Advertisement

Saptahika special: ಇದು ಯಾವ ಜನ್ಮದ ಅನುಬಂಧ?

12:04 PM Nov 26, 2023 | Team Udayavani |

ಎಲ್ಲಾ ಕೆಲಸ ಮುಗಿಸಿ ಮನೆಗೆ ಹೊರಟಾಗ ದೀಪಾಳ ಹತ್ತಿರ, “ಮಗುವನ್ನು ಅನಾಥಾಶ್ರಮಕ್ಕೆ ಸೇರಿಸುವ ಬಗ್ಗೆ ಮಾತಾಡಿ ಹೋಗೋಣ’ ಅಂದ. ಆಗಲೇ ಮಗುವಿನೊಂದಿಗೆ ಆತ್ಮೀಯ ಬಂಧ ಬೆಸೆದುಕೊಂಡಿದ್ದ ದೀಪಾ,

Advertisement

“ರೀ… ನಾನಿರುವಾಗ ಇನ್ನೆಲ್ಲೂ ಮಗುವನ್ನು ಬಿಡೋದು ಬೇಡ. ಇವತ್ತಿಂದ ಇದು ನನ್ನ ಮಗು’ ಅಂದಾಗ ದೀಪಕ್‌ನ ಹೃದಯ ತುಂಬಿ ಬಂದಿತ್ತು. “ನೀವು ಮಗುವನ್ನು ಕರೆದುಕೊಂಡು ಮನೆಗೆ ಹೋಗಿ, ನಾನು ಈ ಮಗುವನ್ನು ದತ್ತು ತೆಗೆದುಕೊಳ್ಳುವ ವಿಚಾರವಾಗಿ ಲಾಯರ್‌ ಹತ್ತಿರ ಹೋಗಿ ಬರುತ್ತೇನೆ’ ಎಂದು ಕಾರಿಂದ ಇಳಿದ…

ಫೀಸ್‌ ಮುಗಿಸಿ ಮನೆಗೆ ಬಂದ ದೀಪಕ್‌ಗೆ ಬಹಳ ಅಶ್ಚರ್ಯವಾಗಿತ್ತು. ಹೆಂಡತಿಯ ಅಪ್ಪ-ಅಮ್ಮ, ಭಾವ-ಮೈದ ಎಲ್ಲ ಮನೆಗೆ ಬಂದಿದ್ದಾರೆ. ಖುಷಿಯಿಂದ, “ಅರೆ ದೀಪಾ, ಇದೇನಾಶ್ಚರ್ಯ? ಅಂತೂ, ನೀವು ಬಡವನ ಮನೆಗೆ ಬರುವ ಮನಸ್ಸು ಮಾಡಿದ್ರಲ್ಲ’ ಅಂತ ತಮಾಷೆ ಮಾಡಿದ. ಆದ್ರೆ ಹೆಂಡತಿಯಿಂದ ಹಿಡಿದು ಎಲ್ಲರೂ ಗಂಭೀರವಾಗಿದ್ದಿದ್ದನ್ನು ನೋಡಿ ದೀಪಕ್‌ ಗೆ ವಿಚಿತ್ರ ಅನಿಸಿತು. ಆಗ ದೀಪಾ, “ನಾನೇ ಬರ ಹೇಳಿದ್ದು. ಇವತ್ತು ಒಂದು ಇತ್ಯರ್ಥ ಆಗಬೇಕು. ಅಪ್ಪಾ, ನೋಡಿ ಎಷ್ಟು ದಿನದಿಂದ ನಡೀತಾ ಇದೆ ಗೊತ್ತಿಲ್ಲ. ನಿನ್ನೆ ಅಕಸ್ಮಾತಾಗಿ ಅವರ ಮೊಬೈಲಲ್ಲಿ ವ್ಯಾಟ್ಸಾಪ್‌ ನೋಡಿದೆ. ಅದರಲ್ಲಿ ಒಂದು ಹೆಂಗಸೊಂದಿಗೆ ನಿಮ್ಮ ಅಳಿಯನ ಚಾಟಿಂಗ್‌ ಎಲ್ಲೆ ಮೀರಿದೆ. “ಹೆದ್ರಬೇಡ ನಾನಿದಿನಿ.., ಎಷ್ಟು ಹೊತ್ತಿಗೆ ಬೇಕಾದ್ರೂ ಫೋನ್‌ ಮಾಡು ಬರ್ತಿನಿ, ಸ್ವೀಟ್‌ ಹಾರ್ಟ್…’ ಹೀಗೆ ಮೆಸೇಜ್‌ ನೋಡಿ ಮೈ ಉರಿದು ಹೋಯ್ತಪ್ಪಾ. ಅಕೌಂಟ್‌ ಚೆಕ್‌ ಮಾಡಿದ್ರೆ ಅಲ್ಲಿ ಸಾಕಷ್ಟು ಹಣ ಡ್ರಾ ಮಾಡಿ ಅವಳಿಗೆ ಸುರಿದಿದ್ದಾರೆ. ನನ್ನಲ್ಲಿ ಮಗು ಆಗಿಲ್ಲ ಅಂತ ಬೇರೆ ಯಾವುದೋ ಸೆಟ್‌ ಅಪ್‌ ಇಟ್ಕೊಂಡಿದ್ದಾರೆ ನೋಡಪ್ಪ…’ ಅಂತ ನನ್ನವಳು ಅವಳ ಅಪ್ಪನ ಹಿಡಿದುಕೊಂಡು ಜೋರಾಗಿ ಅಳತೊಡಗಿದಳು.

ದೀಪಕ್‌ಗೆ ಎಲ್ಲಾ ಅರ್ಥವಾಗಿ ಹೋಯ್ತು. ಇನ್ನು ಮಾತಾಡಿ ಪ್ರಯೋಜನ ಇಲ್ಲ ಅಂದೆನಿಸಿತು ದೀಪಕ್‌ಗೆ. ಮಾವ, ಭಾವ-ಮೈದ ಎಲ್ಲ “ಯಾಕೆ ಹೀಗೆ ಮಾಡಿದ್ರಿ? ನನ್ನ ಮಗಳಿಗೆ ಯಾಕೆ ಅನ್ಯಾಯ ಮಾಡ್ತಾ ಇದೀರಾ?” ಅಂತ ಕೇಳಿದಾಗ, “ನಾಳೆ ಉತ್ತರ ಕೊಡ್ತೇನೆ’ ಎಂದು ಹೇಳಿ ರೂಮ್‌ ಸೇರಿದ. ದೀಪಾ, ಊಟಕ್ಕೆ ಕರೆದ್ರೂ “ಹಸಿವಿಲ್ಲ…’ ಅಂದುಬಿಟ್ಟ.

ಎಂದಿನಂತೆ ಬೆಳಗಾಯಿತು. ಹೆಂಡತಿಯ ಹತ್ತಿರ ಮಾತೂ ಆಡಿರಲಿಲ್ಲ ದೀಪಕ್‌. ಅವಳು, ಟೀ ತಂದು ಕೊಡುವ ಸಮಯಕ್ಕೆ ಸರಿಯಾಗಿ ದೀಪಕ್‌ಗೆ ಫೋನ್‌ ಬಂತು. “ಸರಿ ಈಗ ಬರ್ತಿನಿ..’ ಎಂದು ಹೊರಟ. “ನೋಡಿ ಅಪ್ಪಾ.. ಅದೇ ಮಾಯಾಂಗನೆ ಫೋನ್‌ ಮಾಡಿದ್ದಾಳೆ. ಅವಳ ಫೋನ್‌ ಬಂದ ತಕ್ಷಣ, ಇಲ್ಲಿ ಏನೇ ಸಮಸ್ಯೆ ಇರಲಿ, ಬಿಟ್ಟು ಹೊರಟೇ ಬಿಡ್ತಾರೆ’ ಎಂದು ದೀಪಾ, ಅಪ್ಪನ ಹತ್ತಿರ ಜೋರಾಗಿ ಅಳಲು ಪ್ರಾರಂಭಿಸಿದಳು. “ದೀಪಾ ರೆಡಿಯಾಗು, ಒಂದು ಇತ್ಯರ್ಥ ಆಗಬೇಕು ಅಂದ್ಯಲ್ಲಾ. ಸಮಯ ಬಂದಿದೆ. ಮಾವ, ಭಾವ ಇಬ್ಬರೂ ಬನ್ನಿ’ ಎಂದ ದೀಪಕ್‌ ಮಾತಿಗೆ ಎಲ್ಲರೂ ರೆಡಿಯಾಗಿ ಹೊರಟರು.

Advertisement

ಎಲ್ಲರ ಮುಖದಲ್ಲೂ ಆತಂಕ. ಕಾರ್‌ ಒಂದು ಹಾಸ್ಪಿಟಲ್‌ ಎದುರಿಗೆ ನಿಂತಿತು. ಒಳ ಹೋಗುತ್ತಿದ್ದಂತೆ ಒಂದು 7 ವರ್ಷದ ಮುದ್ದಾದ ಹೆಣ್ಣು ಮಗು ಬಂದು ದೀಪಕ್‌ನನ್ನು ಅಪ್ಪಿ ಹಿಡಿದು, “ಅಂಕಲ್‌, ಅಮ್ಮ ಕಣ್ಣು ಬಿಡ್ತಾ ಇಲ್ಲ’ ಎಂದು ಬಿಕ್ಕಿ ಬಿಕ್ಕಿ ಅಳುತ್ತಿತ್ತು. ಅಷ್ಟರಲ್ಲಿ ಡಾಕ್ಟರ್‌ ಬಂದು, “ರಾಗಿಣಿ ಈಸ್‌ ನೊ ಮೋರ್‌’ ಎಂದರು. ದೀಪಕ್‌ ಹೆಂಡತಿಗೆ ಅಲ್ಲಿನ ಸ್ಥಿತಿ ಅರ್ಥವೇ ಆಗುತ್ತಿರಲಿಲ್ಲ. ಆಗ ದೀಪಕ್‌ ಹೆಂಡತಿ, ಮಾವ, ಭಾವ-ಮೈದನರಲ್ಲಿ ಹೇಳಿದ, “ರಾಗಿಣಿ ನನ್ನ ಆಫೀಸಲ್ಲಿ ಕೆಲಸ ಮಾಡುವ ಗುಮಾಸ್ತೆ. ಅವಳ ಗಂಡ ಆಕ್ಸಿಡೆಂಟ್‌ನಲ್ಲಿ ಹೋಗ್ಬಿಟ್ಟ. ಆಗ ನೋಡಲು ನಾನು ಹೋಗಿದ್ದೆ. ಅವರಿಬ್ಬರ ಮಗು ಇದು. ಅಂದಿನಿಂದ ನನ್ನ ಬಹಳವಾಗಿ ಹಚ್ಚಿಕೊಂಡಿದ್ದಾಳೆ. ನಾನೂ ಆ ಮಗುವನ್ನು ಬಹಳ ಇಷ್ಟ ಪಡುತ್ತೇನೆ. ಅದೇ ಮಗು ನನಗೆ ದಿನವೂ ಮೆಸೇಜ್‌ ಮಾಡ್ತಾ ಇರೋದು. ಡಿಪಿಯಲ್ಲಿ ತಾಯಿಯ ಫೋಟೋ ಹಾಕಿಕೊಂಡಿದ್ದಾಳೆ. ನಂಬರ್‌ ಕೂಡಾ ತಾಯಿಯದು. ಆದ್ರೆ ಮಗುವಿನ ತಾಯಿಗೆ ಕ್ಯಾನ್ಸರ್‌ ಆಗಿ ಇಂದು ಬೆಳಿಗ್ಗೆ ತೀರಿ ಹೋದಳು. ಬೆಳಿಗ್ಗೆ ಇದೇ ಮಗು ಫೋನ್‌ ಮಾಡಿ, “ಅಂಕಲ್‌ ಬರ್ತೀರಾ? ಅಮ್ಮನ ಮುಖದ ಮೇಲೆ ಹೊದಿಕೆ ಮುಚ್ಚಿದಾರೆ’ ಅಂದಳು. ಹಾಗೇ ನಿಮ್ಮ ಕರೆದುಕೊಂಡು ಬಂದೆ. ಯಾವ ಜನ್ಮದ ಋಣವೋ ಗೊತ್ತಿಲ್ಲ. ನನ್ನ ಮತ್ತು ಮಗುವಿನದು’ ಎಂದು ಹೇಳುತ್ತಾ ಮಗುವನ್ನು ತಬ್ಬಿಕೊಂಡು ಬಿಕ್ಕಳಿಸತೊಡಗಿದ.

ದೀಪಕ್‌ ಹೆಂಡತಿಗೆ, ಮಾವ, ಭಾವ-ಮೈದನರಿಗೆ ತಮ್ಮ ಬಗ್ಗೆನೆ ಅಸಹ್ಯ ಅನಿಸತೊಡಗಿತು. “ರೀ ನನ್ನ ಕ್ಷಮಿಸಿ…’ ಅಂದಳು. ಡಾಕ್ಟರ್‌ ಮುಂದಿನ ಕೆಲಸಕ್ಕಾಗಿ ದೀಪಕ್‌ ಅನ್ನ ಕರೆದರು. ಮಗು ಹಸಿದಿತ್ತು. ದೀಪಾ ಎತ್ತಿಕೊಂಡು ಹೋಗಿ ಹಾಸ್ಪಿಟಲ್‌ ಕ್ಯಾಂಟೀನ್‌ನಲ್ಲಿ ತಿಂಡಿ ತಿನ್ನಿಸಿದಳು. ಏನೂ ಅರಿಯದ ಆ ಮಗುವಿನ್ನು ನೋಡಿ ದೀಪಾಳಿಗೆ ಸಂಕಟವಾಗುತ್ತ ಇತ್ತು.

ಅನಾಥೆಯಾಗಿದ್ದ ರಾಗಿಣಿಯ ಮದುವೆ ಕೂಡ ಅವಳ ಗಂಡನ ಮನೆಯವರ ವಿರುದ್ಧವಾಗಿ ನಡೆದಿತ್ತು. ಹಾಗಾಗಿ ಮನೆಯವರು ಇವರನ್ನು ಸೇರಿಸುತ್ತಿರಲಿಲ್ಲ. ಗಂಡ ತೀರಿದ ಬಳಿಕ ಅವನ ಆಫೀಸಿನಲ್ಲೇ ಅನುಕಂಪದ ಆಧಾರದ ಮೇಲೆ ಗುಮಾಸ್ತೆ ಕೆಲಸ ಸಿಕ್ಕಿತ್ತು. ಅಷ್ಟರಲ್ಲಿ ಈ ಖಾಯಿಲೆ ಕಾಣಿಸಿಕೊಂಡಿತ್ತು. ಅವಳು ಕೂಡಿಟ್ಟ ಅಲ್ಪ-ಸ್ವಲ್ಪ ಹಣವೂ ಖಾಲಿಯಾಗಿ, ದೀಪಕ್‌ನಲ್ಲಿ ಸಹಾಯ ಕೇಳಿದ್ದಳು. ಮಾನವೀಯತೆಯಿಂದಾಗಿ ದೀಪಕ್‌ ಸಾಕಷ್ಟು ಸಹಾಯ ಮಾಡಿದ್ದ. ಆದರೆ ಈ ವಿಷಯವನ್ನು ಪತ್ನಿಗೆ ಹೇಳಲು ಹಲವಾರು ಬಾರಿ ಪ್ರಯತ್ನಿಸಿ, ಸರಿಯಾದ ಅವಕಾಶವಾಗದೇ ಸುಮ್ಮನಾಗಿದ್ದ. ಜೊತೆಗೆ ಸಣ್ಣ ಸಣ್ಣ ವಿಷಯಕ್ಕೂ ಅನುಮಾನ ಪಟ್ಟು ರಾದ್ಧಾಂತ ಮಾಡುವ ಅವಳ ಸ್ವಭಾವಕ್ಕೆ, ಸೌಮ್ಯ ಗುಣದ ದೀಪಕ್‌ ಹಿಂಜರಿಯುತ್ತಿದ್ದ. ದೀಪಕ್‌ನನ್ನು ಬಾಯಿ ತುಂಬಾ “ಅಣ್ಣಾ..’ ಎಂದು ಕರೆಯುವ, ರಾಗಿಣಿಗೆ ಬದುಕುವ ಭರವಸೆ ಬತ್ತತೊಡಗಿದಾಗ ಮಗುವಿನದ್ದೇ ಚಿಂತೆಯಾಗಿತ್ತು. ದೀಪಕ್‌ನಲ್ಲಿ ಬೇಡಿಕೊಂಡಿದ್ದಳು “ನನ್ನ ಮಗುವನ್ನು ಯಾರಾದ್ರೂ ಒಳ್ಳೆಯವರ ಮಡಿಲಿಗೆ ಹಾಕಿ’ ಅಂತ. ಆಸ್ಪತ್ರೆಯ ಎಲ್ಲಾ ವಿಧಿವಿಧಾನ ಮುಗಿದು ದೇಹವನ್ನು ದೀಪಕ್‌ಗೆ ಒಪ್ಪಿಸಿದಾಗ, ಅದೇ ಊರಲ್ಲಿರುವ ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ಮಾಡಿದ. ಆಕೆಯ ಆಫೀಸಿನ ಎಲ್ಲರೂ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಎಲ್ಲರೂ ಅವರ ಕುಟುಂಬಕ್ಕೆ ಆದ, ಅದರಲ್ಲೂ ಮಗುವಿನ ಸ್ಥಿತಿಗೆ ಮಮ್ಮಲ ಮರುಗಿದ್ದರು. ಸುಸ್ತಾಗಿ ನಿದ್ದೆ ಹೋಗಿದ್ದ ಮಗುವನ್ನು ತನ್ನದೇ ಸ್ವಂತ ಮಗುವೇನೋ ಎಂಬಂತೆ ಎದೆಗೆ ಅವಚಿಕೊಂಡು, ತನ್ನಲ್ಲಿರುವ ತಾಯ್ತನವನ್ನು ಅನುಭವಿಸುತ್ತಿದ್ದಳು ದೀಪಾ.

ಎಲ್ಲಾ ಕೆಲಸ ಮುಗಿಸಿ ಮನೆಗೆ ಹೊರಟಾಗ ದೀಪಾಳ ಹತ್ತಿರ, “ಮಗುವನ್ನು ಅನಾಥಾಶ್ರಮಕ್ಕೆ ಸೇರಿಸುವ ಬಗ್ಗೆ ಮಾತಾಡಿ ಹೋಗೋಣ’ ಅಂದ. ಆಗಲೇ ಮಗುವಿನೊಂದಿಗೆ ಆತ್ಮೀಯ ಬಂಧ ಬೆಸೆದುಕೊಂಡಿದ್ದ ದೀಪಾ, “ರೀ… ನಾನಿರುವಾಗ ಇನ್ನೆಲ್ಲೂ ಮಗುವನ್ನು ಬಿಡೋದು ಬೇಡ. ಇವತ್ತಿಂದ ಇದು ನನ್ನ ಮಗು’ ಅಂದಾಗ ದೀಪಕ್‌ನ ಹೃದಯ ತುಂಬಿ ಬಂದಿತ್ತು. “ನೀವು ಮಗುವನ್ನು ಕರೆದುಕೊಂಡು ಮನೆಗೆ ಹೋಗಿ, ನಾನು ಈ ಮಗುವನ್ನು ದತ್ತು ತೆಗೆದುಕೊಳ್ಳುವ ವಿಚಾರವಾಗಿ ಲಾಯರ್‌ ಹತ್ತಿರ ಹೋಗಿ ಬರುತ್ತೇನೆ’ ಎಂದು ಕಾರಿಂದ ಇಳಿದ. ಭಾವ-ಮೈದ ಡ್ರೈವಿಂಗ್‌ ಸೀಟ್‌ನಲ್ಲಿ ಕುಳಿತ. ಮಗು ಇದ್ಯಾವುದರ ಪರಿವೆಯೇ ಇರದೆ ಮುದ್ದಾಗಿ ದೀಪಾಳ ತೊಡೆಯ ಮೇಲೆ ಮಲಗಿತ್ತು. ನಿದ್ರೆ ಮಾಡುತ್ತಿದ್ದ ಮಗುವಿನ ಮುಗ್ಧ ಮುಖ ನೋಡುತ್ತಾ, “ಇದು ಯಾವ ಜನ್ಮದ ಅನುಬಂಧವೋ?’ ಎಂದು ಯೋಚಿಸುತ್ತಾ ಇದ್ದ ದೀಪಾಳ ಕಣ್ಣಂಚಿನಿಂದ ನೀರು ಜಿನುಗುತ್ತಿತ್ತು.

– ಶುಭಾ ನಾಗರಾಜ್‌

Advertisement

Udayavani is now on Telegram. Click here to join our channel and stay updated with the latest news.

Next