Advertisement

Fake Notes: ಆರ್‌ಬಿಐಯಲ್ಲೇ 2 ಸಾವಿರ ರೂ. ನಕಲಿ ನೋಟು ಚಲಾವಣೆಗೆ ಯತ್ನ: ಐವರ ಸೆರೆ

02:18 AM Oct 11, 2024 | Team Udayavani |

ಬೆಂಗಳೂರು: ಎರಡು ಸಾವಿರ ರೂ. ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಿದ್ದಲ್ಲದೆ ಆರ್‌ಬಿಐಯಲ್ಲಿ ಬದಲಾವಣೆಗೆ ಯತ್ನಿಸಿದ ಐವರು ಹಲಸೂರು ಗೇಟ್‌ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಬಳ್ಳಾರಿ ಜಿಲ್ಲೆ ಸಿರಿಗುಪ್ಪ ತಾಲೂಕಿನ ಸಿರಿಗೆರೆ ನಿವಾಸಿ ಎ.ಕೆ. ಅಫ್ಜಲ್‌ ಹುಸೇನ್‌ (29), ಪುದುಚೇರಿ ಮೂಲದ ಪ್ರಸೀತ್‌ (47), ಕೇರಳ ಮೂಲದ ಮೊಹಮ್ಮದ್‌ ಅಫ್ನಾಸ್‌ (34), ನೂರುದ್ದೀನ್‌ ಅಲಿಯಾಸ್‌ ಅನ್ವರ್‌ (34) ಹಾಗೂ ಪ್ರಿಯೇಶ್‌ (34) ಬಂಧಿತರು.

ಆರೋಪಿಗಳಿಂದ 52.40 ಲಕ್ಷ ರೂ. ಮೌಲ್ಯದ 2 ಸಾವಿರ ರೂ. ಮುಖಬೆಲೆಯ ನಕಲಿ ನೋಟುಗಳು ಹಾಗೂ ಎರಡು ಮೊಬೈಲ್‌ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಅಫ್ಜಲ್‌ ಹುಸೇನ್‌ ಸೆ. 9ರಂದು ನೃಪತುಂಗ ರಸ್ತೆಯ ಆರ್‌ಬಿಐಗೆ ಬಂದಿದ್ದು 2 ಸಾವಿರ ರೂ. ಮುಖ ಬೆಲೆಯ 24.68 ಲಕ್ಷ ರೂ.ಗಳನ್ನು 500 ರೂ. ಮುಖಬೆಲೆಯ ನೋಟುಗಳಿಗೆ ಬದಲಾವಣೆಗೆ ಮುಂದಾಗಿದ್ದ. ಈ ವೇಳೆ ಬ್ಯಾಂಕಿನ ಅಧಿಕಾರಿಗಳು 2 ಸಾವಿರ ರೂ. ಮುಖ ಬೆಲೆಯ ನೋಟುಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಪರಿಶೀಲನೆ ನಡೆಸಿದಾಗ ನಕಲಿ ಎಂದು ಗೊತ್ತಾಗಿದೆ.

ಈ ಸಂಬಂಧ ಆರ್‌ಬಿಐ ಎಜಿಎಂ ಭೀಮ್‌ ಚೌಧರಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಅಫ್ಜಲ್‌ ಹುಸೇನ್‌ನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ನಕಲಿ ನೋಟು ದಂಧೆಯನ್ನು ಬಯಲಾಗಿದೆ. ಆತ ನೀಡಿದ ಮಾಹಿತಿ ಮೇರೆಗೆ ಉಳಿದ ನಾಲ್ವರನ್ನು ಕೇರಳದಲ್ಲಿ ಬಂಧಿಸಿದ್ದು, ಅವರಿಂದ 27.72 ಲಕ್ಷ ರೂ. ಮೌಲ್ಯದ 2 ಸಾವಿರ ರೂ. ಮುಖಬೆಲೆಯ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

ಚೆರ್ಕಳದಲ್ಲಿ ಮುದ್ರಣ
ಕೇರಳದ ಕಾಸರಗೋಡು ಜಿಲ್ಲೆಯ ಚೆರ್ಕಳದಲ್ಲಿ ಆರೋಪಿ ಪ್ರಿಯೇಶ್‌ 20 ವರ್ಷಗಳಿಂದ ಪ್ರಿಂಟಿಂಗ್‌ ಪ್ರಸ್‌ ನಡೆಸುತ್ತಿದ್ದಾನೆ. ಆರೋಪಿಯು ಕ್ಯಾಲಿಕಟ್‌ನಿಂದ ವಿಶೇಷ ಪೇಪರ್‌ ಹಾಗೂ ನೋಟು ತಯಾರಿಸುವ ಸಾಮಗ್ರಿಗಳನ್ನು ತಂದು ತನ್ನದೇ ಪ್ರಸ್‌ನಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಚಲಾವಣೆಗಾಗಿ ಆರೋಪಿ ನೂರುದ್ದೀನ್‌ಗೆ ನೀಡಿದ್ದ. ಬಳಿಕ ನೂರುದ್ದೀನ್‌ ಇತರ ಆರೋಪಿಗಳ ಜತೆ ಸೇರಿಕೊಂಡು ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಈ ನಕಲಿ ನೋಟು ಮುದ್ರಿಸುತ್ತಿದ್ದ ಆರೋಪಿ ಪ್ರಿಯೇಶ್‌ನನ್ನು ಈ ಹಿಂದೆ ಮಂಗಳೂರು ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next