Advertisement

ವೈಟ್‌ಟಾಪಿಂಗ್‌ ಬೇಗ ಮುಗಿಸಿ

12:18 PM Dec 22, 2018 | Team Udayavani |

ಬೆಂಗಳೂರು: ವಾಹನ ಸವಾರರಿಗೆ ಮೊದಲು ಪರ್ಯಾಯ ರಸ್ತೆಗಳನ್ನು ಕಲ್ಪಿಸಿ, ಬಳಿಕ ವೈಟ್‌ಟಾಪಿಂಗ್‌ ಕಾಮಗಾರಿ ಕೈಗೆತ್ತಿಕೊಳ್ಳಿ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

Advertisement

ಮಲ್ಲೇಶ್ವರ ಐಪಿಪಿ ಕೇಂದ್ರದಲ್ಲಿ ಶುಕ್ರವಾರ ಸಂಚಾರ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮೊದಲು ಸರ್ವೀಸ್‌ ರಸ್ತೆಗಳನ್ನು ಅಭಿವೃದ್ಧಿಪಡಿಸಿದ ಬಳಿಕ ವೈಟ್‌ಟಾಪಿಂಗ್‌ ಕಾಮಗಾರಿ ನಡೆಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲ ಎಂದು ಸಲಹೆ ನೀಡಿದ್ದಾರೆ.

ಪಾಲಿಕೆಯಿಂದ ವೈಟ್‌ಟಾಪಿಂಗ್‌ ಕಾಮಗಾರಿ ನಡೆಸಲು ಉದ್ದೇಶಿಸಿರುವ ಎಲ್ಲ ರಸ್ತೆಗಳಲ್ಲಿ ಕೆಲಸ ಮಾಡಲು ಸಂಚಾರ ಪೊಲೀಸರು ಅನುಮತಿ ನೀಡಿದ್ದು, ಆ ಹಿನ್ನೆಲೆಯಲ್ಲಿ ಹೆಚ್ಚುವರಿ ಯಂತ್ರಗಳನ್ನು ಬಳಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದ್ದಾರೆ. ಜತೆಗೆ ವೈಟ್‌ಟಾಪಿಂಗ್‌ ಕಾಮಗಾರಿಗೆ ಅಗತ್ಯವಾದ ಹೆಚ್ಚುವರಿ ಕಾಂಕ್ರಿಟ್‌ ಪೂರೈಕೆ ಮಾಡುವಂತೆ ಅಲ್ಟ್ರಾಟೆಕ್‌ ಸಿಮೆಂಟ್‌ ಸಂಸ್ಥೆಯ ಪ್ರತಿನಿಧಿಗಳಿಗೆ ಸೂಚಿಸಿದ್ದಾರೆ. 

ಪಾಲಿಕೆಯಿಂದ ಹಲವಾರು ಕಡೆಗಳಲ್ಲಿ ಕಾಮಗಾರಿ ನಡೆಸುತ್ತಿರುವುದರಿಂದ ದಟ್ಟಣೆ ಸಮಸ್ಯೆಯಾಗುತ್ತಿದೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬಂದಿದ್ದವು. ಆ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಅನುಕೂಲವಾಗುವಂತೆ ಸರ್ಜಾಪುರ ರಸ್ತೆ ಹೊರತುಪಡಿಸಿ ಉಳಿದೆಲ್ಲ ಕಡೆಗಳಲ್ಲಿ ಏಕಕಾಲದಲ್ಲಿ ಕಾಮಗಾರಿ ನಡೆಸಲು ಅನುಮತಿ ನೀಡಿದ್ದಾರೆ. 

ಆ ಹಿನ್ನೆಲೆಯಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ಪಡೆದ ಸಂಸ್ಥೆಗಳಿಗೆ ಹೆಚ್ಚುವರಿ ಯಂತ್ರಗಳನ್ನು ಬಳಸಿಕೊಳ್ಳುವಂತೆ ಮಂಜುನಾಥ ಪ್ರಸಾದ್‌ ಸೂಚನೆ ನೀಡಿದ್ದಾರೆ. ಅದರಂತೆ ನಾಗಾರ್ಜುನ ಸಂಸ್ಥೆಗೆ ಹೆಚ್ಚುವರಿಯಾಗಿ ಮೂರು ಯಂತ್ರಗಳನ್ನು ಹಾಗೂ ಮಧುಕಾನ್‌ ಸಂಸ್ಥೆಗೆ ಹೆಚ್ಚುವರಿಯಾಗಿ ಎರಡು ಯಂತ್ರಗಳನ್ನು ತರಿಸಿಕೊಂಡು ಕೆಲಸ ಮಾಡುವಂತೆ ತಿಳಿಸಿದ್ದಾರೆ. 

Advertisement

ಲೋಕಸಭಾ ಚುನಾವಣೆ ಭಯ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ಪೂರ್ಣಗೊಳಿಸಲು ಜನಪ್ರತಿನಿಧಿಗಳು ಸೂಚಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಚುನಾವಣೆಗೆ ಮೊದಲು ಕಾಮಗಾರಿ ಪೂರ್ಣಗೊಳ್ಳದೆ ದಟ್ಟಣೆ ಉಂಟಾಗುತ್ತಿದ್ದರೆ ಜನರ ಕೋಪಕ್ಕೆ ತುತ್ತಾಗಬೇಕಾಗುತ್ತದೆ.

ಹೀಗಾಗಿ ಲೋಕಸಭಾ ಚುನಾವಣೆಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದ್ದು, ಹೀಗಾಗಯೇ ಹಿಂದೆ ಎಲ್ಲ ರಸ್ತೆಗಳಲ್ಲಿ ಏಕಕಾಲದಲ್ಲಿ ಕಾಮಗಾರಿ ನಡೆಸಲು ಅವಕಾಶ ನೀಡದ ಸಂಚಾರ ಪೊಲೀಸರು ಇದೀಗ ಅನುಮತಿ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. 

ಸರ್ಜಾಪುರ ಮುಖ್ಯರಸ್ತೆ ಹೊರತುಪಡಿಸಿ ನಗರದ ಉಳಿದೆಲ್ಲ ಕಡೆಗಳಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ನಡೆಸಲು ಸಂಚಾರ ಪೊಲೀಸರು ಅನುಮತಿ ನೀಡಿದ್ದಾರೆ. ಹೀಗಾಗಿ ಹೆಚ್ಚುವರಿ ಯಂತ್ರಗಳನ್ನು ಬಳಸಿ ನಾಲ್ಕೈದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next