ಐಜ್ವಾಲ್: ಭಾರತದ ಈಶಾನ್ಯದಲ್ಲಿ ಅತ್ಯಂತ ಕೊನೆಯಲ್ಲಿರುವ ಮಿಜೋರಾಂ ರಾಜ್ಯದಲ್ಲಿ ಇಂದು ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಬಹುತೇಕ ಕ್ಷೇತ್ರಗಳ ಫಲಿತಾಂಶ ಬಂದಿದ್ದು ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ಝೆಡ್ ಪಿಎಂ) ಪಕ್ಷವು ಸ್ಪಷ್ಟ ಬಹುಮತ ಪಡೆದಿದೆ. ಇದುವರೆಗೆ ಅಧಿಕಾರದಲ್ಲಿದ್ದ ಮಿಜೋ ನ್ಯಾಶನಲ್ ಫ್ರಂಟ್ ಪಕ್ಷವನ್ನು ಸೋಲಿಸಿ ಅಧಿಕಾರದತ್ತ ಧಾವಿಸಿದ ಝೆಡ್ ಪಿಎಂ ಪಕ್ಷ ಯಾವುದು, ಅದರ ಹಿಂದಿನ ಶಕ್ತಿ ಯಾರು ಎನ್ನುವ ಬಗ್ಗೆ ಈ ಲೇಖನ.
ಅಂದಹಾಗೆ ಮಿಜೋರಾಂ ರಾಜ್ಯದಲ್ಲಿ ನವೆಂಬರ್ 7ರಂದು ಮತದಾನ ನಡೆದಿತ್ತು. 40 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಮಿಜೋರಾಂ ರಾಜ್ಯದಲ್ಲಿ ಬಹುಮತ ಪಡೆಯಲು 21 ಕ್ಷೇತ್ರಗಳನ್ನು ಗೆಲ್ಲುವ ಅಗತ್ಯವಿದೆ. ಝೆಡ್ ಪಿಎಂ ಪಕ್ಷವು 27 ಸ್ಥಾನಗಳನ್ನು ಗೆದ್ದರೆ, ಎಂಎನ್ಎಫ್ ಪಕ್ಷವು 10 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಒಂದು ಮತ್ತು ಬಿಜೆಪಿ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಲಲ್ದುಹೊಮ ಮತ್ತು ಝೆಡ್ ಪಿಎಂ
ಸದ್ಯ ಮಿಜೋರಾಂ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಯೇರಲು ಸಿದ್ದರಾಗಿರುವ 74 ವರ್ಷದ ಲಲ್ದುಹೊಮ ಈ ಹಿಂದೆ ಐಪಿಎಸ್ ಅಧಿಕಾರಿಯಾಗಿದ್ದವರು. ಪಶ್ಚಿಮದ ಕರಾವಳಿ ರಾಜ್ಯವಾದ ಗೋವಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ನಂತರ ಅವರನ್ನು ರಾಷ್ಟ್ರ ರಾಜಧಾನಿಗೆ ವರ್ಗಾಯಿಸಲಾಯಿತು, ಅಲ್ಲಿ ಅವರು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಭದ್ರತೆಯ ಉಸ್ತುವಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಸೇವೆಯಿಂದ ಹೊರಬಂದ ನಂತರ, ಅವರು ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ಪಕ್ಷವನ್ನು ಸ್ಥಾಪಿಸಿದರು ಅಲ್ಲದೆ 1984 ರಲ್ಲಿ ಲೋಕಸಭೆ ಪ್ರವೇಶಿಸುವ ಮೂಲಕ ಇತಿಹಾಸವನ್ನು ನಿರ್ಮಿಸಿದರು. ಆದರೆ ಕೆಲವೇ ಸಮಯದಲ್ಲಿ ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಅನರ್ಹತೆ ಎದುರಿಸಿದ ಮೊದಲ ಸಂಸದರಾಗಿ ಲಲ್ದುಹೊಮ ಅವರ ರಾಜಕೀಯ ಪಥವು ಮಹತ್ವದ ತಿರುವು ಪಡೆಯಿತು.
ಹಿನ್ನಡೆಯ ನಡುವೆಯೂ ಈಶಾನ್ಯ ರಾಜ್ಯದಲ್ಲಿ ಲಲ್ದುಹೊಮ ಅವರು ಕೆಲಸ ಮುಂದುವರಿಸಿ ತನ್ನ ಅಸ್ತಿತ್ವ ಸ್ಥಾಪಿಸಿದರು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ, ಅವರನ್ನು ಜೋರಾಮ್ ಪೀಪಲ್ಸ್ ಮೂವ್ಮೆಂಟ್ ಒಕ್ಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು.
ಪಕ್ಷಾಂತರ ವಿರೋಧಿ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಅವರು 2020 ರಲ್ಲಿ ವಿಧಾನಸಭೆಯ ಸದಸ್ಯರಾಗಿ ಅನರ್ಹಗೊಂಡರು, ಆದರೆ ಅವರು 2021 ರಲ್ಲಿ ನಡೆದ ಉಪಚುನಾವಣೆಯಲ್ಲಿ ಗೆದ್ದರು.
ಇದೀಗ ಜೋರಾಂತಂಗಾ ಅವರ ಮಿಜೋ ನ್ಯಾಶನಲ್ ಫ್ರಂಟ್ ಸರ್ಕಾರವನ್ನು ಸೋಲಿಸಿ ಮಿಜೋರಾಂನಲ್ಲಿ ಲಲ್ದುಹೊಮ ಹೊಸ ಶಕೆ ಆರಂಭಿಸಿದ್ದಾರೆ.