Advertisement
ಅವಳ ಮಾತು ಕೇಳಿದ್ದೇ ನನಗೆ ನಾನು ಮೊದಲ ಬಾರಿ ಈ ಅಸಂಬದ್ಧ ಪದವನ್ನು ಕೇಳಿದ ಆ ದಿನದ ನೆನಪಾಯಿತು.ನಾನು ಹೈಸ್ಕೂಲಿನಲ್ಲಿದ್ದಾಗ ಊರಿನಲ್ಲಿ ನಡೆದ ಒಂದು ಮದುವೆಗೆ ಅಮ್ಮನ ಜೊತೆ ಹೋಗಿದ್ದೆ. ಸಮೀಪದ ನೆಂಟರೊಬ್ಬರು ಮದುವೆಗೆ ಬಂದಿದ್ದ ಓರ್ವ ಮಹಿಳೆಯನ್ನು ತೋರುತ್ತ ಪಿಸುಗುಟ್ಟಿದ್ದರು. “ಪಾಪ, ಚಿಕ್ಕವಯಸ್ಸಿನಲ್ಲಿ ವಿಧವೆ ಆಗಿ ಪುಟ್ಟ ಮಗಳ ಜೊತೆ ಒಂಟಿಯಾಗಿದ್ದವಳಿಗೆ ಅಗೋ ಅಲ್ಲಿ ನೀಲಿ ಶರ್ಟಿನಲ್ಲಿದ್ದಾನಲ್ಲ, ಅವನೇ ಮದುವೆಯಾಗಿ ಬಾಳು ಕೊಟ್ಟಿದ್ದಾನೆ’ ಎಂದು. ಮೊತ್ತ ಮೊದಲ ಬಾರಿಗೆ ಈ “ಬಾಳು ಕೊಡುವುದು’ ಎಂಬ ಪದವನ್ನು ಅಂದು ಕೇಳಿದ್ದೆ. ಆಮೇಲೆ ಸೂಕ್ಷ್ಮವಾಗಿ ಗಮನಿಸುತ್ತಾ ಬಂದಾಗ ನನ್ನ ಸುತ್ತಮುತ್ತಲೂ ಅನೇಕ ಕಡೆ ಈ ಬಾಳನ್ನು ಕೊಡು, ತೆಗೆದುಕೊಳ್ಳುವ ವ್ಯವಹಾರ ಜೋರಾಗಿಯೇ ನಡೆಯುತ್ತಿತ್ತು. ಹಳೆಯ ಚಲನಚಿತ್ರಗಳಲ್ಲಂತೂ ಒಂದಾದರೂ ಬಾಳು ಕೊಡುವ ಸೀನು ಇರುವುದನ್ನು ಗಮನಿಸಿದೆ. ಆದರೆ, ಒಂದು ನನಗೆ ಅರ್ಥವಾಗಿರಲೇ ಇಲ್ಲ. ಈ ಬಾಳನ್ನು ಕೊಡುವುದು ಹೇಗೆ? ಯಾರು ಎಲ್ಲಿಂದ, ಯಾರಿಂದ ತೆಗೆದುಕೊಂಡು ಕೊಡುತ್ತಾರೆ? ಬಾಳು ಅಂದರೆ ಬದುಕು ಎಂದರ್ಥವಿರುವಾಗ ಅದನ್ನು ಕೊಡುವುದು ಸಾಧ್ಯವೆ? ಹೀಗೆಲ್ಲಾ ಚಿಂತನೆ ತಲೆ ತುಂಬಿಕೊಂಡು, ಅಲ್ಲಿ ಇಲ್ಲಿ ಏನೋ ಓದಿಕೊಂಡು ನನ್ನದೇ ಅರ್ಥವನ್ನು ಕೊಟ್ಟುಕೊಂಡು ಸುಮ್ಮನಿದ್ದೆ. ಆದರೆ ಕಾಲೇಜಿಗೆ ಬರುತ್ತಲೇ ಓದಿನ ವ್ಯಾಪ್ತಿ, ಅರಿವಿನ ವಿಸ್ತಾರ ತುಸು ಜಾಸ್ತಿಯಾದಂತೇ ಎಲ್ಲವೂ ಸ್ಪಷ್ಟವಾಯಿತು. ಬಾಳನ್ನು ಯಾರೂ ಯಾರಿಗೂ ಕೊಡಲಾಗದು, ಪರಸ್ಪರ ಹಂಚಿಕೊಂಡು ಕಟ್ಟಿಕೊಳ್ಳಬಹುದು ಎಂದು.
Related Articles
Advertisement
ಮದುವೆಯ ಬಂಧ ಉಳಿಯಲು, ಉಳಿಸಿಕೊಳ್ಳಲು ಅಂಗವಿಕಲರಿಗೆ ಕಷ್ಟ, ಮುರಿದು ಬೀಳುವುದೇ ಹೆಚ್ಚು ಎಂಬಿತ್ಯಾದಿ ಸತ್ಯಕ್ಕೆ ಬಹಳ ದೂರವಾದ ಕಲ್ಪನೆಗಳು ನಮ್ಮಲ್ಲಿವೆ. ಅಂಗವಿಕಲರೇ ಇರಲಿ, ಸಾಮಾನ್ಯರೇ ಆಗಿರಲಿ, ಈ ವೈವಾಹಿಕ ಜೀವನ ಸುಮಧುರವಾಗಿರಲು ಪರಸ್ಪರ ಸಹಯೋಗ, ಸಹಕಾರ, ಮನೋ ಸಂಕಲ್ಪವಿದ್ದರೆ ಸಾಕು. ಇದಲ್ಲದಿದ್ದರೆ ದೈಹಿಕವಾಗಿ ಸರ್ವ ರೀತಿಯಲ್ಲಿ ಸಮರ್ಥರಿರುವವರ ವೈವಾಹಿಕ ಜೀವನವೂ ಗಟ್ಟಿ ನಿಲ್ಲದು. ಹಾಗಾಗಿ, ಕೊರತೆಗಳನ್ನು ನಿರ್ಲಕ್ಷಿಸಿ, ಲಭ್ಯತೆಗಳನ್ನು ಎಣಿಸುತ್ತ, ಪ್ರೀತಿಯಿಂದ ಬಾಳ್ವೆ ಮಾಡಲು ಹೊರಟವರಿಗೆ ಮೆಚ್ಚುಗೆ, ಬೆಂಬಲ ನೀಡಿದರೆ ಎಷ್ಟೋ ಸಹಕಾರವಾಗುವುದು. ಅದು ನೀಡಲಾಗದಿದ್ದರೂ ಸರಿಯೇ, ಅನವಶ್ಯಕ ಕುತೂಹಲ, ಕೊಂಕು, ವ್ಯಂಗ್ಯ, ಕೆಲಸಕ್ಕೆ ಬಾರದ ಕರುಣೆಗಳನ್ನು ಬಿಟ್ಟಿಯಾಗಿ ನೀಡಿ ಅಸಹನೆ, ನೋವು ಉಂಟುಮಾಡದಿದ್ದರೂ ಮಹದುಪಕಾರವನ್ನೇ ಮಾಡಿದಂತಾಗುವುದು. ದೈಹಿಕ ನ್ಯೂನತೆಯುಳ್ಳ ಅನೇಕ ಸ್ನೇಹಿತರು ತಮ್ಮ ಮದುವೆಯ ಕುರಿತು ತಮಗಿರುವ ಆತಂಕಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಆದರೆ, ಒಬ್ಬರ ಬದುಕು, ನಿರೀಕ್ಷೆ, ಆಶಯ ಎಲ್ಲವೂ ಮತ್ತೂಬ್ಬರಿಗಿಂತ ವಿಭಿನ್ನವಾಗಿರುತ್ತದೆ. ವಿವಾಹದಂಥ ಸೂಕ್ಷ್ಮ ವಿಷಯದಲ್ಲಿ ಅಂತರಾಳದ ಧ್ವನಿಗೆ ಮೊದಲ ಪ್ರಾಶಸ್ತ ಕೊಡಬೇಕೇ ವಿನಾ ಮತ್ತೂಬ್ಬರ ಒತ್ತಾಯ, ಒಲ್ಲದ/ಸಲ್ಲದ ಕನಿಕರಕ್ಕೆ ಬಾಗಲೇಬಾರದು ಎಂಬುದು ನನ್ನ ವೈಯಕ್ತಿಕ ಅನಿಸಿಕೆ.
ವೃತ್ತಿಯಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿರುವ ನನ್ನ ಪತಿ ರಾಮಕೃಷ್ಣ ಹೆಗಡೆ ಅವರು ನನ್ನನ್ನು ಸಂಪೂರ್ಣವಾಗಿ ಮೆಚ್ಚಿ, ನಾನು ಅವರನ್ನು ಆಜೀವನ ಸಂಗಾತಿಯಾಗಿ ಸ್ವೀಕರಿಸಬಹುದು ಎಂಬ ವಿಶ್ವಾಸವನ್ನು ನನ್ನೊಳಗೆ ತುಂಬಿ ವರಿಸಿದ್ದು. ಅವರೆಂದೂ ನನ್ನ ಮೇಲೆ ಕರುಣೆ, ಅನುಕಂಪವನ್ನು ತೋರಿಲ್ಲ. ನಮ್ಮ ನಡುವೆ ಪರಸ್ಪರ ಅವಲಂಬನೆ, ಸಹಕಾರ, ಸಹಾನುಭೂತಿ (empathy), ಗೌರವ, ಪ್ರೀತ್ಯಾದರಗಳ ಸಾಂಗತ್ಯವಿರುವುದು. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿರುವಂತೇ ಮುನಿಸು, ತಕರಾರು, ಪ್ರೀತಿ, ಸ್ನೇಹ ಈ ಎಲ್ಲಾ ಭಾವಗಳೊಂದಿಗೆ, ನೋವು-ನಲಿವನ್ನು ಬಂದ ಹಾಗೆ ಸ್ವೀಕರಿಸಿ, ಭಾರವನ್ನು ಹಂಚಿಕೊಂಡು ಬದುಕುತ್ತಿರುವ ಹನ್ನೆರಡು ವರುಷಗಳ ದಾಂಪತ್ಯ ನಮ್ಮದು. ಆದರೆ ಈ ಬಾಳು ಕೊಡುವುದುದೆಂದರೆ ಏನೆಂದು ಮಾತ್ರ ನಮಗಿನ್ನೂ ಗೊತ್ತಾಗಿಲ್ಲ.
ತೇಜಸ್ವಿನಿ ಹೆಗಡೆ