Advertisement
ಗೌರಿಯ ಗಂಡ ಬಿಸಿನೆಸ್‌ಮನ್. ಒಂದಿಷ್ಟು ಕೈ ಬಿಗಿಹಿಡಿದು ಖರ್ಚು ಮಾಡುತ್ತಾನೆ. ಈ ಕಾರಣಕ್ಕೇ ಗೌರಿಗೆ ಗಂಡನೆಂದರೆ ಅಸಮಾಧಾನ, ತಾತ್ಸಾರ. “ಪಕ್ಕದ್ಮನೆ ಪಂಕಜಾಳ ಗಂಡನನ್ನ ನೋಡಿ ಕಲಿತುಕೊಳಿ. ಮೊನ್ನೆ ಅವಳು ಹಾಗೇ ಸುಮ್ಮನೆ ಮಾತಾಡುತ್ತಾ, ಸೀರೆ ತಗೋಬೇಕಿತ್ತು’ ಅಂದಳಂತೆ. ಅಷ್ಟಕ್ಕೇ ಅವನು ಮರುಮಾತಾಡದೆ, ಹತ್ತು ಸಾವಿರ ರೂ. ತೆಗೆದು ಟೇಬಲ್ ಮೇಲಿಟ್ಟು ಹೋದನಂತೆ. ನೀವೂ ಇದೀರ ದಂಡಕ್ಕೆ! ಆರು ಸಾವಿರ ಕೇಳಿದ್ರೆ ಎರಡು ಸಾವಿರ ಕೊಟ್ಟು ಹೋಗಿಬಿಡ್ತೀರ’ ಎಂದೆಲ್ಲ ಅವಳು ಅವಾಗಾವಾಗ ಜೋರು ಮಾಡುತ್ತಾಳೆ. ಅವಳಿಗೆ ಗಂಡನಲ್ಲಿ ಏನೋ ಕೊರತೆ ಕಾಣಿಸುತ್ತದೆ. ನನ್ನ ಗಂಡನೂ ಪಕ್ಕದ್ಮನೆಯವಳ ಗಂಡನ ಥರಾನೇ ಇರಬಾರದಿತ್ತೆ ಅನಿಸುತ್ತದೆ!ರಫೀಕ್, ಎನ್ ಫೀಲ್ಡ್ ಬೈಕ್‌ನ ಒಡೆಯ. ‘ಒಂದೂಕಾಲು ಲಕ್ಷ ಕೊಟ್ಟು ಅದನ್ನು ತಗೊಂಡೆ’ ಅನ್ನುವುದು ಅವನ ಮಾತು. ದಿನವೂ ಬೈಕ್‌ನ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದವನು ವಾರದಿಂ ದ ಮಂಕಾಗಿದ್ದಾನೆ. ಡಿಪ್ರಶನ್‌ಗೆ ಹೋದವನಂತೆ ವರ್ತಿಸುತ್ತಿದ್ದಾನೆ. ಇದ್ದಕ್ಕಿದ್ದಂತೆ ಇವನಿಗೆ ಏನಾಯಿತು ಎಂದು ವಿಚಾರಿಸಿದರೆ, ಎದುರು ಮನೆಯವನು ಎರಡು ಲಕ್ಷ ಕೊಟ್ಟು ನ್ಪೋರ್ಟ್ಸ್ ಬೈಕ್ ಖರೀದಿಸಿರುವ ಸಂಗತಿ ತಿಳಿಯಿತು. ಈ ಕಾರಣಕ್ಕೆ ಆತ ಖನ್ನನಾಗಿದ್ದ.
****
ಯಾಕೆ ಹೀಗಾಗುತ್ತದೆ? ಇರುವುದೆಲ್ಲ ವನ್ನೂ ಬಿಟ್ಟು ಇಲ್ಲದ್ದಕ್ಕೆ ಈ ಹಾಳು ಮನಸೇಕೆ ಮನಸ್ಸು ಆಸೆಪಡುತ್ತದೆ ಎಂಬ ಪ್ರಶ್ನೆಗೆ “ಇದಮಿತ್ಥಂ’ ಎಂಬಂಥ ಉತ್ತರವಿಲ್ಲ. ಆದರೆ ಅಂಥದೊಂದು ತಹತಹಕ್ಕೆ ಆಸೆಯೇ (ದುರಾಸೆಯೇ) ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಮನುಷ್ಯ ಅನ್ನಿಸಿಕೊಂಡ ಮೇಲೆ ಎಲ್ಲರೂ ಒಂದೇ ರೀತಿ ಇರಲು, ಬದುಕಲು ಸಾಧ್ಯವಿಲ್ಲ. ಈ ಸಂಗತಿ ಎಲ್ಲರಿಗೂ ಗೊತ್ತಿರುತ್ತದೆ. ಹಾಗಿದ್ದರೂ ಕೈಗೆ ಎಟುಕದ ದ್ರಾಕ್ಷಿಗೇ ಎಲ್ಲರೂ ಆಸೆ ಪಡುತ್ತಾರೆ. ಈ ಭೂಮಿ ಮೇಲೆ ಯಾರೂ ಶಾಶ್ವತವಲ್ಲ ಎಂದು ವೇದಾಂತ ಹೇಳುವವನೂ ಒಮ್ಮೆ ತನ್ನ ಬೋಳು ನೆತ್ತಿಯನ್ನು ಸವರಿಕೊಂಡು ಎದುರಿಗೆ ಕೂತವನ ಹಿಪ್ಪೆ ಕೂದಲಿನ ತಲೆಯನ್ನೇ ಆಸೆಯಿಂದ ನೋಡುತ್ತಾನೆ. ಆ ಕ್ಷಣಕ್ಕೆ ಅವನ ವಿದ್ಯೆ, ಅರಿವು, ಅಗಾಧ ಜ್ಞಾನ ಎಲ್ಲವೂ ಮಾಯವಾಗಿ, ಆತ ಸಾಮಾನ್ಯ ಮನುಷ್ಯನಂತೆ ಯೋಚಿಸಲು ತೊಡಗುತ್ತಾನೆ. ಇಲ್ಲದ್ದರ ಬಗ್ಗೆ ಧ್ಯಾನಿಸುವವರ ವಿವರ ಇಷ್ಟಕ್ಕೇ ನಿಲ್ಲುವುದಿಲ್ಲ. ಮೈತುಂಬ ಒಡವೆ ಹೇರಿಕೊಂಡಿದ್ದರೂ- “ನಿಮ್ಮ ಆಫೀಸಿನಲ್ಲಿ ಯಾರೋ ಅಪರಿಚಿತರಿಗೆ ದಾನ ಮಾಡೋಕೆ ಹಣವಿರುತ್ತೆ. ನಾನು ಒಂದು ಒಡವೆ ಕೇಳಿದ್ರೆ ದುಡ್ಡಿಲ್ಲ ಅಂತೀರಲಿ?’ ಎಂದು ರೇಗುವ ಹೆಂಡತಿ; ಹುಡುಗ ಹಳ್ಳಿಯಲ್ಲಿದ್ದಾನೆ ಎಂಬ ಕಾರಣದಿಂದಲೇ ಮದುವೆಗೆ ಒಪ್ಪದೆ, ಬೆಂಗಳೂರಿನ ಗಂಡೇ ಬೇಕು ಎಂದು ಹಟ ಹಿಡಿಯುವ ಹುಡುಗಿ; ಯಾವುದೋ ಗಾಳಿಮಾತು ಕೇಳಿ, ಅದನ್ನೇ ನಿಜವೆಂದು ಭಾವಿಸಿ- “ಛೆ, ನಾನು ಅಂಥ ಕಡೆ ಕೆಲಸ ಮಾಡಬೇಕಿತ್ತು’ ಎಂದು ಹೇಳಿಕೊಂಡು ನರಳುವ ನಾವು-ನೀವು, ಸದಾ ಇರದುದರ ಕಡೆಗೇ ಯೋಚಿಸುವವರೇ.ಯಾಕೆ ಹೀಗಾಗುತ್ತದೆ ಎಂದರೆ ಒಬ್ಬೊಬ್ಬರು ಒಂದೊಂದು ಕಾರಣ ಹೇಳಬಹುದು. ಆದರೆ ಎಟುಕದ ದ್ರಾಕ್ಷಿಗೆ ಆಸೆಪಟ್ಟವರೆಲ್ಲ ನಿರಾಸೆಯ ಜತೆಗೇ ಬದುಕುವಂತಾಗುತ್ತದೆ ಎಂಬುದಷ್ಟೇ ಸತ್ಯ.
Related Articles
Advertisement