆ ಎಂದಮೇಲೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಪೂಜಾಸ್ಥಳಗಳನ್ನು ನಡೆಸುವ ಸ್ವಾತಂತ್ರ್ಯವೂ ಇರಬೇಡವೇ? ದುರಾದೃಷ್ಟವೆಂದರೆ ದೇಶದ ಬಹುಸಂಖ್ಯಾತರನ್ನು ಬಿಟ್ಟು ಮಿಕ್ಕುಳಿದೆಲ್ಲರಿಗೂ ಈ ಮೂಲಭೂತ ಅಧಿಕಾರದ ಶತಪ್ರತಿಶತ ಖಾತರಿ ಇದೆ. ಹಿಂದೂಯೇತರರ ಪೂಜಾಸ್ಥಳಗಳ ವಿಷಯದಲ್ಲಿ ಯಾವುದೇ ಹಸ್ತಕ್ಷೇಪ ಮಾಡಲು ಯಾವ ಸರಕಾರವೂ ಯೋಚಿಸುವ ಸಾಹಸ ಮಾಡುವುದಿಲ್ಲ. ಸರಕಾರದ ಈ ದ್ವಂದ್ವ ನೀತಿಯೇ ಬಿಂದ್ರನ್‌ವಾಲೆಯಂತಹ ಮತಾಂಧರಿಗೆ ಪವಿತ್ರ ಗುರುದ್ವಾರವನ್ನು ರಾಷ್ಟ್ರದ ವಿರುದ್ಧ ಯುದ್ಧ ಸಾರುವ ಕಾರಸ್ಥಾನದ ಕೇಂದ್ರವಾಗಿ ಉಪಯೋಗಿಸಿಕೊಳ್ಳಲು ಅನುವು ಮಾಡಿಕೊಟ್ಟಿತು. ಇಷ್ಟಾದರೂ ಸ್ವರ್ಣ ಮಂದಿರದೊಳಗೆ ಸೇನೆ ಕಳುಹಿಸಲು ಸರಕಾರ ಬಹಳಷ್ಟು ಯೋಚಿಸಬೇಕಾಯಿತು. ಉಗ್ರರ ವಿರುದ್ಧ ಸಿಕ್ಖರ ಸ್ವರ್ಣಮಂದಿರದಲ್ಲಿ ನಡೆದ ಅಪರೇಶನ್‌ ಬ್ಲೂ ಸ್ಟಾರ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸೈನಿಕರಿಗೆ ಬೂಟು ಧರಿಸದಂತೆ, ಪವಿತ್ರ ಅಖಾಲ್‌ ತಖ್‌¤ ಗೆ ಹಾನಿಯಾಗದಂತೆ ನೋಡಿಕೊಳ್ಳಬೇಕೆನ್ನುವ ಆದೇಶ ನೀಡಲಾಗಿತ್ತು. ಶ್ರೀನಗರದ ಪವಿತ್ರ ಮಸೀದಿಗಳಲ್ಲಿ ದೇಶ ವಿರೋಧಿ ಚಟುವಟಿಕೆಗಳು ನಡೆಯುತ್ತಿದ್ದರೂ ಮತ್ತು ಅವುಗಳು ಉಗ್ರವಾದಿಗಳಿಗೆ ಆಶ್ರಯತಾಣವಾಗುತ್ತಿದ್ದರೂ ಸರಕಾರ ಅವುಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೂಳ್ಳುವ ಗೋಜಿಗೆ ಹೋಗುವ ಸಾಹಸ ಮಾಡುವುದಿಲ್ಲ.

ದೇಣಿಗೆ ಹಣದ ಮೇಲೆ ಕಣ್ಣು
ಇದಕ್ಕೆಲ್ಲಾ ಮುಖ್ಯ ಕಾರಣವೇನೆಂದರೆ ಸಂಪತ್ತು. ಹೌದು ಹಿಂದೂ ಮಠ-ಮಂದಿರಗಳಲ್ಲಿ ಸಂಗ್ರಹವಾಗುತ್ತಿರುವ ಅಪಾರ ಧನ ರಾಶಿ ಮತ್ತು ಅವುಗಳ ಬಳಿ ಇರುವ ಆಸ್ತಿಪಾಸ್ತಿಯೇ ಸರಕಾರದ ಹಸ್ತಕ್ಷೇಪಕ್ಕೆ ಕಾರಣವಾಗಿದೆ. ಸಾರ್ವಜನಿಕ ಹಣದ ದುರುಪಯೋಗ, ಆಸ್ತಿ ಕಬಳಿಕೆಯಂತಹ ಅವ್ಯವಹಾರಗಳು ನಡೆಯಬಾರದು ಎನ್ನುವುದು ನಿಜ. ಒಂದು ಜವಾಬ್ದಾರಿಯುತ ಸರಕಾರ ಅಂತಹ ಅವ್ಯವಹಾರಗಳನ್ನು ನೋಡಿಕೊಂಡು ಸುಮ್ಮನೆ ಇರಲಾಗದು ಎನ್ನುವುದೂ ಸರಿ. ಆದರೆ ಈ ಒಂದೇ ಕಾರಣವನ್ನಿಟ್ಟುಕೊಂಡು ಉತ್ತಮ ರೀತಿಯಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಗಳನ್ನು ನಡೆಸಿಕೊಂಡು ಜನಮೆಚ್ಚುಗೆ ಪಡೆದಿರುವ ಮಠಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಯತ್ನ ಸರಿಯಲ್ಲ. ಸರಕಾರದಲ್ಲಿರುವವರು ತಮ್ಮ ಪೂರ್ವಗ್ರಹಗಳಿಂದಾಗಿಯೇ ಇಂತಹ ಯತ್ನ ಮಾಡುವುದಂತೂ ಖಂಡನೀಯ. ರಾಜಕೀಯ ಸ್ವಾರ್ಥ ಸಾಧನೆಗಾಗಿ, ದ್ವೇಷ‌ ಭಾವನೆಯಿಂದ ಇಂತಹ ಯತ್ನ ಮಾಡುವುದರಿಂದ ಸಾವಿರಾರು ವರ್ಷಗಳಿಂದ ಧರ್ಮಕಾರ್ಯದಲ್ಲಿ ತೊಡಗಿಸಿಕೊಂಡ ಮಠಗಳು ಸರ್ಕಾರಿ ನೌಕರಿಶಾಹಿಯ ಕೆಂಪು ಪಟ್ಟಿಯಲ್ಲಿ ಸಿಲುಕಿ ಅನಾಥವಾಗುವಂತಾಗಬಾರದು. ಇದು ಆಸ್ತಿಕರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಂತೆಯೇ ಸರಿ. 

ಸಾವಿರಾರು ವರ್ಷಗಳಿಂದ ಧರ್ಮ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮಠಗಳ, ದೇಗುಲಗಳ ಸೇವಾ ಕಾರ್ಯವನ್ನು ಕಂಡು, ನೀಡಿದ ಹಣ ಸದ್ವಿನಿಯೋಗವಾಗುತ್ತಿದೆಯೆಂಬ ಭರವಸೆಯಿಂದ ಭಕ್ತಾದಿಗಳು ಉದಾರ ದೇಣಿಗೆ ನೀಡುತ್ತಾರೆ. ಮಧ್ವಾಚಾರ್ಯರಿಂದ ಸ್ಥಾಪಿತ ಭವ್ಯ ಪರಂಪರೆಯ ಉಡುಪಿಯ ಅಷ್ಟಮಠ, ಧರ್ಮಸ್ಥಳ ಶ್ರೀ ಮಂಜುನಾಥ ದೇವಾಲಯ, ಶೃಂಗೇರಿ ಮಠಗಳು ಆಧ್ಯಾತ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿವೆ. ಅನೇಕ ಶಿಕ್ಷಣ ಸಂಸ್ಥೆಗಳು ಸರ್ಕಾರದ ನೆರವಿಲ್ಲದೆ ಈ ಧಾರ್ಮಿಕ ಕ್ಷೇತ್ರಗಳ ಉದಾರ ಆರ್ಥಿಕ ನೆರವಿನಿಂದ ನಡೆಯುತ್ತಿವೆ. ಕ್ಷೇತ್ರಕ್ಕೆ ಬರುವ ಲಕ್ಷಾಂತರ ಯಾತ್ರಿಕರಿಗೆ ಊಟ, ವಸತಿ ನೀಡಿ ಸತ್ಕರಿಸುತ್ತಿವೆ. ಧರ್ಮಸ್ಥಳದ ಧರ್ಮಾಧಿಕಾರಿಯವರಂತೂ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಗುರುತರ ಸೇವೆ ಮಾಡುವುದರ ಮೂಲಕ ದೇಶದ ಪ್ರಧಾನಮಂತ್ರಿಯವರಿಂದ ಪ್ರಶಂಸಿಸಲ್ಪಟ್ಟಿದ್ದಾರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಸಹಸ್ರಾರು ಜನರಿಗೆ ಉದ್ಯೋಗಾವಕಾಶ ಮಾಡಿ ಕೊಟ್ಟಿದ್ದಾರೆ. ಲಕ್ಷಾಂತರ ಜನರನ್ನು ಬಡತನದ ರೇಖೆಯಿಂದ ಮೇಲೆತ್ತುವ, ಸಮಾಜದ ವಂಚಿತವರ್ಗಕ್ಕೆ ಸ್ವಾಸ್ಥ ಸೇವೆ ನೀಡುವಂತಹ ಸರಕಾರ ಮಾಡಬೇಕಾದ ಜವಾಬ್ದಾರಿಯನ್ನು ಹೊತ್ತ ಇಂತಹ ಹಲವು ಧಾರ್ಮಿಕ ಸಂಸ್ಥೆಗಳಿವೆ. ಇವಾವುಗಳೂ ಸರಕಾರಕ್ಕೆ ಏಕೆ ಕಾಣುತ್ತಿಲ್ಲ? ಕಾಣುತ್ತಿಲ್ಲವೇ ಅಥವಾ ಕಂಡೂ ಕಾಣದಂತೆ ತಮ್ಮ ದುರಹಂಕಾರ ಮೆರೆಯುತ್ತಿದೆಯೇ?

Advertisement

ಮುಜರಾಯಿ ದೇಗುಲಗಳ ದುಃಸ್ಥಿತಿ
ಈಗಾಗಲೇ ಸರ‌ಕಾರದ ನಿಯಂತ್ರಣದಲ್ಲಿರುವ ರಾಜ್ಯದ ಪ್ರಸಿದ್ಧ ದೇವಸ್ಥಾನಗಳ ಸ್ಥಿತಿಗತಿ ಹೇಗಿದೆ? ಅಲ್ಲಿರುವ ಅವ್ಯವಸ್ಥೆಯಕುರಿತು ಎಷ್ಟು ಹೇಳಿದರೂ ಕಡಿಮೆಯೇ ಎಂದರೆ ತಪ್ಪಾಗದು. ಮುಜರಾಯಿ ಇಲಾಖೆಯ ಅಧೀನದ ದೇವಸ್ಥಾನಗಳ ವ್ಯವಸ್ಥಾಪನಾ ಮಂಡಳಿಗಳು ರಾಜಕಾರಣಿಗಳ ಹಿಂಬಾಲಕರ, ಪುಢಾರಿಗಳ ಪ್ರತಿಷ್ಠೆ ಮೆರೆಯುವ ತಾಣಗಳಾಗಿವೆ. ಸಾವಿರಾರು ಮೈಲು ದೂರದ ಸ್ಥಳಗಳಿಂದ ಬರುವ ಯಾತ್ರಿಗಳು ಕನಿಷ್ಟ ಸೌಲಭ್ಯವೂ ಇಲ್ಲದೇ ಯಾಕಾದರೂ ಬಂದೆವಪ್ಪ ಎಂದು 

ದುಃಖೀಸುವ ಸ್ಥಿತಿಯಲ್ಲಿವೆೆ. ಬಡ ಆಸ್ತಿಕರು ಫ‌ುಟ್‌ಪಾತ್‌ಗಳಲ್ಲಿ ಎಟಿಎಮ್‌ಗಳ ಎದುರುಗಡೆ ಮಲಗಿ ರಾತ್ರಿ ಕಳೆಯಬೇಕಾದ 
ಸ್ಥಿತಿ ಇದೆ. ದಿನವೊಂದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಯಾತ್ರಿಕರು ಬರುವ, ವಿದೇಶಿ ಪ್ರವಾಸಿಗರನ್ನೂ ಸೆಳೆಯುವ, ಕೋಟ್ಯಂತರ ರೂ. ಆದಾಯ ಗಳಿಸುವ ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇಗುಲ ನಗರಗಳಲ್ಲಿ ಸರಿಯಾದ ಒಳಚರಂಡಿ ಇಲ್ಲದೇ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿಯಿದೆ. ಕಸದ ರಾಶಿಯ ಗುಡ್ಡೆ ಬೀಳುತ್ತಿದ್ದರೂ ಸರಿಯಾಗಿ ವಿಲೇವಾರಿ ಇಲ್ಲದೇ ಕೊಳೆತು ನಾರುವ ಸ್ಥಿತಿ ಇದೆ. ಅಮೆರಿಕದಂತಹ ಕ್ರಿಶ್ಚಿಯನ್‌ ಬಹುಸಂಖ್ಯಾತ ದೇಶದಲ್ಲೂ ಸರಕಾರಿ ಹಣವನ್ನು ಚರ್ಚ್‌ಗಳಿಗಾಗಿ ವಿನಿಯೋಗಿಸುವುದು ಕಾನೂನು ಬಾಹಿರ. ನಮ್ಮ ಸಂವಿಧಾನ ದೇಶವನ್ನು ಜಾತ್ಯತೀತ ರಾಷ್ಟ್ರವೆಂದು ಘೋಷಿಸಿದ್ದರೂ ಸರಕಾರಗಳು ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳಿಗೆ, ಸಮುದಾಯ ಭವನಗಳಿಗೆ ಯಥೇಚ್ಚ ಅನುದಾನ ನೀಡಿದ ಅಂಕಿ ಅಂಶಗಳನ್ನು ಆರ್‌ಟಿಐ ಕಾರ್ಯಕರ್ತರು ಹಲವಾರು ಬಾರಿ ಬಯಲಿಗೆಳೆದಿದ್ದಾರೆ. ದೇಗುಲಗಳ ಹಣವನ್ನು ಅನ್ಯ ಧರ್ಮೀಯರಿಗಾಗಿ ವಿನಿಯೋಗಿಸಲಾಗುತ್ತಿದೆ ಎನ್ನುವ ವದಂತಿಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸರ್ಕಾರ, ತಾನು ಮಾಡಬೇಕಾದ ಮೂಲ ಕರ್ತವ್ಯಗಳೆಡೆಗೆ ಗಮನ ಹರಿಸುವುದು ಬಿಟ್ಟು ಸುಸೂತ್ರವಾಗಿ ನಡೆಯುತ್ತಿರುವ ಧಾರ್ಮಿಕ ಸಂಸ್ಥಾನಗಳ ಹೊರೆ ಹೊರಲು ಆತುರ ತೋರುವುದು ಸರಿಯಲ್ಲ. ಸರಕಾರದಲ್ಲಿರುವವರು ವೈಯಕ್ತಿಕ ವ್ಯಕ್ತಿ ಪ್ರತಿಷ್ಠೆಗಳನ್ನು ಬದಿಗಿಟ್ಟು ರಾಜಧರ್ಮ ಪಾಲಿಸಲಿ. 

ಸಂಘಟಿತ ವಿರೋಧವೆ ಮದ್ದು
ಸರ್ವೇ ಜನಾ ಸುಖೀನೋ ಭವಂತು, ಲೋಕಾ ಸಮಸ್ತ ಸುಖೀನೋ ಭವಂತು ಎನ್ನುವ ಉದಾತ್ತ ಚಿಂತನೆಯ ಸಾವಿರಾರು ವರ್ಷಗಳ ಇತಿಹಾಸದ ಸನಾತನ ಧರ್ಮ ಆಕ್ರಮಣಕಾರರ, ಸಾಮ್ರಾಜ್ಯ ಶಾಹಿಗಳ ದಬ್ಟಾಳಿಕೆಯನ್ನು ಎದುರಿಸಿಯೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ನಮ್ಮಿಂದ ಚುನಾಯಿತವಾದ ನಮ್ಮದೇ ಸರಕಾರ ನಮ್ಮ ಪರಂಪರೆಯನ್ನು ಉಳಿಸಿ ಪೋಷಿಸುತ್ತಿರುವ ಮಠ ಮಂದಿರಗಳಿಗೆ ಬೀಗ ಜಡಿಯಲು ಯೋಚಿಸುತ್ತಿರುವುದು ವಿಷಾದನೀಯ. ಸಂಘಟಿತ ಪ್ರತಿರೋಧ ಮತ್ತು ಪ್ರಜಾಪ್ರಭುತ್ವದ ಅಸ್ತ್ರವಾದ ಮತ ಪ್ರಯೋಗವೊಂದೇ ದುರಹಂಕಾರಿ ಜನಪ್ರತಿನಿಧಿಗಳನ್ನು ಸರಿದಾರಿಗೆ ತರಬಲ್ಲದು. ಚಿಕ್ಕ ಜನಾಂಗವಾದ ಯಹೂದಿಗಳು ತಮ್ಮ ಧರ್ಮ-ಸಂಸ್ಕೃತಿಯ ಉಳಿವಿಗಾಗಿ ಸಂಪನ್ನ ಇಸ್ರೇಲ್‌ ನಿರ್ಮಿಸಿಕೊಂಡ ಯಶೋಗಾಥೆ ನಮಗೆ ಸ್ಫೂರ್ತಿ ನೀಡಲಿ. ಧರ್ಮೋ ರಕ್ಷತಿ ರಕ್ಷಿತಃ ಅರ್ಥಾತ್‌ ಯಾರು ಧರ್ಮವನ್ನು ರಕ್ಷಿಸುತ್ತಾರೊ, ಅವರನ್ನು ಧರ್ಮ ರಕ್ಷಿಸುತ್ತದೆ ಎನ್ನುವ ಉಕ್ತಿಯನ್ನು ನೆನಪಿಸಿಕೊಳ್ಳೋಣ.

ಬೈಂದೂರು ಚಂದ್ರಶೇಖರ ನಾವಡ

Advertisement

Udayavani is now on Telegram. Click here to join our channel and stay updated with the latest news.

Next