ನವದೆಹಲಿ: ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ದೊರೆ ಶ್ರೀಕೃಷ್ಣ ದೇವರಾಯ ದಾನ ಕೊಟ್ಟ ವಜ್ರ, ವೈಡೂರ್ಯ ಸೇರಿದಂತೆ ಚಿನ್ನಾಭರಣಗಳು ಎಲ್ಲಿದೆ ಎಂದು ಕೇಂದ್ರ ಮಾಹಿತಿ ಆಯೋಗ ಪ್ರಶ್ನಿಸಿದೆ.
ಶ್ರೀಕೃಷ್ಣ ದೇವರಾಯ ತಿರುಪತಿ ದೇವಳಕ್ಕೆ ನೀಡಿದ್ದ ವಜ್ರಾಭರಣಗಳು ಎಲ್ಲಿವೆ ಎಂಬ ಪ್ರಶ್ನೆಯನ್ನು ಕೇಂದ್ರ ಮಾಹಿತಿ ಆಯೋಗ, ಭಾರತೀಯ ಪುರಾತತ್ವ ಇಲಾಖೆ, ಕೇಂದ್ರ ಸಾಂಸ್ಕೃತಿಕ ಸಚಿವಾಲಯ, ಆಂಧ್ರಪ್ರದೇಶ ಸರ್ಕಾರ ಹಾಗೂ ತಿರುಮಲ ತಿರುಪತಿ ದೇವಸ್ವಂ(ಟಿಟಿಡಿ) ಅನ್ನು ಪ್ರಶ್ನಿಸಿದೆ.
ತಿರುಪತಿ ತಿರುಮಲ ದೇವಾಲಯವನ್ನು ವಿಶ್ವ ಪಾರಂಪರಿಕ ಸ್ಮಾರಕ ಎಂದು ಘೋಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಬಿಕೆಎಸ್ ಆರ್ ಅಯ್ಯಂಗಾರ್ ಎಂಬವರು ಕೇಂದ್ರ ಮಾಹಿತಿ ಆಯೋಗದ ಮೊರೆ ಹೋಗಿದ್ದರು.
ಈ ಪ್ರಶ್ನೆಯನ್ನು ಅಯ್ಯಂಗಾರ್ ಅವರು ಹಲವು ಅಧಿಕಾರಿಗಳು, ಇಲಾಖೆಗೆ ಕಳುಹಿಸಿದ್ದರು. ಆದರೆ ಯಾವ ಇಲಾಖೆಯೂ ಸಮರ್ಪಕ ಪ್ರತಿಕ್ರಿಯೆ ನೀಡಿರಲಿಲ್ಲವಾಗಿತ್ತು. ಕೊನೆಗೆ ಅಯ್ಯಂಗಾರ್ ಅವರು ಕೇಂದ್ರ ಮಾಹಿತಿ ಆಯೋಗದ ಕದ ತಟ್ಟಿದ್ದರು. ಆಯೋಗದ ವಿಚಾರಣೆ ವೇಳೆ ಟಿಟಿಡಿ ಹಾಗೂ ಆಡಳಿತ ಮಂಡಳಿ ಸುಮಾರು 1,500 ವರ್ಷಗಳಷ್ಟು ಹಳೆಯದಾದ ಮೂರ್ತಿಯ ರಕ್ಷಣೆಯನ್ನು ಸೂಕ್ತವಾಗಿ ಮಾಡಿಲ್ಲ ಎಂದು ಅಯ್ಯಂಗಾರ್ ದೂರಿದ್ದರು.
ಈ ಹಿನ್ನೆಲೆಯಲ್ಲಿ ಅಯ್ಯಂಗಾರ್ ಅವರ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯುಲು ಅವರು, ತಿರುಮಲ ತಿರುಪತಿ ದೇವಸ್ಥಾನವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಲು ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಬಹಿರಂಗ ಮಾಡುವಂತೆ ಪ್ರಧಾನಿ ಕಾರ್ಯಾಲಯಕ್ಕೆ ಸೂಚಿಸಿದ್ದಾರೆ. ಅಲ್ಲದೆ ದೇವಾಲಯಕ್ಕೆ ಶ್ರೀ ಕೃಷ್ಣ ದೇವರಾಯ ನೀಡಿದ್ದ ಆಭರಣಗಳು ಈಗ ಎಲ್ಲಿದೆ ಎಂಬುದರ ಬಗ್ಗೆಯೂ ಸ್ಪಷ್ಟನೆ ನೀಡುವಂತೆ ಆಂಧ್ರ ಪ್ರದೇಶ ಸರ್ಕಾರವೂ ಸೇರಿದಂತೆ ಸಂಬಂಧಪಟ್ಟ ಸಚಿವಾಲಯ ಮತ್ತು ಇಲಾಖೆಗಳಿಗೆ ಸೂಚನೆ ನೀಡಿದೆ.