Advertisement

BJP: ಜೆ.ಪಿ.ನಡ್ಡಾ ಬಳಿಕ ಯಾರಾಗಲಿದ್ದಾರೆ ಬಿಜೆಪಿ ಅಧ್ಯಕ್ಷ? ರೇಸ್ ನಲ್ಲಿದೆ ಹಲವು ಹೆಸರುಗಳು

05:08 PM Jun 10, 2024 | Team Udayavani |

ಹೊಸದಿಲ್ಲಿ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ರವಿವಾರ ನರೇಂದ್ರ ಮೋದಿ ಅವರ ಸಂಪುಟಕ್ಕೆ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕ್ಯಾಬಿನೆಟ್ ಸೇರಿದ ಕಾರಣದಿಂದ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನದಿಂದ ಕೆಳಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ.

Advertisement

ನಡ್ಡಾ ಅವರು 2014ರಿಂದ 2019ರವರೆಗೆ ಮೋದಿ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು. ಆಗ ಅಮಿತ್ ಶಾ ಅವರು ಬಿಜೆಪಿ ಅಧ್ಯಕ್ಷರಾಗಿದ್ದರು. 2019ರ ಚುನಾವಣೆಯ ಬಳಿಕ ಶಾ ಗೃಹ ಸಚಿವರಾಗಿ ಸಂಪುಟದ ಸೇರಿದ ಬಳಿಕ ನಡ್ಡಾ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.

2023ರ ಸಪ್ಟೆಂಬರ್ ನಲ್ಲಿ ನಡ್ಡಾ ಅವರ ಅವಧಿ ಅಂತ್ಯವಾಗಿತ್ತು. ಆದರೆ ಚುನಾವಣೆಯ ಕಾರಣದಿಂದ ಅಧಿಕಾರವಧಿ ವಿಸ್ತರಿಸಲಾಗಿತ್ತು. ಇದೀಗ ಬಿಜೆಪಿ ಹೊಸ ಅಧ್ಯಕ್ಷರ ಹುಡುಕಾಟದಲ್ಲಿದೆ.

ಹಲವರು ಇದ್ದಾರೆ ರೇಸ್ ನಲ್ಲಿ

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಲೋಕಸಭೆಯಲ್ಲಿ ಹಿನ್ನಡೆ ಅನುಭವಿಸಿರುವ ಉತ್ತರದ ರಾಜ್ಯಗಳಲ್ಲಿ ಬಿಜೆಪಿ ಈಗ ತನ್ನ ಸಂಘಟನೆಯ ಬಲವನ್ನು ಹೆಚ್ಚಿಸಿಕೊಂಡಿರುವುದರಿಂದ ಅಮಿತ್ ಶಾ ಅವರು ಅಧ್ಯಕ್ಷ ಸ್ಥಾನಕ್ಕೆ ಮರಳಬಹುದು ಅಥವಾ ಧರ್ಮೇಂದ್ರ ಪ್ರಧಾನ್ ಅಥವಾ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಜವಾಬ್ದಾರಿಯನ್ನು ವಹಿಸಬಹುದು ಎಂದು ಮೊದಲು ಊಹಿಸಲಾಗಿತ್ತು. ಆದರೆ ಅವರೆಲ್ಲರೂ ಮೋದಿ ಕ್ಯಾಬಿನೆಟ್ ಸೇರಿದ್ದಾರೆ.

Advertisement

ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಮಹಾರಾಷ್ಟ್ರದಲ್ಲಿ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿರುವ ಕಾರಣ ವಿನೋದ್ ಹೆಸರು ಪ್ರಮುಖವಾಗಿದೆ.

ತೆಲಂಗಾಣದ ಬಿಜೆಪಿಯ ಒಬಿಸಿ ಮೋರ್ಚಾ ಮುಖ್ಯಸ್ಥ ಕೆ ಲಕ್ಷ್ಮಣ್ ಅವರನ್ನು ಹುದ್ದೆಗೆ ಪರಿಗಣಿಸಲಾಗುತ್ತಿದೆ. ಆಂಧ್ರಪ್ರದೇಶದ ನಂತರ ತೆಲಂಗಾಣ ಬಿಜೆಪಿಯ ಮುಂದಿನ ಪ್ರಮುಖ ರಾಜ್ಯವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಲಕ್ಷ್ಮಣ್ ಅವರು ಕೂಲ್ ಮತ್ತು ಆಕ್ರಮಣಕಾರಿ ಎಂಬ ಸಮತೋಲಿತ ವಿಧಾನಕ್ಕೆ ಹೆಸರುವಾಸಿಯಾಗಿದ್ದಾರೆ.

ಇನ್ನೊಬ್ಬ ಸ್ಪರ್ಧಿ ಸುನಿಲ್ ಬನ್ಸಾಲ್, ಪ್ರಸ್ತುತ ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಒಡಿಶಾದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ರಾಜಸ್ಥಾನದ ರಾಜ್ಯ ಸಭಾ ಸದದ್ಯ ಓಂ ಮಾಥುರ್ ಕೂಡಾ ಈ ಸ್ಪರ್ಧೆಯಲ್ಲಿದ್ದಾರೆ.

ಉಳಿದಂತೆ ಈ ಬಾರಿ ಸಚಿವ ಸ್ಥಾನ ಕಳೆದುಕೊಂಡ ಸ್ಮೃತಿ ಇರಾನಿ ಮತ್ತು ಅನುರಾಗ್ ಠಾಕೂರ್ ಅವರ ಹೆಸರು ಕೂಡಾ ಕೇಳಿ ಬರುತ್ತಿದೆ. ಒಂದು ವೇಳೆ ಇರಾನಿ ಅಧ್ಯಕ್ಷರಾದರೆ ಬಿಜೆಪಿಯ ಮೊದಲ ಮಹಿಳಾ ಅಧ್ಯಕ್ಷೆಯಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next