ಬೆಂಗಳೂರು: ಗಾಂಧಿನಗರದ ಎಲ್ಲ ರಸ್ತೆಗಳನ್ನು ಮುಂದಿನ ಮೂರು ತಿಂಗಳಲ್ಲಿ ವೈಟ್‌ಟಾಪಿಂಗ್ ರಸ್ತೆಗಳನ್ನಾಗಿ ಮಾರ್ಪಡಿಸುವುದಾಗಿ ಮೇಯರ್ ಆರ್.ಸಂಪತ್‌ರಾಜ್ ತಿಳಿಸಿದರು. ಸೋಮವಾರ ಗಾಂಧಿನಗರದ ವಜ್ರೆಶ್ವರಿ ಕಂಬೈನ್ಸ್ ಕಚೇರಿ ಬಳಿ ನಡೆಯುತ್ತಿರುವ ವೈಟ್‌ಟಾಪಿಂಗ್ ಕಾಮಗಾರಿ ವೀಕ್ಷಿಸಿದರು.
ರಸ್ತೆಗುಂಡಿಗಳ ಸಮಸ್ಯೆ ನಿವಾರಣೆಗಾಗಿ ನಗರದಾದ್ಯಂತ ವೈಟ್‌ಟಾಪಿಂಗ್ ಕಾಮಗಾರಿ ನಡೆಸಲಾಗುತ್ತಿದೆ. ಅದರಂತೆ ನಗರೋತ್ಥಾನ ಅನುದಾನದಲ್ಲಿ 120 ಕೋಟಿ ರೂ. ಬಳಸಿ ಗಾಂಧಿನಗರದ ಪ್ರಮುಖ ಆರು ರಸ್ತೆಗಳು ಹಾಗೂ 15 ಅಡ್ಡರಸ್ತೆಗಳಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ನಡೆಸಲಾಗುತ್ತಿದೆ ಎಂದು ಹೇಳಿದರು.
ಗಾಂಧಿನಗರವು ಚಿತ್ರೋದ್ಯಮದ ಕಾರ್ಯ ಕ್ಷೇತ್ರ ಹಾಗೂ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ನಿತ್ಯ ಸಾವಿರಾರು ಜನರು ಇಲ್ಲಿಗೆ ಬೇಟಿ ನೀಡುತ್ತಾರೆ. ಇದರೊಂದಿಗೆ ಸಿನಿಮಾ ನಿರ್ದೇಶಕರು, ನಿರ್ಮಾಪಕರು ಹಾಗೂ ಕಲಾವಿದರು ಬರುತ್ತಾರೆ. ಕ್ಷೇತ್ರದಲ್ಲಿ ಹಳೆಯ ಕಾಲದ ಒಳಚರಂಡಿ ಪೈಪುಗಳಿದ್ದು, ಅವು ಒಡೆದು ಗುಂಡಿಗಳಾಗಿ ಅವಾಂತರ ಸೃಷ್ಟಿಯಾಗುತ್ತಿತ್ತು.
ಆ ಹಿನ್ನೆಲೆಯಲ್ಲಿ ಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ವೈಟ್‌ಟಾಪಿಂಗ್ ನಡೆಸಲಾಗುತ್ತಿದೆ ಎಂದು ತಿಳಿಸಿದರು. ನಂತರ, ಶಿವಾನಂದ ವೃತ್ತದ ಬಳಿ ನಿರ್ಮಿಸುತ್ತಿರುವ ಉಕ್ಕಿನ ಸೇತುವೆ ಕಾಮಗಾರಿಯನ್ನು ಪರಿಶೀಲಿಸಿದ ಅವರು, ಎಂಟು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಇಂಜಿನಿಯರ್‌ಗಳಿಗೆ ಸೂಚಿಸಿದರು.
ಸಾರ್ವಜನಿಕರ ಅನುಕೂಲಕ್ಕಾಗಿ 65 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಂಡಿದ್ದು, ಸೇತುವೆ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಸ್ಥಳೀಯರು ಹೈಕೋರ್ಟ್ ಮೊರೆ ಹೋದರೂ, ನ್ಯಾಯಾಲಯ ಕೆಲ ಬದಲಾವಣೆಗಳೊಂದಿಗೆ ಕಾಮಗಾರಿ ನಡೆಸುವಂತೆ ಸೂಚಿಸಿದೆ ಎಂದು ಹೇಳಿದರು.