ಆಲಂಕಾರು: ಕೊಯಿಲ
ಹಾಗೂ ರಾಮಕುಂಜ ಗ್ರಾಮಗಳ ಕೆಲವು ಪ್ರದೇಶಗಳಲ್ಲಿ ಶನಿವಾರ ಬೀಸಿದ ಭಾರೀ ಸುಂಟರ ಗಾಳಿಯಿಂದಾಗಿ ಅಪಾರ ಪ್ರಮಾಣದ ಕೃಷಿ ನಾಶವಾಗಿದೆ. ಭಾರೀ ಗಾತ್ರದ ಮರಗಳು ವಿದ್ಯುತ್ ಲೈನ್ ಮೇಲೆ ಬಿದ್ದು ಕಂಬಗಳು ಮುರಿದಿವೆ. ಗಾಳಿಯ ಅವಾಂತರದಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಕೊಯಿಲ ಗ್ರಾಮದ ಪಿಲಿಕುಡೇಲು ಆದಂ ಅವರ ತೋಟದಲ್ಲಿ 200ಕ್ಕೂ ಹೆಚ್ಚು ಅಡಿಕೆ ಮರಗಳು, ಎರಡು ತೆಂಗಿನ ಮರಗಳು ಮುರಿದು ಬಿದ್ದಿವೆ. ಭಾರೀ ಗಾತ್ರದ ಮರವೊಂದು ಬಿದ್ದು ಮನೆ ಸಮೀಪದಲ್ಲಿರುವ ಅಡಿಕೆ ಒಣಗಿಸುವ ಸೋಲಾರ್ ಗೂಡು ಸಂಪೂರ್ಣ ನೆಲಕಚ್ಚಿದೆ. ಮರ ಬಿದ್ದ ಪರಿಣಾಮ ನಾಟಿ ಮಾಡಲು ತಯಾರಿಸಿಟ್ಟಿದ್ದ ಸಾವಿರಕ್ಕೂ ಹೆಚ್ಚು ಅಡಿಕೆ ಸಸಿಗಳು ನಾಶವಾಗಿವೆ.
ಆದಂ ಅವರು ನೂತನ ಮನೆ ನಿರ್ಮಾಣ ಮಾಡುತ್ತಿದ್ದು ಗಾಳಿ ಆರ್ಭಟಕ್ಕೆ ಅಲ್ಲಿನ 15ಕ್ಕೂ ಹೆಚ್ಚು ಕೆಲಸಗಾರರು ಜೀವ ಭಯದಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಆದಂ ಆವರ ತೋಟದ ಕೆಳಗಿನ ಭಾಗದಲ್ಲಿರುವ ಕಂಪ ಪೂವಪ್ಪ ಪೂಜಾರಿ ಅವರಿಗೆ ಸೇರಿದ ತೋಟದಲ್ಲಿನ ಒಂದು ತೆಂಗಿನ ಮರ ಹಾಗೂ 100ಕ್ಕೂ ಹೆಚ್ಚು ಅಡಿಕೆ ಮರಗಳು ನಾಶವಾಗಿವೆ. ಕಂಪ ನಿವಾಸಿ ಲತೀಫ್, ಪಿಲಿಕುಡೇಲ್ ಹಾರೂನ್ ಅವರ ತೋಟದಲ್ಲೂ ನೂರಕ್ಕೂ ಹೆಚ್ಚು ಅಡಿಕೆ ಮರಗಳು, ತೆಂಗಿನ ಮರ ಧರೆಗೆ ಉರುಳಿವೆ. ಹಾರೂನ್ ಅವರ ಮನೆಗೂ ಹಾನಿಯಾಗಿ ಛಾವಣಿ ಕುಸಿದಿದೆ. ಆತೂರು ಬೈಲು ಸುಲೈಮಾನ್ ಅವರ ಮನೆಗೆ ಮರವೊಂದು ಬಿದ್ದು ಮನೆ ಭಾಗಶಃ ಹಾನಿಯಾಗಿದೆ. ಆತೂರು ಬೈಲು ಕೈರುನ್ನಿಸಾ ಅವರ ಮನೆಯ ಛಾವಣಿ ಹಾರಿ ಹೋಗಿದೆ.
ಘಟನಾ ಸ್ಥಳಕ್ಕೆ ಕೊçಲ ಗ್ರಾಮ ಕರಣಿಕ ಶೇಷಾದ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿ ನಷ್ಟದ ಪ್ರಮಾಣವನ್ನು ಅಂದಾಜಿಸಿ ಕಂದಾಯ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ.ರಾಮಕುಂಜ ಗ್ರಾಮದ ಕುಂಡಾಜೆಯಲ್ಲಿ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬದಿಯಲ್ಲಿ ಮರ ಬಿದ್ದು ಕೆಲವು ಕಾಲ ರಸ್ತೆ ಸಂಚಾರಕ್ಕೆ ತೊಡಕುಂಟಾಯಿತು. ಕೊçಲ ಗ್ರಾಮದ ಗೋಳಿತ್ತಡಿ ಏಣಿತ್ತಡ್ಕ ರಸ್ತೆಯ ಅಂಬಾ ಕ್ರಾಸ್, ನೆಲೊಟ್ಟು ಎಂಬಲ್ಲಿ ರಸ್ತೆಗೆ ಮರ ಬಿದ್ದು ರಸ್ತೆ ಸಂಚಾರಕ್ಕೆ ಕೆಲವುಕಾಲ ಅಡಚಣೆಯಾಯಿತು. ನೊಲೊಟ್ಟು ಹಾಗೂ ಅಂಬಾ ಕ್ರಾಸ್ ಬಳಿಯ ಮರವನ್ನು ಗೋಳಿತ್ತಡಿ ರಿûಾ ಚಾಲಕರು, ಸ್ಥಳೀಯರು ಹಾಗೂ ಮೆಸ್ಕಾಂ ಸಿಬಂದಿ ಸೇರಿಕೊಂಡು ತೆರವುಗೊಳಿಸಿದರು. ಕುಂಡಾಜೆಯಲ್ಲಿ ಬಿದ್ದ ಮರಗಳನ್ನು ಸ್ಥಳೀಯರೊಂದಿಗೆ ರಸ್ತೆ ಪ್ರಯಾಣಿಕರು ಕೈಜೋಡಿಸಿ ತೆರವುಗೊಳಿಸಿದರು.ಆತೂರು ಶ್ರೀ ಸದಾಶಿವ ದೇವಸ್ಥಾನದ ಬಳಿ, ಆಯಿಶಾ ಕಾಲೇಜು ಪಕ್ಕದಲ್ಲಿ ಮರಗಳು ಬಿದ್ದಿದೆ. ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ವಿದ್ಯುತ್ ಕಂಬಗಳು ಮುರಿದಿವೆ. ಅಂಬಾ ಪಿಲಿಕುಡೇಲ್ ಬಳಿ 3, ಅಂಬಾ ಕ್ರಾಸ್ ಬಳಿ 3 ಹಾಗೂ ಕುಂಡಾಜೆಯಲ್ಲಿ 3 ಹೀಗೆ ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ನೆಲಕ್ಕುರುಳಿವೆ. ಪರಿಸರದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿವೆ. ಮೆಸ್ಕಾಂ ಸಿಬಂದಿ ತತ್‌ಕ್ಷಣ ಕಾರ್ಯ ಪೃವೃತ್ತರಾಗಿದ್ದು, ಧರೆಗೆ ಉರುಳಿದ ವಿದ್ಯುತ್ ಕಂಬಗಳನ್ನು ತೆರವು ಮಾಡಿ ನೂತನ ಕಂಬಗಳನ್ನು ಹಾಕಿ ವಿದ್ಯುತ್ ಸಂಪರ್ಕ ಕಲ್ಪಿಸಲು ಯತ್ನಿಸಿದ್ದಾರೆ.