ಜೈಪುರ್: ರಾಜಸ್ಥಾನ ವಿಧಾನಸಭಾ ಚುನಾವಣೆಯ ಮತಎಣಿಕೆ ನಡೆಯುತ್ತಿದ್ದು, ಭಾರತೀಯ ಜನತಾ ಪಕ್ಷ 117 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷ 68 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಭಾರೀ ಹಿನ್ನಡೆ ಅನುಭವಿಸಿದೆ. ಏತನ್ಮಧ್ಯೆ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ರಾಜ್ಯವರ್ಧನ್ ರಾಥೋಡ್, ರಾಜಸ್ಥಾನದಲ್ಲಿ ಬಿಜೆಪಿ ಜಯಭೇರಿ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:Tamil Nadu: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್, ಓರ್ವ ಮೃತ್ಯು, 20ಮಂದಿಗೆ ಗಾಯ
ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ರಾಜಕಾರಣ ಮತ್ತು ಕಾಂಗ್ರೆಸ್ ನ ದುರಾಡಳಿತದ ನಡುವಿನ ಹೋರಾಟ ಇದಾಗಿದ್ದು, ರಾಜಸ್ಥಾನದಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲಿದೆ ಎಂದು ರಾಥೋಡ್ ಹೇಳಿದರು.
ಇದೊಂದು ರೋಮಾಂಚನಕಾರಿ ದಿನವಾಗಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ದುರಾಡಳಿತ ಕೊನೆಗೊಂಡು, ಬಿಜೆಪಿ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಎನ್ ಡಿಟಿವಿ ಜೊತೆ ಮಾತನಾಡುತ್ತ ತಿಳಿಸಿದ್ದರು.
ಇತ್ತೀಚೆಗೆ ಪ್ರಕಟವಾದ ಮತಗಟ್ಟೆ ಸಮೀಕ್ಷೆಯಲ್ಲಿ ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಗಿಂತ ಬಿಜೆಪಿ ಮೇಲುಗೈ ಸಾಧಿಸಲಿದೆ ಎಂದು ತಿಳಿಸಿತ್ತು. ಆದರೆ ರಾಥೋಡ್ ಪ್ರಕಾರ, ಕಾಂಗ್ರೆಸ್ ಈ ಬಾರಿ ಹೀನಾಯವಾಗಿ ಸೋತು, ಬಿಜೆಪಿ ಭರ್ಜರಿ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂದು ತಿಳಿಸಿದ್ದಾರೆ.
ಮತಗಟ್ಟೆ ಸಮೀಕ್ಷೆಯಲ್ಲಿ ಎಷ್ಟು ಮತದಾರರು ನಿಖರವಾಗಿ ತಮ್ಮ ಅಭಿಪ್ರಾಯ ಹೇಳುತ್ತಾರೆ. ನಮ್ಮ ಬೂತ್ ಮಟ್ಟದ ಸಮೀಕ್ಷೆಯ ಪ್ರಕಾರ ರಾಜಸ್ಥಾನದಲ್ಲಿ ನಾವು ಭರ್ಜರಿ ಬಹುಮತದೊಂದಿಗೆ ಜಯ ಸಾಧಿಸುತ್ತೇವೆ ಎಂಬ ಫೀಡ್ ಬ್ಯಾಕ್ ನಮ್ಮಲ್ಲಿದೆ ಎಂದು ರಾಥೋಡ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.