Advertisement
ಇತ್ತೀಚೆಗೆ ಹತ್ತಿರದ ಸಂಬಂಧಿಯೊಬ್ಬರ ಮದುವೆಗೆ ಹೋಗಿದ್ದೆವು. ಅವರದ್ದು ಅವಿಭಕ್ತ ಕುಟುಂಬ. ಮನೆಯಿಂದ ಮದುವೆಯಾಗಿ ಹೋಗಿರುವ ಹೆಣ್ಣುಮಕ್ಕಳು, ಮೊಮ್ಮಕ್ಕಳು ಹಾಗೆಯೇ ಮನೆಗೆ ಕಾಲಿಟ್ಟಿರುವ ಸೊಸೆಯಂದಿರು ಹೀಗೆ ಎಲ್ಲರೂ ಸೇರಿದರೆ ಸರಿಸುಮಾರು 100 ಜನರು ಸಮಾರಂಭಗಳಿಗೆ ಸಾಕ್ಷಿಯಾಗುತ್ತಾರೆ.
Related Articles
Advertisement
ಅಂದಿನ ದಿನಗಳಲ್ಲಿ ಮಲ್ಲಿಗೆ ಹೂವು ಯಾವಾಗಲೂ ಸಿಗುತ್ತಿರಲಿಲ್ಲ. ಅದಕ್ಕೂ ಒಂದು ಕಾಲ ಅಂತ ಇರುತ್ತಿತ್ತು. ಚೈತ್ರ-ವೈಶಾಖ ಮಾಸಗಳಲ್ಲಿ ದಂಡಿಯಾಗಿ ಮೊಗ್ಗು ಮಾರುಕಟ್ಟೆಗೆ ಬರುತ್ತಿತ್ತು. ಬುಟ್ಟಿಗಳಲ್ಲಿ ತುಂಬಿ ರಸ್ತೆಯಲ್ಲಿ “”ಮಲ್ಗೆ ಹೂ ಬೇಕೇನÅಮ್ಮಾ” ಅಂತ ಮಾರಿಕೊಂಡು ಮಧ್ಯಾಹ್ನದ ಹೊತ್ತಿಗೇ ಬರುತ್ತಿದ್ದರು. ಚಟಾಕು, ಪಾವು, ಸೇರಿನ ಲೆಕ್ಕದಲ್ಲಿ ಹೂವನ್ನು ಕೊಳ್ಳಬೇಕಾಗಿತ್ತು. ಹೆಣ್ಣು ಮಕ್ಕಳಿರುವ ಎಲ್ಲರ ಮನೆಗಳಲ್ಲೂ ಮೊಗ್ಗನ್ನು ಖರೀದಿಸುತ್ತಿದ್ದರು.
“ಮೊಗ್ಗಿನ ಜಡೆ’ ಎಂದರೆ ಎಲ್ಲ ಮಕ್ಕಳೂ ಕುಣಿದಾಡುತ್ತಿದ್ದರು. ಅಕ್ಕಪಕ್ಕದ ಮನೆಯ ಹೆಂಗಸರು ಒಟ್ಟಾಗಿ ಸೇರಿಕೊಂಡು ಅಗಲವಾದ ಬಾಳೆಪಟ್ಟಿಯನ್ನು ಜಡೆಯ ಆಕಾರಕ್ಕೆ ಕತ್ತರಿಸಿ, ಒಂದೇ ಮಗ್ಗುಲಲ್ಲಿ ಎರಡೂ ಬದಿಗಳಲ್ಲಿ ಮೊಗ್ಗನ್ನು ಉದ್ದಕ್ಕೆ ಒತ್ತಾಗಿ ಪೋಣಿಸಿ, ಮಧ್ಯೆ ಮಧ್ಯೆ ಮರುಗ, ಪಚ್ಚೆ ತೆನೆ, ಗುಲಾಬಿಗಳನ್ನು ಇಟ್ಟು ಸೂಜಿನೂಲಿನಿಂದ ಹೊಲಿಯುತ್ತಿದ್ದರು. ನಂತರ ಮಕ್ಕಳ ತಲೆಯನ್ನು ಬಾಚಿ, ಚೌರಿಯ ಸಹಾಯದಿಂದ ಉದ್ದಕ್ಕೆ ಜಡೆಯನ್ನು ಹೆಣೆದು, ತುದಿಯಲ್ಲಿ ಬಣ್ಣ ಬಣ್ಣದ ವೆಲ್ವೆಟ್, ಮುತ್ತುಗಳಿಂದ ಮಾಡಿದ ಕುಚ್ಚುಗಳಿಂದ ಅಲಂಕರಿಸುತ್ತಿದ್ದರು. ಅನಂತರ ಜಡೆಗೆ ಹೊಲಿದು ಸಿದ್ಧಪಡಿಸಿಟ್ಟ ಬಾಳೆಯ ಪಟ್ಟೆಯ ಜಡೆಯನ್ನು ಇಟ್ಟು ಮತ್ತೂಮ್ಮೆ ದೂರ ದೂರಕ್ಕೆ ಹೊಲಿಗೆ ಹಾಕಿ ಭದ್ರಗೊಳಿಸುತ್ತಿದ್ದರು.
ಜಡೆ ಶೃಂಗಾರಗೊಂಡ ನಂತರ ರೇಷ್ಮೆ ಲಂಗ ಧರಿಸಿ ಮನೆ ಮನೆಗೆ ತೆರಳಿ ಅತ್ಯಂತ ಆನಂದದಿಂದ ಜಡೆಯನ್ನು ತೋರಿಸಿ ಬರುತ್ತಿದ್ದರು. ಈಗಿನ ಕಾಲದಂತೆ ಮೊಬೈಲ್ ಇಲ್ಲವಾದ್ದರಿಂದ ತಂದೆಯ ಜೊತೆ ಫೋಟೋ ಸ್ಟುಡಿಯೋಗಳಿಗೆ ತೆರಳಿ, ಹಿಂದೆ ಒಂದು ಕನ್ನಡಿಯಲ್ಲಿ ಜಡೆಯ ಸಂಪೂರ್ಣ ಚಿತ್ರಣ ಬರುವಂತೆ ಮಾಡಿ ಮುಂದಿನಿಂದ ಫೋಟೋ ತೆಗೆಸುತ್ತಿದ್ದರು. ನಂತರ ಫೋಟೋಗಳಿಗೆ ಫ್ರೆàಮ್ ಹಾಕಿ ಗೋಡೆಯ ಮೇಲೆ ತೂಗು ಹಾಕುತ್ತಿದ್ದರು. ಈಗಲೂ ಹಲವರ ಮನೆಯಲ್ಲಿ ಮಕ್ಕಳ ಮೊಗ್ಗಿನ ಜಡೆಯ ಭಾವಚಿತ್ರವನ್ನು ಕಾಣಬಹುದು.
ಮಕ್ಕಳ ಆನಂದ ಅಲ್ಲಿಗೇ ಮುಗಿಯುತ್ತಿರಲಿಲ್ಲ. ಸಂಜೆಯಾಗುತ್ತಿದ್ದಂತೆ ಅರೆಬಿರಿಯುತ್ತಾ ಮಲ್ಲಿಗೆಯ ಕಂಪು ಮನೆಯನ್ನಾವರಿಸುತ್ತಿತ್ತು. ತಲೆಗೆ ಭಾರವೆನಿಸುತ್ತಿದ್ದರೂ ತೆಗೆಯಲು ಮನಸ್ಸಿಲ್ಲ. ಎಲ್ಲಿ ಕಳಚಿ ಬೀಳುತ್ತದೋ ಎನ್ನುವ ಹೆದರಿಕೆಯಿಂದ ನಡಿಗೆ ನಿಧಾನವಾಗುತ್ತಿತ್ತು. ಮಲಗುವಾಗ ತೆಗೆಯದೆ ವಿಧಿಯೇ ಇರುತ್ತಿರಲಿಲ್ಲ. ಹೊಲಿದ ದಾರವನ್ನು ಕತ್ತರಿಸಿ ಜಡೆಯಿಂದ ಮೊಗ್ಗಿನ ಜಡೆಯನ್ನು ಬೇರ್ಪಡಿಸಿ ಹೊರಗೆ ಗಾಳಿಗೆ ತೆರೆದಿಡುತ್ತಿದ್ದರು. ಮರುದಿನ ಮತ್ತೆ ಜಡೆಗಿಟ್ಟು ಹೊಲಿದರೆ ಸಾಯಂಕಾಲದವರೆಗೂ ಇರುತ್ತಿತ್ತು.
ಗೊರಟೆ ಹೂವಿನ ಕಾಲದಲ್ಲಿ ಅಕ್ಕಪಕ್ಕದ ಮನೆಗಳಿಂದ ಮೊಗ್ಗುಗಳನ್ನು ಬಿಡಿಸಿ ತಂದು ಜಡೆ ಹಾಕಿಸಿಕೊಂಡು ನವರಾತ್ರಿಯ ಸಮಯವಾದು ದರಿಂದ ಮನೆ ಮನೆಗೆ ಬೊಂಬೆ ನೋಡಲು ಹೋಗುತ್ತಿದ್ದರು. ಹೀಗೆ ಹೆಣ್ಣುಮಕ್ಕಳು ಹೂವು, ಹೂವಿನ ಜಡೆ ಎಂದರೆ ಪ್ರಾಣಬಿಡುತ್ತಿದ್ದ ಒಂದು ಕಾಲವೂ ಇತ್ತು ಎಂದರೆ ನಂಬಲು ಕಷ್ಟವಾಗುತ್ತದೆ.
ಈಗಿನ ದಿನಗಳಲ್ಲಿ ಹೆಣ್ಣಿನ ಚಿತ್ರವೇ ಬದಲಾಗಿದೆ. ಯಾರಿಗೂ ಉದ್ದವಾಗಿ ಕೂದಲು ಬೆಳೆಸುವ ಇಚ್ಛೆ ಇರುವುದಿಲ್ಲ. ಬಾಬ್‌ಕಟ್, ಬಾಯ್‌ಕಟ್ ಸಾಮಾನ್ಯವಾಗಿ ಹೋಗಿದೆ. ಸಮಯದ ಅಭಾವವೋ, ಆರೈಕೆಯ ಕೊರತೆಯೋ, ಫ್ಯಾಷನ್ನೋ ದೇವರಿಗೇ ಗೊತ್ತು. ಇನ್ನು ಜಡೆ ಹೆಣೆಯುವುದಂತೂ ದೂರದ ಮಾತು. ಇಂದಿನ ಹೆಣ್ಮಕ್ಕಳಿಗೆ ಹೂವೆಂದರೆ ಯಾಕೋ ಅಪ್ರಿಯ. ಶಾಲೆಗಳಲ್ಲೂ ಹೂವನ್ನು ಮುಡಿದು ಬರಬಾರದೆಂದು ನಿರ್ಬಂಧ ಹೇರುತ್ತಾರೆ. ಅಪರೂಪಕ್ಕೊಮ್ಮೆ ಹೂವನ್ನು ಮುಡಿದುಕೊಳ್ಳುತ್ತಾರೆಂದರೆ ಅದು ಮಲ್ಲಿಗೆ ಅಥವಾ ಗುಲಾಬಿ ಹೂಗಳು ಮಾತ್ರ. ಸೇವಂತಿಗೆ, ಸಂಪಿಗೆ ಮುಂತಾದ ಹೂಗಳು ದೇವರಿಗೆ ಮಾತ್ರ ಸೀಮಿತವಾಗಿದೆ. ಹೆಣ್ಣುಮಕ್ಕಳ ಮನಸ್ಸನ್ನು ಹೂವಿಗೆ ಹೋಲಿಸುತ್ತಾರೆ. ಹೂವಿನಂಥ ಮನದ ಒಡತಿಗೆ ಹೂವಿನ ಮೇಲೇಕೋ ದ್ವೇಷ, ಗೊತ್ತೇ ಆಗೋಲ್ಲ.
ಇಂಥ ವಾತಾವರಣಕ್ಕೆ ಹೊಂದಿಕೊಳ್ಳುತ್ತಾ, ನೋಡುತ್ತ ಅಭ್ಯಾಸವಾಗಿದ್ದ ನನಗೆ ಅಂದಿನ ಮದುವೆಯಲ್ಲಿ ಓಡಾಡುತ್ತಿದ್ದ ನೀಳವೇಣಿಯರ ಅಂದಚೆಂದ ಆಕರ್ಷಣೆ ಉಂಟುಮಾಡಿದ್ದು ಆಶ್ಚರ್ಯವೇನಲ್ಲ. ಅದು ನಿಜವೋ ಸುಳ್ಳೋ ಎಂದು ನನ್ನನ್ನು ನಾನೇ ಚಿವುಟಿಕೊಂಡು ನಂತರ ನಿಜವೆಂದು ನಂಬಬೇಕಾಯಿತು.
ಭಾರತೀಯ ನಾರಿ ಎಂದಾಕ್ಷಣ ಕಣ್ಮುಂದೆ ಸುಳಿಯುವ ಚಿತ್ರವೆಂದರೆ ಸೀರೆ, ನೀಳವಾದ ಜಡೆ, ತಲೆತುಂಬಾ ಹೂವು, ಕೈತುಂಬಾ ಬಳೆ, ಹಣೆಯಲ್ಲಿ ಬೊಟ್ಟು. ಇದಕ್ಕೆಲ್ಲ ಸಾಕ್ಷಿಯಾದದ್ದು ಅಂದಿನ ಮದುವೆ ಮನೆಯಲ್ಲಿನ ನೀರೆಯರು. ಇಂತಹ ಆಸಕ್ತಿ ಇವರಿಗೆ ಕಡೆಯವರೆಗೂ ಉಳಿಯಲಿ ಎಂದು ನನ್ನ ಮನಸ್ಸು ಕಾಣದ ದೇವರಲ್ಲಿ ಮೊರೆಯಿಟ್ಟಿತ್ತು.
– ಪುಷ್ಪಾ ಎನ್.ಕೆ. ರಾವ್