ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠ-ಚಿತ್ರದುರ್ಗ
ಈ ತಿಂಗಳ 22ರಂದು ಅಯೋಧ್ಯೆಯಲ್ಲಿ ಭವ್ಯವಾಗಿ ನಿರ್ಮಾಣಗೊಂಡಿರುವ ರಾಮಮಂದಿರದಲ್ಲಿ ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ. ಈ ಕ್ಷಣಕ್ಕಾಗಿ ಇಡೀ ಭಾರತ ಕಾತರದಿಂದ ಕಾಯುತ್ತಿದೆ. ನಮ್ಮ ನ್ನು ಒಳಗೊಂಡು ರಾಜ್ಯದ ಅನೇಕ ಮಠಾಧೀಶರು ಭಾಗವಹಿಸಲಿದ್ದಾರೆ. ಈ ನಡುವೆ ಮಂದಿರದ ಪ್ರಾಣ ಪ್ರತಿಷ್ಠಾಪನೆ-ಭಾಗವಹಿಸುವಿಕೆಗೆ ಸಂಬಂಧಿಸಿ ದಂತೆ ಅಲ್ಲಲ್ಲಿ ಪರ-ವಿರೋಧದ ಚರ್ಚೆಗಳನ್ನು ನೋಡುತ್ತಿದ್ದೇವೆ. ಮಹಾ ಮಾನವತಾವಾದಿ ಡಾ| ಬಿ.ಆರ್.ಅಂಬೇಡ್ಕರ್ ಮಾತನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಸೂಕ್ತವೆನಿಸುತ್ತದೆ. ರಾಮನನ್ನು ನಂಬುವವರ ಮಧ್ಯೆ ವಿರೋಧಿಸುವವರು ನಮ್ಮ ನಡುವೆ ಇರುವುದರಿಂದ ಅಂಬೇಡ್ಕರ್ ಹೇಳಿದ ಮಾತು ಕೆಲವರಿಗೆ ಉತ್ತರವಾಗಬಹುದು.
ಅದು ಸಮಾನ ಹಕ್ಕುಗಳಿಗಾಗಿ ನಡೆದ ಹೋರಾಟ ವಾಗಿತ್ತು. ಮಹಾರಾಷ್ಟ್ರದ ನಾಸಿಕ್‌ನಲ್ಲಿ 1780ರ ದಶಕ ದಲ್ಲಿ ನಿರ್ಮಾಣಗೊಂಡಿದ್ದು ಕಾಳಾರಾಮ ದೇವಾಲಯ. 1930ರವರೆಗೆ ಯಾವುದೇ ದಲಿತ-ಅಸ್ಪೃಶ್ಯರು ಈ ದೇವಾಲಯದ ಆವರಣವನ್ನು ಪ್ರವೇಶಿಸುವಂತಿರಲಿಲ್ಲ. ಅದೇ ವರ್ಷ ಮಾರ್ಚ್ ತಿಂಗಳಲ್ಲಿ ಡಾ|ಅಂಬೇ ಡ್ಕರ್ ಮತ್ತು ಬಿ.ಕೆ.ಗಾಯಕವಾಡ್ ಅವರ ನೇತೃತ್ವದಲ್ಲಿ ಕಾಳಾರಾಮ ದೇವಾಲಯ ಪ್ರವೇಶ ಹೋರಾಟ’ವನ್ನು ಆರಂಭಿಸಲಾಯಿತು. 15 ಸಾವಿರಕ್ಕೂ ಹೆಚ್ಚು ಜನರು ಈ ಹೋರಾಟದಲ್ಲಿ ಭಾಗ ವಹಿಸಿದ್ದರು. ಹೋರಾ ಟದ ಆರಂಭದಲ್ಲಿ ಡಾ| ಅಂಬೇಡ್ಕರ್, ನಮಗೆ ದೇವಾಲಯ ಗಳಿಗೆ ಹೋಗಲು ಇಷ್ಟವಿಲ್ಲ. ಆದರೆ, ನಮಗೆ ಹಕ್ಕುಗಳು ಇರಬೇಕು’ ಎಂದು ಹೇಳಿದ್ದರು.
ಸಮ ಸಮಾಜದ ನಿರ್ಮಾಣ ಹಿನ್ನೆಲೆಯಲ್ಲಿ ಅವರು ಹೇಳಿದ ಈ ಮಾತು ಸೂಕ್ತವೆನಿಸುತ್ತದೆ. ಕೆಲವರು ಹೇಳುತ್ತಾರೆ-ಶ್ರೀರಾಮನ ದೇವ ಸ್ಥಾನವನ್ನು ಅಲ್ಲಿಯೇ ಯಾಕೆ ಕಟ್ಟಬೇಕು. ನಾವು ನಮ್ಮೂರಿನಲ್ಲಿರುವ ರಾಮ ನನ್ನು ನೋಡುತ್ತೇವೆ. ಇನ್ನೂ ಮುಂದುವರಿದು ರಾಮ ಮತ್ತು ಮಂದಿರವನ್ನು ರಾಜಕೀಯಕ್ಕೆ ತಳುಕು ಹಾಕಿ ಮಾತನಾಡುವುದು ವಾಡಿಕೆಯಾಗಿದೆ.
ನಾಗಪುರದ ಮರಾಠವಾಡ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ|ಶಂಕರ್‌ರಾಮ್ ಕಾರತ್ ಅವರು ಬಾಬಾ ಸಾಹೇಬರನ್ನು ಕೇಳುತ್ತಾರೆ.. ನಾಸಿಕ್‌ನಲ್ಲಿ ಅದೆಷ್ಟೋ ದೇವಾಲಯಗಳಿದ್ದರೂ ಇದನ್ನು ಯಾಕೆ ಆಯ್ಕೆ ಮಾಡಿ ಕೊಂಡಿರಿ’ ಎಂದು. ಅದಕ್ಕೆ ಅಂಬೇಡ್ಕರ್, ರಾಮ ತನ್ನ ನಡವಳಿಕೆಯಿಂದ ದೊಡ್ಡವನಾದ. ಆದಿವಾಸಿ ಮಹಿಳೆ ಶಬರಿ ಕೊಟ್ಟ ಎಂಜಲು ಹಣ್ಣನ್ನು ಪ್ರಸಾದವೆಂದು ಸ್ವೀಕರಿಸಿದವನು. ಅಸ್ಪೃಶ್ಯತೆ ಆಚರಿಸುವ ಸವರ್ಣೀಯರು ರಾಮನನ್ನು ಆರಾಧಿ ಸುತ್ತಾರೆ. ಆದರೆ ರಾಮನ ನಡವಳಿಕೆ ಮತ್ತು ಸಭ್ಯತೆ ಮರೆಯುತ್ತಾರೆ. ಈ ಮಾನಸಿಕತೆಯ ಪರಿವರ್ತನೆಯೇ ಕಾಳಾರಾಮ ಮಂದಿರ ಪ್ರವೇಶದ ಗುರಿ’ ಎನ್ನುತ್ತಾರೆ.
ಇದೇ ಕಾರಣಕ್ಕೆ ಈಗ ನಡೆಯುತ್ತಿರುವ ರಾಮ ಮಂದಿರದ ಉದ್ಘಾಟನೆಗೆ ನಾವೆಲ್ಲರೂ ಭಾಗವಹಿಸುತ್ತೇವೆ. 9 ದಶಕಗಳ ಹಿಂದೆ ಅಂಬೇಡ್ಕರ್ ಅವರು ಕಾಳಾರಾಮ ದೇವಾಲಯಕ್ಕೆ ಹೋರಾಟದ ಮೂಲಕ ಶೋಷಿತರಿಗೆ ಪ್ರವೇಶ ಕಲ್ಪಿಸಿದ್ದರೆ, ಇದೀಗ ಅಯೋಧ್ಯೆ ರಾಮಮಂದಿರಕ್ಕೆ ಬಿಹಾರದ ದಲಿತ ನಾಯಕ ಕಾಮೇಶ್ವರ ಚೌಪಾಲ್ ಮೊದಲ ಇಟ್ಟಿಗೆ ಇಡುವ ಮೂಲಕ ಶಿಲಾನ್ಯಾಸ ನೆರವೇರಿಸಿ ಸಾಮರಸ್ಯಕ್ಕೆ ನಾಂದಿ ಹಾಡಿದ್ದಾರೆ. ರಾಮ ನಮ್ಮವನಲ್ಲ, ನಮ್ಮ ರಾಮನೇ ಬೇರೆ ಎನ್ನುವವರಿಗೆ ಇದೇ ಉತ್ತರವಾಗಬಹುದು.
ಐದು ಶತಮಾನಗಳ ಹೋರಾಟ, ಸಾವಿರಾರು ಜನರ ತ್ಯಾಗದ ಫಲವಾಗಿ ಈ ದೇಶದ ನ್ಯಾಯಾಂಗ ವ್ಯವಸ್ಥೆಯಿಂದಾಗಿ ಮತ್ತೂಮ್ಮೆ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ. ಪ್ರಾಣ ಪ್ರತಿಷ್ಠಾಪನೆಯ ದಿನ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದಂತೆ ದೀಪ ಬೆಳಗಿಸಿ ಸಂತಸದ ಕ್ಷಣದಲ್ಲಿ ಭಾಗಿಯಾಗೋಣ.