Advertisement

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

01:22 AM Nov 15, 2024 | Team Udayavani |

ಮಂಗಳೂರು: ಹಿಂಗಾರು ಚುರುಕುಗೊಂಡಿದ್ದು, ಕರಾವಳಿಯಲ್ಲಿ ಗುರುವಾರ ಸಂಜೆ ಬಳಿಕ ಗುಡುಗು ಸಹಿತ ಉತ್ತಮ ಮಳೆ ಸುರಿದಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಧರ್ಮಸ್ಥಳ, ಕಡಬ, ಸವಣಾಲು, ಕಡಿರುದ್ಯಾವರ, ರಾಮಕುಂಜ, ತಣ್ಣೀರುಪಂತ, ಬಳ್ಪ, ಬಂದಾರು, ಮೈರೋಲ್ತಡ್ಕ, ಬಾಯಾರು, ಕರೋಪಾಡಿ, ಪುತ್ತೂರು, ಸುಳ್ಯ, ಪುತ್ತೂರು, ಮಂಗಳೂರು ಸಹಿತ ಜಿಲ್ಲೆಯ ಹಲವೆಡೆ ಮಳೆಯಾಗಿದೆ.

ಬೆಳಗ್ಗಿನಿಂದ ಸಂಜೆಯವರೆಗೆ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ ಏರಿಕೆಯಾಗಿ ಸೆಕೆಯ ಬೇಗೆ ಹೆಚ್ಚು ಇತ್ತು. ಮಂಗಳೂರಿನಲ್ಲಿ 34.9 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 2.1 ಡಿ.ಸೆ. ಏರಿಕೆ ಮತ್ತು 25.4 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 2.8 ಡಿ.ಸೆ. ಏರಿಕೆ ಕಂಡಿತ್ತು. ಮುಂದಿನ ಎರಡು ದಿನ ಜಿಲ್ಲೆಯಲ್ಲಿ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ.

ಉಡುಪಿಯಲ್ಲಿ ನಗರದ ವಿವಿಧೆಡೆ ಗುರುವಾರ ಸಂಜೆ ವೇಳೆಗೆ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದೆ. ಮಧ್ಯಾಹ್ನ ಬಿಸಿಲಿನ ವಾತಾವರಣವಿತ್ತು. ಸಂಜೆ ವೇಳೆಗೆ ದಿಢೀರ್‌ ಗುಡುಗು, ಮಿಂಚು ಸಹಿತ ಮಳೆ ಸುರಿದಿದೆ. ಮಣಿಪಾಲ, ಉಡುಪಿ ನಗರ, ಕರಾವಳಿ ಬೈಪಾಸ್‌, ಕಲ್ಯಾಣಪುರ, ಕಿನ್ನಿಮೂಲ್ಕಿ ಸಹಿತ ವಿವಿಧ ಕಡೆಗಳಲ್ಲಿ ಸ್ವಲ್ಪ ಹೊತ್ತು ಮಳೆ ಸುರಿದಿದೆ.

ಪೆರಾಜೆ: ರಾಷ್ಟ್ರೀಯ ಹೆದ್ದಾರಿಗೆ ಮರ ಬಿದ್ದು ರಸ್ತೆ ತಡೆ
ಅರಂತೋಡು: ಪೆರಾಜೆಯ ಕಲ್ಬಪೆì ಬಳಿ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಗುರುವಾರ ಸಂಜೆ ಮರ ಬಿದ್ದು ಸುಮಾರು ಒಂದೂವರೆ ತಾಸು ರಸ್ತೆ ತಡೆ ಉಂಟಾಯಿತು. ಅಗ್ನಿಶಾಮಕ ಸಿಬಂದಿ, ಪೊಲೀಸರು ಸ್ಥಳೀಯರು ಸೇರಿ ಮರವನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ತಮಿಳುನಾಡು ಮೂಲದ ವಾಹನವೊಂದು ಸಂಚರಿಸುತ್ತಿದ್ದ ಸಮಯದಲ್ಲೇ ಅದರ ಮೇಲೆ ಈ ಮರ ಬಿದ್ದಿದೆ. ಅದೃಷ್ಟವಶಾತ್‌ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ವಿದ್ಯುತ್‌ ಕಂಬಗಳು ಮರಿದು ಬಿದ್ದಿವೆ. ಕೆಲವು ಕಿ.ಮೀ ದೂರ ಟ್ರಾಫಿಕ್‌ ಜಾಮ್‌ ಉಂಟಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Advertisement

ಮಿತ್ತೂರು: ಹೆದ್ದಾರಿಯಲ್ಲಿ ಲಾರಿ ಮೇಲೆ ಬಿದ್ದ ಮರ
ವಿಟ್ಲ: ಮಾಣಿ -ಮೈಸೂರು ರಾಜ್ಯ ಹೆದ್ದಾರಿಯ ಮಿತ್ತೂರು ಬಳಿ ಮರವೊಂದು ಲಾರಿಯ ಮೇಲೆ ಬಿದ್ದು ರಸ್ತೆ ಸಂಪೂರ್ಣ ಮುಚ್ಚಿತ್ತು. ರಾತ್ರಿಯೇ ಮರವನ್ನು ತೆರವುಗೊಳಿಸಿ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಮರ ಬಿದ್ದು ಹೆದ್ದಾರಿ ಮುಚ್ಚಿದ್ದರಿಂದ ಪುತ್ತೂರು ಕಡೆಯಿಂದ ಬರುವ ವಾಹನಗಳು ವಿಟ್ಲ ಮೂಲಕ ಮತ್ತು ಮಂಗಳೂರು ಕಡೆಯಿಂದ ಬರುವ ವಾಹನಗಳು ಮಾಣಿ ಮೂಲಕ ಬದಲಿ ರಸ್ತೆ ಮೂಲಕ ತೆರಳಿವೆ. ಹೆದ್ದಾರಿಯಲ್ಲಿ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಬುಧವಾರ ರಾತ್ರಿ ಗುಡುಗು ಸಿಡಿಲ ಆರ್ಭಟದೊಂದಿಗೆ ಮಳೆ ಸುರಿದ ಪರಿಣಾಮ ವಿಟ್ಲ ಆಸುಪಾಸಿನ ಫ್ಯಾನ್‌, ಟಿವಿ ಮತ್ತಿತರ ಗೃಹೋಪಯೋಗಿ ಸಾಮಗ್ರಿಗಳಿಗೆ ಹಾನಿಯಾಗಿದೆ. ಗುರುವಾರ ಸಂಜೆಯೂ ಗುಡುಗು ಸಿಡಿಲಿನೊಂದಿಗೆ ಭಾರೀ ಮಳೆ ಸುರಿದಿದೆ.

ಅಜೆಕಾರು, ಹೆಬ್ರಿ ಪರಿಸರದಲ್ಲಿ ಮಳೆ
ಅಜೆಕಾರು/ಹೆಬ್ರಿ: ಅಜೆಕಾರು ಪರಿಸರದಲ್ಲಿ ನ. 14ರ ಸಂಜೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಅಂಡಾರು, ಶಿರ್ಲಾಲು, ಅಜೆಕಾರು, ಕಡ್ತಲ ಭಾಗಗಳಲ್ಲೂ ಮಳೆ ಸುರಿದಿದೆ. ಹೆಬ್ರಿ ಪರಿಸರದಲ್ಲೂ ಗುಡುಗು ಸಹಿತ ಭಾರೀ ಮಳೆಯಾಗಿದೆ. ಈ ಮಳೆಯು ಭತ್ತ ಕಟಾವು ಮಾಡಿದವರಿಗೆ ಸಮಸ್ಯೆ ಆದರೆ, ಸುಗ್ಗಿ ಮಾಡುವವರಿಗೆ ಅನುಕೂಲಕರವಾಗಿದೆ.

ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ
ಉಡುಪಿ: ಗುರುವಾರ ಸಂಜೆ ಸುರಿದ ಗುಡುಗು ಮಿಂಚು ಸಹಿತ ಮಳೆಗೆ ನಗರ ಹಾಗೂ ಹೊರ ಭಾಗದ ಕೆಲವೆಡೆ ವಿದ್ಯುತ್‌ ವ್ಯತ್ಯಯಗೊಂಡಿದೆ. ಗ್ರಾಮೀಣ ಭಾಗದ ಕೆಲವು ಫೀಡರ್‌ಗಳಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ಅಡಚಣೆ ಕಂಡುಬಂದಿದೆ. ನಗರದೊಳಗೆ ಸಮಸ್ಯೆ ಕಂಡುಬಂದಿಲ್ಲ. ಗ್ರಾಮೀಣ ಭಾಗದಲ್ಲಿ ಕೊಂಚ ವ್ಯತ್ಯಯಗಳಾಗಿವೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದು. ಫೀಡರ್‌ಗಳಲ್ಲಿ ಕಂಡು ಬಂದ ಸಣ್ಣಪುಟ್ಟ ದೋಷವನ್ನು ಮೆಸ್ಕಾಂ ಸಿಬಂದಿ ಸರಿಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next