ಹರಪನಹಳ್ಳಿ: ಪಟ್ಟಣದ ತಾಲೂಕು ಪಂಚಾಯ್ತಿ ರಾಜೀವ್‌ಗಾಂಧಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಪಂ ಸಾಮಾನ್ಯ ಸಭೆ ಮನೆಗಳ ಹಂಚಿಕೆ ವಿಚಾರವಾಗಿ ಸದಸ್ಯರ ಕೂಗಾಟ, ಗದ್ದಲ, ಗೊಂದಲ, ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ನಡೆಯಿತು.
ವಿವಿಧ ಯೋಜನೆಯಡಿ ಬಡವರಿಗೆ ಮನೆಗಳ ಹಂಚಿಕೆ ವಿಷಯ ಚರ್ಚೆಗೆ ಬಂದಾಗ ನೀವು ಒಂದು ವರ್ಷ ಏನು ಮಾಡಿದ್ದೀರಿ, ಕೆಡಿಪಿ ಸಭೆ ಡುವ ಮುನ್ನ ಎಲ್ಲಾ ಸದಸ್ಯರನ್ನು ಕರೆದು ಅಭಿವೃದ್ಧಿ ಕುರಿತು ಚರ್ಚಿಸಬೇಕು, ಪಂಚಾಯ್ತಿ ಪಿಡಿಒಗಳು ಬಡವರಿಗೆ ಮನೆ ಹಂಚಿಕೆ ವಿಚಾರದಲ್ಲಿ ಗ್ರಾಮ ಸಭೆ ಮಾಡುವುದಿಲ್ಲ,
ನೀವು ಏನು ಕ್ರಮ ಕೈಗೊಂಡಿದ್ದೀರಿ ಎಂದು ಸದಸ್ಯರಾದ ಓ.ರಾಮಪ್ಪ, ವೆಂಕಟೇಶರೆಡ್ಡಿ, ಲತಾ, ಈರಣ್ಣ ಅಧ್ಯಕ್ಷರು, ಉಪಾದ್ಯಕ್ಷರು ಅವರುಗಳು ಇಒ ರೇವಣ್ಣ ಅವರನ್ನು ಪ್ರಶ್ನಿಸಿದರು. ಇಒ ರೇವಣ್ಣ ಅವರು ಮನೆ ಹಂಚಿಕೆ ಮಾಡಲು ತಾಪಂ ಸಮಿತಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಗ್ರಾಮ ಸಭೆಗೆ ಮಾತ್ರ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದರು.
ತಾಪಂ ಸದಸ್ಯರಿಗೆ ಅ ಧಿಕಾರವಿಲ್ಲ ಅಂದರೆ ನಾವು ಏತಕ್ಕೆ ಇರಬೇಕು ಎಂದು ಓ.ರಾಮಪ್ಪ, ವೆಂಕಟೇಶರೆಡ್ಡಿ, ಬಸವನಗೌಡ ಅಸಮಾಧಾನ ವ್ಯಕ್ತಪಡಿಸಿ ಈ ಮನೆಗಳ ವಿಷಯ ಇತ್ಯರ್ಥವಾಗುವವರೆಗೂ ಸಭೆ ಬೇಡ ಎಂದು ಇತರರು ಸಭೆಯಿಂದ ಹೊರ ನಡೆಯಲು ಎದ್ದು ನಿಂತರು.
ಲತಾ, ಪ್ರೇಮ ಐರಣಿ ಸೇರಿದಂತೆ ಮಹಿಳಾ ಸದಸ್ಯರು ಸಹ ಹೊರಡಲು ಎದ್ದು ನಿಂತಾಗ ಮತ್ತಿಹಳ್ಳಿ ಪ್ರಕಾಶ, ಗಣೇಶ ಇತರರು ನಾವು ಹೊರಗೆ ಹೋಗುವುದು ಬೇಡ, ಕುಳಿತು ಚರ್ಚಿಸೋಣ ಎಂದು ಹೇಳಿದರು. ಗ್ರಾಮ ಸಭೆ ಮಾಡಲ್ಲ, ಏನು ಕೇಳಿದರೂ ಶಾಸಕರ ಕಡೆ ಕೈ ತೋರಿಸುತ್ತಾರೆ ಎಂದು ಹೇಳುತ್ತಾರೆ.
ನಿಮಗೆ ಶಾಸಕರು ಮನೆ ಕೊಟ್ಟಿರಬಹುದು ಎಂದು ಓ.ರಾಮಪ್ಪ ಅವರಿಗೆ ಪ್ರಕಾಶ ಹಾಗೂ ಗಣೇಶ ಹೇಳಿದಾಗ ಆ ರೀತಿ ಹೇಳಬೇಡಿ ಎಂದು ಓ.ರಾಮಪ್ಪ ತಾಕೀತು ಮಾಡಿದಾಗ ಮಾತಿಗೆ ಮಾತು ಬೆಳೆದು ಚಿಗಟೇರಿ ಬಸವನಗೌಡ ಅವರು ತೀವ್ರ ಸಿಟ್ಟಿಗೆದ್ದು ವಾಗ್ವಾದಕ್ಕಿಳಿದರು. ಈ ಹಂತದಲ್ಲಿ ಅನೇಕರು ಎದ್ದು ವಾದ ಮಾಡುತ್ತಿರುವಾಗ ಗೊಂದಲ ಸಭೆ ಗೂಡಾಯಿತು.
ಅಧ್ಯಕ್ಷರ ವೇದಿಕೆ ಬಳಿ ಎರಡು ಗುಂಪುಗಳ ನಡುವೆ ತೀವ್ರ ವಾಗ್ವಾದ ಜರುಗಿತು. ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಆಗ ಮೇಲಿಂದ ಇಳಿದು ಬಂದ ಉಪಾಧ್ಯಕ್ಷ ಮಂಜನಾಯ್ಕ, ವೆಂಕಟೇಶರೆಡ್ಡಿ ಇತರರು ಸದಸ್ಯರನ್ನು ಸಮಾಧಾನಪಡಿಸಿ ಕುಳಿತುಕೊಳ್ಳುವಂತೆ ಮನವಿ ಮಾಡಿದರು.