Advertisement

ಪ್ರಯಾಣಿಕರ ಗೋಳು ಕೇಳೋರು ಯಾರು?

02:55 PM Mar 30, 2022 | Team Udayavani |

ಬಾಗಲಕೋಟೆ: ಇದು ನಾಲ್ಕು ರಾಜ್ಯಗಳಿಗೆ ತೆರಳುವಾಗ ಮಧ್ಯ ಸಿಗುವ ಪ್ರಮುಖ ವರ್ತುಲ. ಮಹಾರಾಷ್ಟ್ರ, ಕರ್ನಾಟಕ, ಕೇರಳ ಹಾಗೂ ಗೋವಾ ರಾಜ್ಯಗಳಿಗೆ ರಸ್ತೆ ಮಾರ್ಗದ ಮೂಲಕ ತೆರಳುವ ಪ್ರತಿಯೊಬ್ಬರೂ ಇಲ್ಲಿಂದಲೇ ಸಾಗಬೇಕು. ಆದರೆ ಹಲವು ಇಲಾಖೆಗಳ ನಿರ್ಲಕ್ಷéದಿಂದ ಪ್ರಯಾಣಿಕರು ತೀವ್ರ ಸಂಕಷ್ಟ-ಸಮಸ್ಯೆ ಎದುರಿಸುವಂತಾಗಿದೆ.

Advertisement

ಹೌದು. ಇದರ ಹೆಸರೇ ಆನದಿನ್ನಿ ಕ್ರಾಸ್‌ (ಗದ್ದನಕೇರಿ ಕ್ರಾಸ್‌). ಮಹಾರಾಷ್ಟ್ರದಿಂದ ಹುಬ್ಬಳ್ಳಿ, ಕೇರಳಕ್ಕೆ ತೆರಳಬೇಕಾದರೆ, ಆಂಧ್ರಪ್ರದೇಶದಿಂದ ರಾಜ್ಯದ ಬೆಳಗಾವಿ, ಗೋವಾ ರಾಜ್ಯಕ್ಕೆ ತೆರಳುವ ಬಹುತೇಕ ಸರಕು-ಸಾಗಣೆ ವಾಹನಗಳು ಈ ಮಾರ್ಗದಿಂದ ಸಾಗಬೇಕು. ಹೀಗಾಗಿ ಉತ್ತರ ಕರ್ನಾಟಕದಲ್ಲಿಯೇ ಗದ್ದನಕೇರಿ ಕ್ರಾಸ್‌ ಎಂದೇ ಈ ಪ್ರದೇಶ ಹೆಸರುವಾಸಿಯಾಗಿದೆ. ಜತೆಗೆ ಇದೊಂದು ವ್ಯಾಪಾರಿ ಕೇಂದ್ರವಾಗಿಯೂ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ.

ಬಸ್‌ ನಿಲ್ದಾಣವೇ ಇಲ್ಲ: ಈ ವರ್ತುಲದಲ್ಲಿ ರಾಯಚೂರು-ಬಾಚಿ (ಬೆಳಗಾವಿ), ವಿಜಯಪುರ-ಹುಬ್ಬಳ್ಳಿ, ಗದ್ದನಕೇರಿ-ಬಾಣಾಪುರ ಸಹಿತ ಒಟ್ಟು ಮೂರು ರಾಷ್ಟ್ರೀಯ ಹೆದ್ದಾರಿಗಳು ಸಂಪರ್ಕಿಸುತ್ತವೆ. ಜತೆಗೆ ಇಲ್ಲಿ 24 ಗಂಟೆಯೂ ವಿವಿಧ ವ್ಯಾಪಾರದ ಅಂಗಡಿಗಳು ಕಾರ್ಯ ನಿರ್ವಹಿಸುತ್ತವೆ. ದೊಡ್ಡ ಹೊಟೇಲ್‌ಗ‌ಳು ಇವೆ. ಎರಡು ಪೆಟ್ರೋಲ್‌ ಬಂಕ್‌ ಇವೆ.

ಮುಖ್ಯವಾಗಿ ಬೆಳಗಾವಿಗೆ, ಹುಬ್ಬಳ್ಳಿಗೆ, ರಾಯಚೂರಿಗೆ, ಕೊಪ್ಪಳಕ್ಕೆ, ಗದುಗಿಗೆ, ಬೆಳಗಾವಿ, ಗೋವಾಕ್ಕೆ ತೆರಳುವ ಜನರು ಇಲ್ಲಿಗೆ ಬಂದೇ ಮುಂದೆ ಸಾಗುತ್ತಾರೆ. ಗದ್ದನಕೇರಿ ಕ್ರಾಸ್‌ನ ವರ್ತುಲದ ಬಳಿಕ ಬಾಗಲಕೋಟೆ, ಬೆಳಗಾವಿ, ಹುಬ್ಬಳ್ಳಿ ಮತ್ತು ವಿಜಯಪುರ ತೆರಳುವ ಮಾರ್ಗದಲ್ಲಿ ಒಟ್ಟು ನಾಲ್ಕು ಕಡೆ ಖಾಸಗಿ ವಾಹನ ಸಹಿತ ಬಸ್‌ಗಳ ನಿಲುಗಡೆ ವ್ಯವಸ್ಥೆ ಇದೆ. ಚಿಕ್ಕ ಚಿಕ್ಕ ಬಸ್‌ ತಂಗುದಾಣಗಳಿದ್ದು, ಇಲ್ಲಿ ಎಲ್ಲಾ ಮಾರ್ಗದ ಬಸ್‌ಗಳ ಸಂಚಾರ, ನಿಲುಗಡೆಗೂ ಬಸ್‌ ನಿಲ್ದಾಣ ನಿರ್ಮಿಸಬೇಕೆಂಬ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ.ಹೀಗಾಗಿ ಈ ನಾಲ್ಕೂ ಮಾರ್ಗದ ಬಸ್‌, ಕಾರು ಸಹಿತ ಎಲ್ಲ ವಾಹನ ಹೆದ್ದಾರಿಯ ರಸ್ತೆಯಲ್ಲೇ ನಿಲ್ಲುತ್ತವೆ. ಇದರಿಂದ ಸಾಕಷ್ಟು ಬಾರಿ ಅಪಘಾತ, ಗಲಾಟೆ ಕೂಡ ಆಗಿವೆ.

ಸಮಸ್ಯೆಗಳ ಆಗರ: ಇಂತಹ ಪ್ರಮುಖ ವರ್ತುಲ, ನಾಲ್ಕು ರಾಜ್ಯಗಳಿಗೆ ತೆರಳುವ ಪ್ರಮುಖ ಹೆದ್ದಾರಿಗಳನ್ನು ಸಂಪರ್ಕಿಸುವ ಸ್ಥಳದಲ್ಲಿ ಪ್ರಯಾಣಿಕರ ಶೌಚಕ್ಕಾಗಿ ನಿರ್ಮಿಸಿದ ಶೌಚಾಲಯ ಬಾಗಿಲೇ ತೆರೆಯುತ್ತಿಲ್ಲ. ಹೀಗಾಗಿ ಜನರು, ರಸ್ತೆಯ ಪಕ್ಕದಲ್ಲಿ ಮೂತ್ರಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಪುರುಷರಾದರೆ, ರಸ್ತೆಯ ಪಕ್ಕ ಹೋಗ್ತಾರೆ, ಮಹಿಳೆಯರ ಪರಿಸ್ಥಿತಿ ಹೇಳಲಸಾಧ್ಯ.

Advertisement

ಮುಖ್ಯವಾಗಿ ನಾಲ್ಕು ಪ್ರಮುಖ ಹೆದ್ದಾರಿಗಳು ಸಾಗುವ ಇಲ್ಲಿ ಜನರಿಗೆ ಕುಡಿಯಲು ನೀರಿನ ವ್ಯವಸ್ಥೆಯೇ ಇಲ್ಲ. ಇಲ್ಲಿದ್ದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದ್ದು, ಕುಡಿಯುವ ನೀರಿನ ಅರವಟ್ಟಿಗೆ ಇಡಲೂ ಇಲ್ಲಿ ಸೂಕ್ತ ಸ್ಥಳವಿಲ್ಲ.ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಇದೆ. ಒಟ್ಟಾರೆ ಇಂತಹ ಪ್ರಮುಖ ವರ್ತುಲದಲ್ಲಿ ಕುಡಿಯುವ ನೀರು, ಶೌಚಾಲಯ, ಬಸ್‌ ನಿಲ್ದಾಣ ಸಹಿತ ಪ್ರಯಾಣಿಕರಿಗೆ ಅಗತ್ಯವಾದ ಸೌಲಭ್ಯ ಕಲ್ಪಿಸಬೇಕೆಂಬ ಒತ್ತಾಯ ತೀವ್ರವಾಗಿ ಕೇಳಿ ಬರುತ್ತಿದೆ.

ಗದ್ದನಕೇರಿ ಕ್ರಾಸ್‌, ಇದೊಂದು ದೊಡ್ಡ ಸಂಪರ್ಕ ವರ್ತುಲವಾಗಿದೆ. ಇಲ್ಲಿನ ವರ್ತುಲ ದೊಡ್ಡದಾಗಿ ನಿರ್ಮಿಸಿದ್ದು, ಬೃಹತ್‌ ಲಾರಿಗಳು ತಿರುವು ಪಡೆಯುವ ವೇಳೆ ಭಾರ ಒಂದೆಡೆ ಬಿದ್ದು ಟೈರ್‌ಗಳು ಬ್ಲಾಸ್ಟ್‌ ಆಗುತ್ತಿವೆ. ಟೈರ್‌ಗಳು ಬೃಹತ್‌ ಬಾಂಬ್‌ ಸ್ಫೋಟದಂತೆ ಶಬ್ದ ಮಾಡುತ್ತಿದ್ದು, ಸುತ್ತಲಿನ ಜನ ಭಯಗೊಳ್ಳುತ್ತಿದ್ದಾರೆ. ಇಲ್ಲಿ ಬಸ್‌ ನಿಲ್ದಾಣ, ಶೌಚಾಲಯ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ನಿರಂತರವಾಗಿರುವಂತೆ ನೋಡಿಕೊಳ್ಳಬೇಕು.
ಸಂತೋಷ ಬಜೆಟ್ಟಿ, ಯುವ ಮುಖಂಡ, ಗದ್ದನಕೇರಿ.

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next