ವಿಜಯಪುರ: ರಾಜ್ಯದಲ್ಲಿ ಈ ಹಿಂದೆ ಯಾವುದೇ ನೋಟಿಸ್ ಕೊಡದೆಯೇ ಹಲವಾರು ಪಹಣಿಗಳಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲೂ ಆಸ್ತಿ, ಜಮೀನು ಮಾಲೀಕರಿಗೆ ನೋಟಿಸ್ ಇಲ್ಲದೆಯೇ ಪಹಣಿಗಳಲ್ಲಿ ವಕ್ಫ್ ಹೆಸರು ಸೇರಿಸಲಾಗಿದೆ. ಆದ್ದರಿಂದ ಈ ಎಲ್ಲ ಪಹಣಿಗಳಲ್ಲೂ ವಕ್ಫ್ ಬೋರ್ಡ್ ಹೆಸರು ತೆಗೆದುಹಾಕಬೇಕು ಎಂದು ಕರ್ನಾಟಕ ಮುಲ್ಲಾ ಅಸೋಸಿಯೇಷನ್‌ನ ಉಪಾಧ್ಯಕ್ಷ ಎಂ.ಸಿ.ಮುಲ್ಲಾ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ವಕ್ಫ್ ಬೋರ್ಡ್ ವಿಚಾರವಾಗಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಯಾವುದೇ ಪಹಣಿಯಲ್ಲಿ ಬೇರೆ ಹೆಸರು ತೆಗೆದು ಹಾಕುವ ಅಥವಾ ಸೇರ್ಪಡೆ ಮಾಡುವ ಮುನ್ನ ನೋಟಿಸ್ ಕೊಡಬೇಕು. ಇದರ ನಡುವೆ ಜಿಲ್ಲೆಯ ಇಂಡಿ ತಾಲೂಕಿನ 42 ಪಹಣಿಗಳ ಕಲಂ 11ರಲ್ಲಿ ನಮೂದಾಗಿದ್ದ ವಕ್ಫ್ ಬೋರ್ಡ್ ಹೆಸರನ್ನು ತೆಗೆಯುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ನೋಟಿಸ್ ಕೊಡದೆ ಪಹಣಿಯಲ್ಲಿ ವಕ್ಫ್ ಹೆಸರು ಬಂದಿರುವ ಕಾರಣಕ್ಕೆ ತೆಗೆಯಲಾಗುತ್ತದೆ ಎಂದು ಡಿಸಿ ತಿಳಿಸಿದ್ದಾರೆ. ಹಾಗಾದರೆ, 2018, 2019ರಿಂದ 2022ರ ಅವಧಿಯಲ್ಲೂ ಹಡಗಲಿ, ನಾದ ಕೆಡಿ, ನಾಗಠಾಣ ಸೇರಿ ಹಲವೆಡೆ ಯಾರಿಗೂ ನೋಟಿಸ್ ಕೊಡದೆ ಪಹಣಿಗಳಲ್ಲಿ ವಕ್ಫ್ ಹೆಸರು ಬಂದಿದೆ. ಈ 42 ಪಹಣಿಗಳ ಪ್ರಕರಣದಂತೆ ನೋಟಿಸ್ ಕೊಡದೆಯೇ ನಮೂದಾಗಿರುವ ಉಳಿದೆಲ್ಲ ಪಹಣಿಗಳಿಂದಲೂ ವಕ್ಫ್ ಹೆಸರು ತೆಗೆಯಬೇಕು ಎಂದು ಒತ್ತಾಯಿಸಿದರು.
ಇಂಡಿ ತಾಲೂಕಿನಲ್ಲಿ ಪಹಣಿಗಳಲ್ಲಿ ವಕ್ಫ್ ಹೆಸರು ಸೇರ್ಪಡೆ ಮಾಡುವಾಗ ಯಾವ ಆಧಾರದ ಮೇಲೆ ಮಾಡಲಾಗಿತ್ತು. ಇದೀಗ ತೆಗೆದಿದ್ದಾದರೂ ಯಾವ ಆಧಾರದ ಮೇಲೆ ಎಂದು ಪ್ರಶ್ನಿಸಿದ ಅವರು, ಈ ಹಿಂದೆ ಮುಲ್ಲಾ, ಜಹಾಗೀರದಾರ, ಇನಾಮದಾರ, ಮುಜಾವರ ಸೇರಿದಂತೆ ಜಿಲ್ಲೆಯಲ್ಲಿ ಅನೇಕರ ಜಮೀನುಗಳ ಪಹಣಿಯಲ್ಲಿಯೂ ವಕ್ಫ್ ಎಂದು ಸೇರ್ಪಡೆಯಾಗಿದೆ. ಈಗಿನ ಕಾಂಗ್ರೆಸ್ ಸರ್ಕಾರವು ನೋಟಿಸ್ ಆದರೂ ಕೊಟ್ಟಿದೆ. ಬಿಜೆಪಿ ಸರ್ಕಾರ ನೋಟಿಸ್ ಕೊಡದೆ ವಕ್ಫ್ ಹೆಸರು ನಮೂದು ಮಾಡಿತ್ತು. ಇದನ್ನು ಕೆಲವರು ಕೋರ್ಟ್ ನಲ್ಲೂ ಪ್ರಶ್ನಿಸಿದ್ದೇವೆ. ನೋಟಿಸ್ ಕೊಡದೆ ವಕ್ಫ್ ಹೆಸರು ಸೇರಿಸಿದ್ದಕ್ಕೆ ಅದನ್ನು ತೆಗೆಯಬೇಕು ಎಂದು ಆದೇಶ ಮಾಡಲಾಗಿದೆ. ಆದರೆ, ಇದುವರೆಗೂ ತೆಗೆದಿಲ್ಲ ಎಂದು ದೂರಿದರು.
ಮುಸ್ಲಿಮರೇ ಹೆಚ್ಚು ಬಾಧಿತರು: ವಕ್ಫ್ ವಿಷಯದಲ್ಲಿ ಹಿಂದೂ ಮತ್ತು ಮುಸ್ಲಿಂ ಪ್ರಶ್ನೆ ಉದ್ಭವಿಸುವುದಿಲ್ಲ. ಹೆಚ್ಚು ಮುಸ್ಲಿಮರು ಬಾಧಿತರಿದ್ದಾರೆ. ಇನಾಂ ರದ್ದು ಕಾಯ್ದೆ ಹಾಗೂ ಭೂ ಸುಧಾರಣೆ ಕಾಯ್ದೆಯಡಿ ಹೆಚ್ಚು ಜಮೀನು ಹೋಗಿದೆ. ಇವೆಲ್ಲೂ ಕಾಂಗ್ರೆಸ್ ಸರ್ಕಾರಗಳ ಕಾಲದಲ್ಲೇ ನಡೆದಿವೆ. ಆದರೆ, ಬಿಜೆಪಿಯವರೆಗೆ ವಕ್ಫ್ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಇದರಲ್ಲಿ ಹಿಂದೂ-ಮುಸ್ಲಿಂ ವಿಷಯವೂ ಬರಲ್ಲ. ರಾಜಕೀಯ ಕಾರಣಕ್ಕೆ ವಕ್ಫ್ ಹೆಸರು ಬಳಕೆ ಮಾಡಲಾಗುತ್ತಿದೆ. ಮುಸ್ಲಿಮರಿಗೆ ತೊಂದರೆಯಾಗಿದೆ ಎಂದು ತಿಳಿದರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೋರಾಟ ಮಾಡುತ್ತಿರಲಿಲ್ಲ ಅನಿಸುತ್ತದೆ. ಏನೇ ಆದರೂ, ವಕ್ಫ್ ಬಗ್ಗೆ ಧ್ವನಿ ಎತ್ತಿದ ಯತ್ನಾಳ ಹಾಗೂ ಬಿಜೆಪಿ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಎಂ.ಸಿ.ಮುಲ್ಲಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಡಾ.ಅಬೂಬಕ್ಕರ್ ಮುಲ್ಲಾ, ಶಹಾಜಾನ್ ಮುಲ್ಲಾ, ರಿಜಬಾನ್ ಮುಲ್ಲಾ, ಬಂದೇನವಾಜ್ ಮುಲ್ಲಾ, ಇಮಾಮ್ ಮುಲ್ಲಾ, ಎಸ್.ಇ.ಮುಲ್ಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.