Advertisement
ನಮ್ಮೊಳಗಿನ ನಾನು ಯಾರು? ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ನಮ್ಮ ದೇಹ, ವಿದ್ಯೆ, ಉದ್ಯೋಗ, ಇನ್ನಾವುದೋ ವಿಶೇಷತೆಗಳಿಂದ ಗುರುತಿಸಿಕೊಳ್ಳುತ್ತಿದ್ದೇವೆಯೇ ಹೊರತು ಅದರಿಂದಾಚೆಗೆ ನಾನು ಎಂದರೆ ಯಾರು? ಏನು? ಎಂಬುದು ಉತ್ತರವಿಲ್ಲದ ಪ್ರಶ್ನೆ. ದೇಹಮಾತ್ರವೇ ನಮಗೆ ನಾನು ಎಂಬುದರ ರೂಪವಾಗಿ ಹೊರಗಣ್ಣಿಗೆ ಕಾಣುತ್ತಿರುತ್ತದೆ. ಆದರೆ ನಮ್ಮ ಆತ್ಮವು ಏನು? ಎಲ್ಲಿಂದ ಬಂದುದು? ಎಂಬುದಕ್ಕೆ ಕಾರಣವಾಗಿ ನಾವು ಕಂಡುಕೊಂಡಿದ್ದು ದೇವರು. ಎಲ್ಲವನ್ನೂ ನಿಯಂತ್ರಿಸುವ ಶಕ್ತಿಯಾದ ಈ ನಿರಾಕಾರ, ನಿರ್ಮಲವಾದ ಪರಮಾತ್ಮ ಎಲ್ಲಿ ನೆಲೆಸುತ್ತಾನೆ? ಎಂಬ ಪ್ರಶ್ನೆಗೆ ಶ್ವೇತಾಶ್ವತರ ಉಪನಿಷತ್ತಿನಲ್ಲಿದೆ.ನವದ್ವಾರೇ ಪುರೇ ದೇಹೀ
ಹಂಸೋ ಲೇಲಾಯತೇ ಬಹಿಃ |
ವಶೀ ಸರ್ವಸ್ಯ ಲೋಕಸ್ಯ
ಸ್ಥಾವರಸ್ಯ ಚರಸ್ಯ ಚ || (3. 18)
ಜೀವಿಯ ದೇಹದಲ್ಲಿಯೇ ದೇವರು ವಾಸಿಸುತ್ತಾನೆ. ಈ ದೇವೋತ್ತಮ ಅಥವಾ ಪರಮಪುರುಷನು ಜೀವಿಗಳ ದೇಹದಲ್ಲಿದ್ದುಕೊಂಡೇ ವಿಶ್ವವನ್ನು ನಿಯಂತ್ರಿಸುತ್ತಾನೆ. ನವದ್ವಾರಗಳುಳ್ಳ ಶರೀರವೆಂಬ ಪುರದಲ್ಲಿ ದೇವರು ಇದ್ದುಕೊಂಡೇ ಹೊರಗೆಲ್ಲ ಚಲಿಸುತ್ತಾನೆ
ಸರ್ವಕರ್ಮಾಣಿ ಮನಸಾ
ಸನ್ನ್ಯಾಸ್ಯಾಸ್ತೇ ಸುಖಂ ವಶೀ |
ನವದ್ವಾರೇ ಪುರೇ ದೇಹೀ ನೈವ
ಕುರ್ವನ್ನ ಕಾರಯನ್ ||13|| ಅಧ್ಯಾಯ 5||
ದೇಹಸ್ಥ ಜೀವಿಯು ತನ್ನ ಸ್ವಭಾವಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಮಾನಸಿಕವಾಗಿ ಎಲ್ಲ ಕರ್ಮಗಳನ್ನೂ ತ್ಯಜಿಸಿದಾಗ ಅವನು ನವದ್ವಾರಗಳ ನಗರದಲ್ಲಿ ಸುಖವಾಗಿ ವಾಸಿಸುತ್ತಾನೆ. ಅವನು ಕಾರ್ಯಗಳನ್ನು ಮಾಡಿಸುವುದೂ ಇಲ್ಲ, ಮಾಡುವುದೂ ಇಲ್ಲ ಎಂದು ಗೀತೆ ಹೇಳುತ್ತದೆ.
Related Articles
Advertisement
ನವದ್ವಾರ ಗಳೂ ದೇವರ ವಾಸಸ್ಥಾನವಾದ್ದರಿಂದ ನಾವು ನೋಡುವ, ಕೇಳುವ ಸಂಗತಿಗಳು ಉತ್ತಮವಾದುದೇ ಆಗಿರಬೇಕು. ಸೇವಿಸುವ ಆಹಾರ ದೇಹವನ್ನು ಸಮಸ್ಥಿತಿಯಲ್ಲಿಡು ವಂತಿರಬೇಕು. ಮೂಗು ಹುಡುಕಿದ ಪರಿಮಳವನ್ನು ಅರಸಿಕೊಂಡು ಕಣ್ಣು ಹೋಗುತ್ತದೆ. ಅದು ಒಳ್ಳೆಯದೇ ಆಗಿದ್ದರೆ ಒಳಿತಾಗುತ್ತದೆ. ಇಲ್ಲವೆಂದಾದಲ್ಲಿ ಕೆಟ್ಟದಾಗುತ್ತದೆ. ಹಾಗಾಗಿ ಪರಿಮಳವನ್ನೂ ಪರಾಂಬರಿಸುವ ಯುಕ್ತಿ ನಮ್ಮಲ್ಲಿರಬೇಕು. ದೇಹದ ಪರಿಶುದ್ಧತೆಯಿಂದ ಆತ್ಮವೂ ಶುದ್ಧವಾಗಿ ಶಾಂತಿಯನ್ನು ಹೊಂದುತ್ತದೆ. ದೇವರು ವಾಸಿಸುವ ದೇಹ ದೇವರ ಗುಡಿ. ಈ ಗುಡಿಯನ್ನು ಶುದ್ಧವಾಗಿಟ್ಟು ಕೊಳ್ಳುವುದು ನಮ್ಮ ಗುರಿಯಾಗ ಬೇಕು. ನಮ್ಮೊಳಗಿನ ದೇವರನ್ನು ನಾವು ಕಂಡುಕೊಂಡಾಗ ಸಿಗುವ ಆನಂದವೇ ದೈವತ್ವ.