ನ್ಯೂಯಾರ್ಕ್/ಹೈದರಾಬಾದ್: ಅಮೆರಿಕದ ಕನ್ಸಾಸ್‌ನಲ್ಲಿ ಇತ್ತೀಚೆಗೆ ನೌಕಾಪಡೆಯ ನಿವೃತ್ತ ಯೋಧನಿಂದ ಹತ್ಯೆಗೀಡಾದ ಭಾರತೀಯ ಟೆಕ್ಕಿ ಶ್ರೀನಿವಾಸ್ ಕುಚಿಭೋಟ್ಲಾ(32) ಅವರ ಅಂತ್ಯಸಂಸ್ಕಾರ ಮಂಗಳವಾರ ಹೈದರಾಬಾದ್‌ನಲ್ಲಿ ನೆರವೇರಿತು.
ಇಲ್ಲಿನ ಜ್ಯುಬಿಲಿ ಹಿಲ್ಸ್‌ನಲ್ಲಿನ ಮಹಾಪ್ರಸ್ಥಾನಂ ರುದ್ರಭೂಮಿಯಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಕೇಂದ್ರ ಕಾರ್ಮಿಕ ಖಾತೆ ಸಹಾಯಕ ಸಚಿವ ಬಂಡಾರು ದತ್ತಾತ್ರೇಯ, ಸಿನಿಮಾ ನಟರಾದ ಜೀವಿತಾ, ರಾಜಶೇಖರ್ ಸೇರಿದಂತೆ ಹಲವರು ಮೃತ ಟೆಕ್ಕಿಯ ಅಂತಿಮ ದರ್ಶನ ಪಡೆದರು.
ಶ್ವೇತಭವನ ಖಂಡನೆ: ಭಾರತೀಯ ಟೆಕ್ಕಿ ಶ್ರೀನಿವಾಸ್ ಕುಚಿಭೋಟ್ಲಾ ಹತ್ಯೆ ಪ್ರಕರಣ ಸಂಬಂಧ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೌನಕ್ಕೆ ಶರಣಾಗಿದ್ದರೆ, ಘಟನೆ ನಡೆದ 4 ದಿನಗಳ ಬಳಿಕ ಶ್ವೇತಭವನ ಪ್ರತಿಕ್ರಿಯೆ ನೀಡಿದೆ. ಭಾರತೀಯ ಎಂಜಿನಿಯರ್‌ನ ಜನಾಂಗೀಯ ದ್ವೇಷದ ಹತ್ಯೆ ಹಾಗೂ ಮತ್ತೂಬ್ಬರ ಮೇಲೆ ನಡೆದ ಹಲ್ಲೆ ಅತ್ಯಂತ ನೋವಿನ ವಿಚಾರ. ಇದನ್ನು ಖಂಡಿಸುತ್ತೇವೆ ಎಂದು ಮಂಗಳವಾರ ವೈಟ್‌ಹೌಸ್ ಮಾಧ್ಯಮ ಕಾರ್ಯದರ್ಶಿ ಸೀನ್ ಸ್ಪೈಸರ್ ಹೇಳಿದ್ದಾರೆ.
ಮೌನಕ್ಕೆ ತರಾಟೆ: ಇದೇ ವೇಳೆ, ಅಮೆರಿಕದ ಪ್ರಮುಖ ಪತ್ರಿಕೆಗಳಲ್ಲಿ ಒಂದಾದ ನ್ಯೂಯಾರ್ಕ್ ಟೈಮ್ಸ್, ಶ್ರೀನಿವಾಸ್ ಹತ್ಯೆ ವಿಚಾರದಲ್ಲಿ ಟ್ರಂಪ್‌ರ ಮೌನವನ್ನು ಪ್ರಶ್ನಿಸಿದೆ. ಭಾರತೀಯ ಟೆಕ್ಕಿಯ ಕೊಲೆಯ ಬಗ್ಗೆ ಒಂದೇ ಒಂದು ಮಾತನ್ನೂ ಆಡದೆ ಮೌನ ವಹಿಸುವ ಮೂಲಕ ಟ್ರಂಪ್ ಜನಾಂಗೀಯ ದ್ವೇಷದ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಅಧ್ಯಕ್ಷರ ಮೌನವು ದೇಶದ ಶಕ್ತಿ ಹಾಗೂ ಮೌಲ್ಯಕ್ಕೆ ಹಾನಿ ಉಂಟುಮಾಡಲಿದೆ ಎಂದೂ ಪತ್ರಿಕೆ ಅಭಿಪ್ರಾಯಪಟ್ಟಿದೆ.
ಇಂದು ಸಹಿ:ಏತನ್ಮಧ್ಯೆ, ಪರಿಷ್ಕೃತ ವಲಸೆ ನೀತಿ ಅಧ್ಯಾದೇಶಕ್ಕೆ ಅಧ್ಯಕ್ಷ ಟ್ರಂಪ್ ಅವರು ಬುಧವಾರ ಸಹಿ ಹಾಕಲಿದ್ದಾರೆ. ನ್ಯಾಯಾಂಗದಿಂದ ತೊಡಕು ಉಂಟಾಗಬಾರದು ಎಂಬ ಕಾರಣಕ್ಕಾಗಿ ಎಲ್ಲ ಅಂಶಗಳನ್ನು ಪರಿಶೀಲಿಸಿ, ವಿಳಂಬವಾಗಿ ಸಹಿ ಹಾಕಿರುವುದಾಗಿ ವೈಟ್‌ಹೌಸ್ ಮೂಲಗಳು ತಿಳಿಸಿವೆ.
ವೈಟ್‌ಹೌಸ್ ಸೋಫಾದಲ್ಲಿ ಕಾಲು ಮೇಲಿಟ್ಟು ಕುಳಿತರು!
ಶೂಗಳನ್ನು ಧರಿಸಿಯೇ ತಮ್ಮ ಕಾಲುಗಳನ್ನು ಶ್ವೇತಭವನದೊಳಗಿನ ಸೋಫಾದ ಮೇಲಿಟ್ಟು ಕುಳಿತುಕೊಳ್ಳುವ ಮೂಲಕ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಹಿರಿಯ ಸಲಹೆಗಾರ್ತಿ ಕೆಲ್ಲಿಯಾನ್ ಕಾನ್ವೆ ಮಂಗಳವಾರ ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ದಾರೆ. ಅಷ್ಟೊಂದು ಗಣ್ಯರ ಮುಂದೆ ಆಕೆ ಆ ರೀತಿ ಕುಳಿತುಕೊಂಡ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಪ್ಪು ವರ್ಣೀಯ ಸಹೋದ್ಯೋಗಿಗಳು ಹಾಗೂ ವಿಶ್ವವಿದ್ಯಾಲಯಗಳ(ಆಫ್ರಿಕನ್-ಅಮೆರಿಕನ್) ಗಣ್ಯರೊಂದಿಗೆ ಅಧ್ಯಕ್ಷ ಟ್ರಂಪ್ ಫೋಟೋಗೆ ಪೋಸ್ ನೀಡುತ್ತಿದ್ದ ವೇಳೆ, ಕಾನ್ವೆ ಅವರು ಕುಳಿತುಕೊಂಡ ರೀತಿಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.