ನವದೆಹಲಿ: ಇತ್ತೀಚೆಗೆ ರಾಜಸ್ಥಾನ, ಛತ್ತೀಸ್ ಗಢ ಮತ್ತು ಮಧ್ಯಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಜಯಭೇರಿ ಬಾರಿಸುವ ಮೂಲಕ ಅಧಿಕಾರದ ಗದ್ದುಗೆ ಏರಿತ್ತು. ಆದರೆ ಊಹಾಪೋಹಗಳು ಹರಿದಾಡುತ್ತಿದ್ದರೂ ಕೂಡಾ ಮೂರು ರಾಜ್ಯಗಳಿಗೆ ಈವರೆಗೂ ಮುಖ್ಯಮಂತ್ರಿಗಳ ಹೆಸರನ್ನು ಘೋಷಿಸಿಲ್ಲ.
ಇದನ್ನೂ ಓದಿ:Kaiva ಅಮರಪ್ರೇಮಿಯ ರಕ್ತಚರಿತ್ರೆ; ಬಜಾರಿಗೆ ಬಂತು ಧನ್ವೀರ್ ಚಿತ್ರ
ಈ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಉಲ್ಲೇಖಿಸದೇ ಬಿಜೆಪಿ ಸ್ಪರ್ಧಿಸಿತ್ತು. ಗುರುವಾರ (ಡಿಸೆಂಬರ್ 07) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ ಸಮಾಲೋಚನೆ ನಡೆಸಿದ್ದರು ಎಂದು ವರದಿ ತಿಳಿಸಿದೆ.
ಮಧ್ಯಪ್ರದೇಶ, ಛತ್ತೀಸ್ ಗಢ್ ಮತ್ತು ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಯಾರಾಗಬೇಕೆಂದು ಡಿಸೆಂಬರ್ 10ರಂದು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ನಡ್ಡಾ ಭೋಪಾಲ್ ನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದರು.
ಈ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಶಾಸಕರ ಪೈಕಿ ನಾಯಕರನ್ನು ಆಯ್ಕೆ ಮಾಡುತ್ತಾರೆಯೋ ಅಥವಾ ಹೊರಗಿನಿಂದ ಯಾರನ್ನಾದರು ಆಯ್ಕೆ ಮಾಡುತ್ತಾರೋ ಎಂಬ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗೀಯ ಬಹಿರಂಗಪಡಿಸಿಲ್ಲ ಎಂದು ವರದಿ ವಿವರಿಸಿದೆ.
ಮೂರು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಮೂವರು ವೀಕ್ಷಕರನ್ನು ನೇಮಕ ಮಾಡುವ ಸಾಧ್ಯತೆ ಇರುವುದಾಗಿ ಬಿಜೆಪಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.