ಕಾರವಾರ: ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ .ಹರಿಪ್ರಸಾದ್ ಆಡಳಿತ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು ಬಿಜೆಪಿಯ ಭ್ರಷ್ಟಾಚಾರದ ಮಾಡೆಲ್ ಮಾಡಾಳು ವಿರೂಪಾಕ್ಷಪ್ಪ ಎಂದು ಸೋಮವಾರ ಹೇಳಿದ್ದಾರೆ.
ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಿನ ಲಿಂಗಾಯಿತ ಮುಖ್ಯಮಂತ್ರಿ ಭ್ರಷ್ಟರು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಹರಿಪ್ರಸಾದ್ ಬಸವರಾಜ ಬೊಮ್ಮಾಯಿ ಸರ್ಕಾರ ಶೇ. 40 ರಷ್ಟು ಕಮಿಷನ್ ಸರ್ಕಾರ ಎಂದು ಹೇಳುವುದು ಸಿದ್ಧರಾಮಯ್ಯನವರ ಮಾತಿನ ಅರ್ಥ ಎಂದರು.
ಬಿಜೆಪಿಯವರು ಪಾಳುಬಿದ್ದ ಸ್ಮಶಾನದಲ್ಲಿ, ಮುರುಕಲು ಬಿದ್ದ ಮಸೀದಿಯಲ್ಲಿ ,ಹೇಳದೇ ಕೇಳದೇ ಇರುವ ದೇವಸ್ಥಾನದಲ್ಲಿ ರಾಜಕೀಯ ಮಾಡುವವರು ಎಂದು ಆರೋಪಿಸಿದರು. ಬಿಜೆಪಿಯವರು ರಾಜಕೀಯ ಪಕ್ಷವಾಗಿ ಜಾತಿ ,ಧರ್ಮ ದ್ವೇಷದಲ್ಲಿ ರಾಜಕಾರಣ ಮಾಡುತಿದ್ದಾರೆ.ಇದಕ್ಕೆ ಜನ ಚುನಾವಣೆಯಲ್ಲಿಸರಿಯಾದ ಉತ್ತರ ಕೊಡುತ್ತಾರೆ.
ಬಿಜೆಪಿಯಲ್ಲಿ ಜಾತಿ ಧರ್ಮ ರಂಗಪ್ರವೇಶ ಮಾಡಿದೆ ಎಂದರು.ಭಾರತೀಯ ಜನತಾ ಪರ್ಟಿಯಲ್ಲಿ ಮುಖ್ಯಂತ್ರಿಯಾಗುವವರು ಎರಡೂವರೆ ಸಾವಿರ ಕೋಟಿ ಕೊಡಬೇಕು. ಹಾಗೆ ಕೊಡುವವರೇ ಮುಖ್ಯಮಂತ್ರಿ ಆಗ್ತಾರೆ ಅಂತ ಬಸವನಗೌಡ ಪಾಟೀಲ್ ಯತ್ನಾಳ್ ಹಿಂದೆ ಹೇಳಿದ್ದಾರೆ.ಹಾಗಾಗಿ ಹಣ ಕೊಟ್ಟವರೇ ಮುಂದಿನ ಮುಖ್ಯಮಂತ್ರಿ ಆಗ್ತಾರೆ ಎಂಬುದು ಅವರ ಮಾತಿನಲ್ಲೇ ಇದೆ. ಈಗ ಭಾರತೀಯ ಜನತಾ ಪಾರ್ಟಿ ದಿವಾಳಿತನದ ಹಂತ ತಲುಪಿದೆ. ಅವರಿಗೆ ಪಾರ್ಟಿ ಸೋಲುವ ಭೀತಿ ಆವರಿಸಿದೆ ಎಂದು ಹರಿಪ್ರಸಾದ್ ಹೇಳಿದರು.
ಬಿಜೆಪಿ ನಾಯಕರು, ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರ ಪೋನ್ ಕದ್ದಾಲಿಕೆ ಮುಂದುವರಿಸಿದ್ದಾರೆ.ಸಿಬಿಐ,ಇಡಿ ಗಳನ್ನು ತನ್ನ ಕಪಿ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ.ಆ ಸಂಸ್ಥೆಗಳನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಲಾಗುತ್ತಿದೆ. ನಿನ್ನೆ ಗಂಗಾಧರ ಗೌಡ ರವರನ್ನು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದೆವು. ಇಂದು ಲೋಕಾಯುಕ್ತ ದಾಳಿ ಆಗಿದೆ. ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಮೇಲೆ ಬಿಜೆಪಿ ಕಣ್ಣಿಟ್ಟಿದೆ ಎಂದು ಹರಿಪ್ರಸಾದ್ ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪಡೆಯಲು ಹೋರಾಡಿದೆ . ಕಾಂಗ್ರೆಸ್ಸಿಗರು ಬ್ರಿಟೀಷರ ಗುಲಾಮರಾಗಿರಲಿಲ್ಲ ಹಾಗೂ ಕ್ಷಮಾಪಣೆ ಪತ್ರ ಬರೆದವರಲ್ಲ ಬ್ರಿಟೀಷರಿಗೆ ಎದೆ ತಟ್ಟಿ ನಿಂತವರು ನಾವು . ಈಗಿನ ರಾಜಕೀಯ ಸನ್ನಿವೇಶ ಎದುರಿಸುತ್ತೇವೆ ಎಂದರು.
ನಾವು ಅಧಿಕಾರಕ್ಕೆ ಬಂದಮೇಲೆ ಭ್ರಷ್ಟಾಚಾರದಲ್ಲಿ ಭಾಗಿಯಾದ ಬಿಜೆಪಿಗರನ್ನು ಜೈಲಿಗೆ ಕಳುಸುತ್ತೇವೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಮಂಜುನಾಥ ನಾಯ್ಕ, ಡಿಸಿಸಿ ಅಧ್ಯಕ್ಷ ಸಾಯಿ ಗಾಂವಕರ್ ,ಶಂಭು ಶೆಟ್ಟಿ ಮುಂತಾದವರು ಇದ್ದರು.