ಮುಂಬಯಿ: ಕ್ರಿಕೆಟ್ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಗಳಲ್ಲಿ ಸಾಮಾನ್ಯವಾಗಿ ಅಂದ ಚೆಂದದ ಬೆಡಗಿಯರು ಗಮನ ಸೆಳೆಯುತ್ತಾರೆ. ಆದರೆ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಮಂಗಳವಾರ ನಡೆದ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯ ಇದಕ್ಕೆ ಹೊರತಾಗಿತ್ತು. ಹರೆಯದ ಯುವತಿಯಂತೆ ಪಂದ್ಯವನ್ನು ಸಂಭ್ರಮಿಸುತ್ತಿದ್ದ ವಯೋ ವೃದ್ಧೆಯೊಬ್ಬರು ಎಲ್ಲರ ಗಮನ ಸೆಳೆದರು.
ಪ್ರೇಕ್ಷಕರ ಗ್ಯಾಲರಿಯಲ್ಲಿ ಮುಂಭಾಗದಲ್ಲಿ ಕುಳಿತು ತುತ್ತೂರಿ ಊದುತ್ತಾ ಕೊಹ್ಲಿ ಪಡೆ ಹುಡುಗರನ್ನು ಹುರಿದುಂಬಿಸುತ್ತಾ, ಕ್ಯಾಮರಾಮೆನ್‌ಗಳನ್ನು ಹಲವು ಬಾರಿ ತನ್ನತ್ತ ಸೆಳೆದು, ಯಾರಿವರು ಎಂದು ಎಲ್ಲಾ ಕ್ರೀಡಾಭಿಮಾನಿಗಳು ಪ್ರಶ್ನಿಸುವಂತೆ ಮಾಡಿದವರು ಮತ್ಯಾರು ಅಲ್ಲ, 87 ರ ಹರೆಯದ ಅನಿವಾಸಿ ಭಾರತೀಯೆ ಚಾರುಲತಾ ಪಟೇಲ್.
ಸುದ್ದಿಗಾರರೊಂದಿಗೆ ಮಾತನಾಡಿದ ಚಾರುಲತಾ,ನಾನು ಹುಟ್ಟಿದ್ದು ತಾಂಜಾನಿಯಾದಲ್ಲಿ. ಆದರೆ ನನ್ನ ತಂದೆ, ತಾಯಿ ಭಾರತದಲ್ಲಿದ್ದರು. ನನಗೆ ಭಾರತದ ಬಗ್ಗೆ ಅಪಾರ ಹೆಮ್ಮೆ ಇದೆ. ಈ ಬಾರಿ ಭಾರತ ವಿಶ್ವಕಪ್ ಗೆಲ್ಲುತ್ತದೆ. ನಾನು ದೈವ ಭಕ್ತೆ. ಗಣಪತಿಯಲ್ಲಿ ಪ್ರಾರ್ಥಿಸಿದ್ದು ಈ ಬಾರಿ ಭಾರತ ಕಪ್ ಗೆಲ್ಲುತ್ತದೆ. ನಾನು ಯಾವಾಗಲೂ ಭಾರತ ತಂಡವನ್ನು ಆಶೀರ್ವದಿಸುತ್ತೇನೆ ಎಂದಿದ್ದಾರೆ.
1975 ರಿಂದ ಲಂಡನ್‌ನಲ್ಲಿ ನೆಲೆಸಿರುವ ಚಾರುಲತಾ ಅವರು 1983 ರ ಭಾರತದ ವಿಶ್ವಕಪ್ ವಿಜಯವನ್ನು ಕ್ರೀಡಾಂಗಣದಲ್ಲೇ ಕುಳಿತು ಸಂಭ್ರಮಿಸಿದ್ದರು. ಕಪಿಲ್ ದೇವ್ ನಾಯಕತ್ವದ ತಂಡ ಕಪ್ ಜಯಿಸಿದ್ದನ್ನು ನೆನಪಿಸಿಕೊಂಡರು.
Related Articles
20 ವರ್ಷಗಳಿಂದ ನಾನು ಟಿವಿಯಲ್ಲೇ ಕ್ರಿಕೆಟ್ ನೋಡುತ್ತಿದ್ದೆ. ಭಾರತ-ಬಾಂಗ್ಲಾ ನಡುವಿನ ಪಂದ್ಯ ನೋಡಲು ನನಗೆ ಅವಕಾಶ ದೊರಕಿದ್ದು ಅದೃಷ್ಟ ಎಂದರು.
ಪಂದ್ಯದ ವೇಳೆ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಚಾರುಲತಾ ಅವರ ಆಶೀರ್ವಾದ ಪಡೆದಿದ್ದರು. ಕೊಹ್ಲಿ ಅವರು ಸಂಭ್ರಮವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ.