ಕುಂದಾಪುರ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಮನೆ ನಿವೇಶನ ರಹಿತರಿಗೆ ಸರಕಾರಿ ಸ್ಥಳ ಗುರುತಿಸಿ ಹಕ್ಕು ಪತ್ರ ಮಂಜೂರು ಮಾಡಲು ಆಗ್ರಹಿಸಿ ಕೋಣಿ ಮತ್ತು ಕಂದಾವರ ಗ್ರಾಮಗಳ ನಿವೇಶನ ರಹಿತರ ಬೃಹತ್ ಸಮಾವೇಶವು ಕೋಣಿ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ಜರಗಿತು.
ಕೃಷಿ ಕೂಲಿಕಾರರ ಸಂಘದ ಕೋಣಿ ಗ್ರಾಮ ಸಮಿತಿಯ ಅಧ್ಯಕ್ಷ ಗಣಪತಿ ಶೇಟ್ ಕಟೆRàರಿ, ನಿವೇಶನ ರಹಿತ ಅರ್ಜಿದಾರರ ಸಮಾವೇಶ ಉದ್ಘಾಟಿಸಿದರು.
ಕೋಣಿ, ಕಂದಾವರ ಗ್ರಾಮ ಗಳಲ್ಲಿ ಗುರುತಿಸಲಾದ ಸರಕಾರಿ ಜಮೀನನ್ನು ನಿವೇಶನ ರಹಿತ ಅರ್ಜಿದಾರ ಫಲಾನುಭವಿಗಳಿಗೆ ಮಂಜೂರು ಮಾಡಲು ಸೂಕ್ತ ಕ್ರಮ ವಹಿಸಬೇಕು ಎಂದು ಸಮಾವೇಶದಲ್ಲಿ ಸ್ಥಳೀಯ ಆಡಳಿತವನ್ನು ಆಗ್ರಹಿಸಲಾಯಿತು.
ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಪ್ರಾಸ್ತಾವಿಕ ಭಾಷಣ ಮಾಡಿ ಎಲ್ಲ ಕೃಷಿ ಕೂಲಿಕಾರರ ಕುಟುಂಬಗಳಿಗೆ ಯಾವುದೇ ಷರತ್ತು ವಿಧಿಸದೇ ಬಿ.ಪಿ.ಎಲ್. ರೇಷನ್‌ಕಾರ್ಡ್ ವಿತರಿಸಬೇಕು. ಯೂನಿಟ್ ಪದ್ಧತಿಯನ್ನು ಕೈಬಿಟ್ಟು ಮೊದಲಿನಂತೆ ಕೆ.ಜಿ.ಗೆ ಒಂದು ರೂ. ದರದಲ್ಲಿ ಕನಿಷ್ಠ 30 ಕೆ.ಜಿ. ಆಹಾರವನ್ನು ವಿತರಿಸಬೇಕು. ಬೇಳೆ, ಕಾಳು, ಎಣ್ಣೆ, ಸಕ್ಕರೆ ಮೊದಲಾದ ಅಗತ್ಯ ವಸ್ತುಗಳನ್ನು ಕೇರಳ ಸರಕಾರದ ಮಾದರಿಯಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು. ಕೃಷಿ ಕೂಲಿಕಾರರ ಸಂಘದ ಮುಖಂಡರಾದ ನಾಗರತ್ನಾ ನಾಡ, ಪದ್ಮಾವತಿ ಶೆಟ್ಟಿ, ಕುಶಲ, ಸತೀಶ ಖಾರ್ವಿ, ರಮೇಶ ಕೋಣಿ ಉಪಸ್ಥಿತರಿದ್ದರು.