Advertisement

ಮಧ್ಯವಯಸ್ಸಲ್ಲಿ ಬೊಜ್ಜು ಬರುವುದೇಕೆ?

10:22 PM Nov 18, 2019 | Lakshmi GovindaRaj |

ಕ್ರಮಬದ್ಧ ಆಹಾರ ಸೇವನೆ ಮತ್ತು ಶಾರೀರಿಕ ವ್ಯಾಯಾಮಗಳನ್ನು ಕೇವಲ ಬೊಜ್ಜು ಕರಗಿಸುವ ವಿಧಾನಗಳೆಂದು ಭಾವಿಸದೆ, ಬದುಕಿನ ಭಾಗಗಳೆಂದೇ ಭಾವಿಸಬೇಕು. ಎಷ್ಟು ತಿನ್ನುತ್ತೇವೆ ಅನ್ನುವುದು ಮುಖ್ಯವಲ್ಲ. ಏನು ತಿನ್ನುತ್ತೇವೆ ಎಂಬುದು ಮುಖ್ಯ.

Advertisement

ಮಹಿಳೆ ಮಧ್ಯಮ ವಯಸ್ಸಿಗೆ (40-50 ವಯಸ್ಸು) ಹೆಜ್ಜೆ ಇಟ್ಟಾಗ ಬೊಜ್ಜು ಬರಲು ಪ್ರಾರಂಭವಾಗುತ್ತದೆ. ಆ ವಯೋಮಾನವನ್ನು ಬೊಜ್ಜು ಬೆಳೆಯುವ ಕಾಲ ಎಂದೇ ಕರೆಯುತ್ತಾರೆ. ವಯಸ್ಸಾದಂತೆಲ್ಲ ಶರೀರದಲ್ಲಿ ಹಾರ್ಮೋನ್‌ಗಳ ಅಸಮತೋಲನ ತಲೆದೋರುತ್ತದೆ. ಐಷಾರಾಮಿ ಜೀವನ ಹಾಗೂ ಚಟುವಟಿಕೆ ರಹಿತ ಜೀವನಶೈಲಿಯು ಬೊಜ್ಜಿನ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ.

ನಲವತ್ತು ವಸಂತಗಳು ದಾಟಿದ ನಂತರ, ಮೆದುಳಿನ ಅಡಿಯಲ್ಲಿಯ ಪಿಟ್ಯುಟರಿ ಗ್ರಂಥಿಯ ಪ್ರಚೋದನೆಗೆ ಮಹಿಳೆಯರ ಕಿಬ್ಬೊಟ್ಟೆಯ ಬುಡದ ಅಂಡಾಶಯಗಳು ಪ್ರತಿಕ್ರಿಯೆ ನಿಂತು ಹೋಗುತ್ತದೆ ಅಥವಾ ಕ್ಷೀಣವಾಗುತ್ತದೆ. ಹೀಗಾಗಿ ಲೈಂಗಿಕ ರಸದೂತವಾದ ಈಸ್ಟ್ರೋಜನ್‌ನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. ಥೈರಾಯಿಡ್‌ ಗ್ರಂಥಿಯ ಹಾರ್ಮೋನ್‌ಗಳು ಶರೀರದ ಚಯಾಪಚಯ (Metabolism) ಕ್ರಿಯೆಗೆ ಹೇಗೆ ಅವಶ್ಯವೋ ಹಾಗೆಯೇ ಈಸ್ಟ್ರೋಜನ್‌ ಕೂಡಾ.

ಶರೀರದಲ್ಲಿ ಈಸ್ಟ್ರೋಜನ್‌ ಹೆಚ್ಚಿದಂತೆ ಚಯಾಚಪಯ ಕ್ರಿಯೆ ಹೆಚ್ಚಾಗುತ್ತದೆ. ಆಮ್ಲಜನಕದ ಉಪಯೋಗದಲ್ಲಿ ಹೆಚ್ಚಳವಾಗುತ್ತದೆ. ಕ್ಯಾಲರಿಗಳ ಕೋರಿಕೆ ಬಹಳವಾಗುತ್ತದೆ. ಈಸ್ಟ್ರೋಜನ್‌ನ ಕೊರತೆ ಮಧ್ಯಮ ವಯಸ್ಸಿನ ಮಹಿಳೆಯರಲ್ಲಿ ತಲೆದೋರುವುದರಿಂದ ಇವುಗಳ ತದ್ವಿರುದ್ಧದ ಪರಿಣಾಮಗಳಿಗೆ ಹಾದಿ ಮಾಡಿ ಕೊಡುತ್ತದೆ. ಜೊತೆಗೆ ಮಹಿಳೆಯರು ತಮ್ಮ ಚಟುವಟಿಕೆಗಳಿಗೆ ತಕ್ಕಂತೆ ಆಹಾರ ಸೇವನೆಯಲ್ಲಿ ಮಾರ್ಪಾಡು ಮಾಡದಿದ್ದಾಗ, ಅವರಿಗೇ ಅರಿವಿಲ್ಲದಂತೆ ಬೊಜ್ಜಿನ ಬೆಳವಣಿಗೆ ಹೆಚ್ಚುತ್ತದೆ.

ನಾನಿನ್ನು ಆರಾಮು…: ಮಧ್ಯಮ ವಯಸ್ಸಿನಲ್ಲಿ ಮಹಿಳೆಯರು ಮಕ್ಕಳನ್ನು ಬೆಳೆಸುವ ದೈಹಿಕ ಹಾಗೂ ಮಾನಸಿಕ ಒತ್ತಡ ಹಾಗೂ ಪರಿಶ್ರಮಗಳಿಂದ ಬಿಡುಗಡೆ ಪಡೆದಿರುತ್ತಾರೆ. ಈ ಹಂತದಲ್ಲಿ ಬದುಕು ಸಾಮಾನ್ಯವಾಗಿ ಶಾಂತಿ ಹಾಗೂ ಆಲಸ್ಯಗಳ ಸಂಗಮವಾಗಿರುತ್ತದೆ. ಶಕ್ತಿಯ ವಿನಿಯೋಗ ಕಡಿಮೆಯಾಗುತ್ತದೆ. ನಾನಿನ್ನು ಆರಾಮಾಗಿ ಕಾಲ ಕಳೆಯಬೇಕು ಎಂಬ ಐಷಾರಾಮಿ ಭಾವನೆಯೂ ಮೂಡಬಹುದು.

Advertisement

ಇವೆಲ್ಲವುಗಳ ಪರಿಣಾಮಗಳು ಒಂದಕ್ಕೊಂದು ಪೂರಕ, ಪೋಷಕಗಳಾಗಿ ಸಹಕರಿಸುತ್ತವೆ. ಬೊಜ್ಜು ಶೇಖರಣೆಗೆ ಸಹಾಯಕವಾಗುತ್ತದೆ. ಬೊಜ್ಜು ಶೇಖರಣೆ ಆಲಸ್ಯತನಕ್ಕೂ, ಆಲಸ್ಯತನ ಬೊಜ್ಜು ಶೇಖರಣೆಗೂ ಎಡೆ ಮಾಡಿಕೊಡುತ್ತದೆ. ಹೀಗಾಗಿ, ಒಮ್ಮೆ ಆದಿ ಅಂತ್ಯಗಳಿಲ್ಲದ ಈ ವಿಷವೃತ್ತದ ತಿರುಗುಣಿ ಮಡುವಿಗೆ ಸಿಕ್ಕ ಮಧ್ಯಮ ವಯಸ್ಸಿನ ಮಹಿಳೆ ಅದರಿಂದ ಹೊರಬರಲು ಹೋರಾಡಬೇಕಾಗುತ್ತದೆ.

ತೂಕ, ಬೊಜ್ಜು ಬೇರೆ ಬೇರೆ: “ಹೆಚ್ಚುವರಿ ತೂಕ’ (Over Weight ‘Balanced) ಹಾಗೂ ಬೊಜ್ಜು (Obese) ಒಂದೇ ಅರ್ಥ ಬರುವ ಪದಗಳಲ್ಲ. ಹೆಚ್ಚುವರಿ ತೂಕದವರು ಬೊಜ್ಜಿನವರೇ ಆಗಿರಬೇಕಿಲ್ಲ. ಪರಿಶ್ರಮ ಜೀವಿಗಳಲ್ಲಿ ಮಾಂಸಖಂಡಗಳು ಬಲಿಷ್ಠವಾಗಿ ಬೆಳವಣಿಗೆ ಆಗುವುದರಿಂದಾಗಿ ತೂಕ ಹೆಚ್ಚುವರಿಯಾಗಬಹುದು. ಅದನ್ನು ಬೊಜ್ಜು ಎನ್ನಲಾಗದು. ಬೊಜ್ಜಿನ ಮಹಿಳೆಯರಿಗೆ ಹೃದ್ರೋಗ, ರಕ್ತನಾಳಗಳಿಗೆ ಸಂಬಂಧಪಟ್ಟ ಕಾಯಿಲೆಗಳ ಪಿತ್ತಕೋಶದ ರೋಗಗಳ ಸಕ್ಕರೆ ಕಾಯಿಲೆಯ ಹಾವಳಿ, ಹಾಹಾಕಾರ ಹೆಚ್ಚು ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ.

ಸಾಮಾನ್ಯವಾಗಿ ಬೊಜ್ಜಿನ ಪ್ರಜ್ಞೆ ಚಿತ್ತದಲ್ಲಿ ಚುಚ್ಚಿದ ಮೊದಲ ವಾರಗಳಲ್ಲಿ ಮಹಿಳೆಯರು ಕಠಿಣ ಪಥ್ಯದ ಗೀಳಿಗೆ ಬೀಳುತ್ತಾರೆ. ದೈಹಿಕ ವ್ಯಾಯಾಮಕ್ಕೂ ಮುಂದಾಗುತ್ತಾರೆ. ಪ್ರಾರಂಭದ ಮೂರು ನಾಲ್ಕು ವಾರಗಳಲ್ಲಿ ಸ್ವಲ್ಪ ತೂಕ ಇಳಿಸುವಲ್ಲಿ ಯಶಸ್ವಿಯಾದರೂ, ಪಥ್ಯದ ಗೀಳಿಗೆ ಜೋತುಬಿದ್ದ ನಾಲಗೆ ಹೆಚ್ಚು ದಿನ ಇವರ ಮಾತು ಕೇಳುವುದಿಲ್ಲ. ಡಯಟ್‌, ವ್ಯಾಯಾಮದಿಂದ ಬೇಸರವಾಯ್ತೆಂದು ನಿಲ್ಲಿಸಿಬಿಟ್ಟರೆ, ಇಳಿದ ಬೊಜ್ಜು ಮತ್ತೆ ಬೆಳೆದು ಮೊದಲಿನ ಸ್ಥಿತಿಗೇ ಮುಟ್ಟುತ್ತದೆ.

ಹಾಗಾಗಿ, ಕ್ರಮಬದ್ಧ ಆಹಾರ ಸೇವನೆ ಮತ್ತು ಶಾರೀರಿಕ ವ್ಯಾಯಾಮಗಳನ್ನು ಕೇವಲ ಬೊಜ್ಜು ಕರಗಿಸುವ ವಿಧಾನಗಳೆಂದು ಭಾವಿಸದೆ, ಬದುಕಿನ ಭಾಗಗಳೆಂದೇ ಭಾವಿಸಬೇಕು. ಎಷ್ಟು ತಿನ್ನುತ್ತೇವೆ ಅನ್ನುವುದು ಮುಖ್ಯವಲ್ಲ. ಏನು ತಿನ್ನುತ್ತೇವೆ ಎಂಬುದು ಮುಖ್ಯ. ಬೊಜ್ಜು ಇಳಿಸುವ ಭರದಲ್ಲಿ ಅಲ್ಲಸಲ್ಲದ ಅಪಾಯಕಾರಿ ಉಪಾಯಗಳ (ತೂಕ ಇಳಿಸುವ ಆಹಾರ, ಮಾತ್ರೆ, ಔಷಧಗಳ) ಮೊರೆ ಹೋದರೆ ಅಪಾಯವಾಗುವುದೇ ಹೆಚ್ಚು.

ಶರೀರಕ್ಕೆ ಎಲ್ಲ ಜೀವಸತ್ವ ಲವಣಾಂಶಗಳನ್ನು ಪೂರೈಸುವ ಸಮತೋಲ ಆಹಾರವನ್ನೇ ಸೇವಿಸಬೇಕು. ಬೊಜ್ಜು ಶೇಖರಣೆಗೆ ಸಹಾಯಕವಾಗುವ ಪದಾರ್ಥಗಳನ್ನು ವರ್ಜಿಸಬೇಕು. ಕಡಿಮೆ ಕ್ಯಾಲೊರಿಯ ಪದಾರ್ಥಗಳತ್ತ ಮನಸ್ಸು ಮಾಡಬೇಕು. ಈಜಿಛಿಠಿ ಠಿಟ Diet to Boost and not to burst the body, ಎಂಬ ಮಾತನ್ನು ಪಾಲಿಸಬೇಕು.

ಕಸ-ಮುಸುರೆ ಮಾಡಿ ಸಾಕು: ಮಹಿಳೆಯರು ಮನೆಗೆಲಸ ಮಾಡುವಾಗ ಆಮ್ಲಜನಕದ ವಿನಿಯೋಗ, ಕ್ಯಾಲೊರಿಗಳ ಖರ್ಚು ಹೆಚ್ಚುತ್ತದೆ. ಎಂಬುದು ಅಧ್ಯಯನಗಳಿಂದ ಖಚಿತವಾಗಿದೆ. ಬೊಜ್ಜು ಕರಗಿಸಲು ಆಟದ ಬಯಲಿನ ವ್ಯಾಯಾಮ ಬೇಕೆಂದೇನೂ ಇಲ್ಲ. ಕಸಮುಸುರೆ ಕೆಲಸ, ನೆಲ ಸಾರಿಸುವುದು, ತೊಳೆಯುವುದು, ಕಪಾಟು ಸ್ವತ್ಛ ಮಾಡಿ ಪಾತ್ರೆ ಪಗಡಿಗಳನ್ನು ಓರಣವಾಗಿಸುವುದು,

ಬಟ್ಟೆ ಬರೆ ತೊಳೆಯುವುದು ಕೂಡಾ ಕ್ಯಾಲೊರಿಗಳ ಖರ್ಚಿಗೆ, ಬೊಜ್ಜು ಇಳಿಕೆಗೆ ಸಹಾಯ ಮಾಡುತ್ತದೆ ಎಂಬುದನ್ನು ನೆನಪಿಡಿ. ಇದರಿಂದ ದೈಹಿಕ, ಮಾನಸಿಕ, ಸ್ವಾಸ್ಥ್ಯಕ್ಕೆ ಭದ್ರ ಬುನಾದಿಯಾಗುವುದಲ್ಲದೇ, ಆಹಾರಸೇವನೆ ಹಾಗೂ ಬೊಜ್ಜು ಶೇಖರಣೆಯ ನಡುವಿನ ಶೀತಲ ಸಮರ ಶಾಂತಿಯಲ್ಲಿ ಕೊನೆಗೊಳ್ಳುತ್ತದೆ. ಮನೆಕೆಲಸದಾಕೆಯನ್ನು ನಂಬಿ ಗೋಳಾಡುವುದೂ ತಪ್ಪುತ್ತದೆ.

* ಡಾ. ಕರವೀರಪ್ರಭು

Advertisement

Udayavani is now on Telegram. Click here to join our channel and stay updated with the latest news.

Next