Advertisement

ನೋಟು ಕಷ್ಟ ಸಹಿಸಿಕೊಂಡ ಜನರಿಗೆ ಬಿಜೆಪಿ ಬಹುಪರಾಕ್‌

03:50 AM Jan 08, 2017 | |

ಹೊಸದಿಲ್ಲಿ: ಅಪನಗದೀಕರಣದಿಂದ ತಾತ್ಕಾಲಿಕ ತೊಂದರೆ ಎದುರಾದರೂ ಅದನ್ನು ಉತ್ಸಾಹದಿಂದಲೇ ಎದುರಿಸಿದ ಜನರ ನಡವಳಿಕೆಯನ್ನು “ಪವಿತ್ರ ಆಂದೋಲನ’ ಎಂದು ಬಣ್ಣಿಸಿರುವ ಬಿಜೆಪಿ, ಪ್ರತಿಪಕ್ಷಗಳು ದೇಶದಲ್ಲಿನ ಧನಾತ್ಮಕ ವಾತಾವರಣವನ್ನೇ ಹಾಳು ಮಾಡುತ್ತಿವೆ ಎಂದು ಹರಿಹಾಯ್ದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೈಗೊಂಡ ನೋಟು ರದ್ದತಿ ನಿರ್ಧಾರ ಬಡವರ ಹಿತದೃಷ್ಟಿಯಿಂದ ಕೈಗೊಂಡ ಅತ್ಯಂತ ಧೈರ್ಯಶಾಲಿ ನಡೆ ಎಂದು ಪ್ರಶಂಸೆ ವ್ಯಕ್ತಪಡಿಸಿದೆ.

Advertisement

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಕೊನೆಯ ದಿನವಾದ ಶನಿವಾರ ಆರ್ಥಿಕ ನಿರ್ಣಯವೊಂದನ್ನು ಅಂಗೀಕರಿಸಲಾಗಿದ್ದು, ಅದರಲ್ಲಿ ಈ ಅಂಶಗಳಿವೆ.

ಇದೇ ವೇಳೆ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬಡವರ ಜೀವನ ಗುಣಮಟ್ಟ ಬದಲಿಸುವುದು ನಮ್ಮ ಬದ್ಧತೆ. ಭ್ರಷ್ಟಾಚಾರ ಎಂಬುದು ಬೃಹತ್‌ ಸಾಮಾಜಿಕ ಸಮಸ್ಯೆ. ಅದನ್ನು ಹತ್ತಿಕ್ಕಲು ಅನಿಯಂತ್ರಿತ ಹಣದ ಹರಿವು ತೊಡಕಾಗಿತ್ತು. ಭ್ರಷ್ಟಾಚಾರ ಹಾಗೂ ಕಪ್ಪು ಹಣದ ವಿರುದ್ಧದ ದೀರ್ಘಾವಧಿ ಕ್ರಮವೇ ನೋಟು ರದ್ದತಿ ಎಂದು ಹೇಳಿದರು. ಬಡವರ ಮನಗೆಲ್ಲಲು ಸಂಘಟನಾ ಬಲ ಬಳಸಿಕೊಳ್ಳಿ. ಜನತೆಯ ಸೇವೆ ಎಂಬುದು ದೇವರ ಸೇವೆ ಇದ್ದಂತೆ ಎಂದು ಪಕ್ಷದ ಮುಖಂಡರನ್ನು ಹುರಿದುಂಬಿಸಿದರು. ಅಲ್ಲದೆ, ಬಡವರ ಬಾಳು ಉದ್ಧಾರಕ್ಕೆ ಕೈಗೊಂಡ ದೀರ್ಘಾವಧಿ ಪರಿಣಾಮದ ಯೋಜನೆ ಇದು ಎಂದು ಮೋದಿ ಸಮರ್ಥಿಸಿಕೊಂಡರು.

ಕಾರ್ಯಕಾರಿಣಿ ನಿರ್ಣಯದಲ್ಲಿ ಏನೇನಿದೆ?
ನೋಟು ನಿಷೇಧದ ಬಳಿಕ ದೇಶದಲ್ಲಿ ಪವಿತ್ರ ಆಂದೋಲನ ನಡೆದಿದೆ. ತಾತ್ಕಾಲಿಕ ತೊಂದರೆಗಳನ್ನು ಮೆಟ್ಟಿ ನಿಂತು ಶ್ರೀಸಾಮಾನ್ಯರು ಉತ್ಸಾಹ ಹಾಗೂ ಧನಾತ್ಮಕ ಶಕ್ತಿಯೊಂದಿಗೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ, ಪ್ರತಿಪಕ್ಷಗಳು ಧನಾತ್ಮಕ, ವಿಧ್ವಂಸಕ ಶಕ್ತಿ ಮೂಲಕ ಕೇಂದ್ರ ಸರಕಾರಕ್ಕೆ ಕೆಟ್ಟ ಹೆಸರ ತರಲು, ದೇಶದಲ್ಲಿನ ಧನಾತ್ಮಕ ವಾತಾವರಣ ಹಾಳುಗೆಡವಲು ಯತ್ನಿಸಿವೆ.

ಕಪ್ಪು ಹಣ ತನ್ನ ಅನಾಮಧೇಯತೆಯನ್ನು ಕಳೆದುಕೊಂಡಿದೆ. ಬ್ಯಾಂಕುಗಳಲ್ಲಿ ಕಾಳಧನ ಜಮೆಯಾಗಿದೆ. ಅನೌಪಚಾರಿಕ ಆರ್ಥಿಕತೆಯು ಔಪಚಾರಿಕ ಆರ್ಥಿಕತೆ ಜತೆ ಈಗ ಹೆಚ್ಚಾಗಿ ವಿಲೀನಗೊಳ್ಳುತ್ತಿದೆ. ಇದರಿಂದ ರಾಜ್ಯಗಳು ಹಾಗೂ ಕೇಂದ್ರ ಸರಕಾರಗಳಿಗೆ ಆದಾಯ ಹೆಚ್ಚಾಗಲಿದೆ. ಬೃಹತ್‌ ಹಾಗೂ ಸ್ವತ್ಛ ಜಿಡಿಪಿಗೆ ಇದು ಕಾರಣವಾಗಲಿದೆ.

Advertisement

ಅಪನಗದೀಕರಣಕ್ಕೆ ವ್ಯಾಪಕ ಜನಬೆಂಬಲ ವ್ಯಕ್ತವಾಗಿದೆ. 50 ದಿನಗಳ ಅವಧಿಯಲ್ಲಿ ದೇಶದ ಯಾವುದೇ ಕಡೆ ಒಂದೇ ಒಂದು ಬೃಹತ್‌ ಅಹಿತಕರ ಘಟನೆ ನಡೆದಿಲ್ಲ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ. ದೇಶಲ್ಲೆಲ್ಲೂ ಜನರು ತಾಳ್ಮೆ ಕಳೆದುಕೊಂಡಿಲ್ಲ.

ನೋಟು ನಿಷೇಧವನ್ನು ದಿಢೀರನೇ, ಚಿಂತನೆ ಮಾಡದೇ ಕೈಗೊಳ್ಳಲಾಗಿದೆ ಎಂಬುದು ನಿಜವಲ್ಲ. ಸಕಲ ಸಿದ್ಧತೆಗಳನ್ನು ಮಾಡಿಕೊಂಡೇ ನಿರ್ಧಾರ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next