ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಒಂದು ದುರಭ್ಯಾಸವಿದೆ. ಗೆಲ್ಲಲಿ, ಸೋಲಲಿ ಅದು ಎದುರಾಳಿ ತಂಡಗಳನ್ನು ಅಣಕಿಸುತ್ತದೆ, ವ್ಯಂಗ್ಯವಾಡುತ್ತದೆ. ಎದುರಾಳಿಗಳಿಗೆ ಪಿತ್ಥ ನೆತ್ತಿಗೇರುವಂತೆ ಮಾಡುತ್ತದೆ. ಬಾಂಗ್ಲಾ ತಂಡ ದುರ್ಬಲವಾಗಿದ್ದಾಗ ಪರಿಸ್ಥಿತಿ ಸ್ವಲ್ಪ ಸರಿಯೇ ಇತ್ತು. ಯಾವಾಗ ಅದು ಗೆಲ್ಲಲಾರಂಭಿಸಿತೋ, ಆಗದಕ್ಕೆ ದುರಹಂಕಾರ ಶುರುವಾಯಿತು. ನಾಗಿಣಿ ನೃತ್ಯ ಮಾಡುವುದು, ಆ ದೇಶದ ಪತ್ರಿಕೆಗಳು ಎದುರಾಳಿಗಳನ್ನು ಹೀನಾಯವಾಗಿ ಚಿತ್ರಿಸುವುದು ನಡೆದೇ ಇದೆ.
ಭಾರತದ ವಿರುದ್ಧ ಪಂದ್ಯ ನಡೆದ ನಂತರವಂತೂ ಬಾಂಗ್ಲಾ ಅತಿರೇಕದ ವರ್ತನೆ ತೋರುತ್ತದೆ. ಇತ್ತೀಚೆಗೆ 19 ವಯೋಮಿತಿ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ವಿರುದ್ಧ ಗೆದ್ದ ನಂತರ ಅದು ಇನ್ನೊಮ್ಮೆ ದುರ್ವರ್ತನೆ ತೋರಿತು. ಪಂದ್ಯ ಮುಗಿದ ನಂತರ ತಮ್ಮನ್ನು ರೇಗಿಸಿದ್ದರಿಂದ ಸಿಟ್ಟಾದ ಭಾರತೀಯರು, ಬಾಂಗ್ಲಾ ಕ್ರಿಕೆಟಿಗರನ್ನು ತಳ್ಳಾಡಿದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಭಾರತದ ವಿರುದ್ಧ ಬಾಂಗ್ಲನ್ನರ ಈ ವರ್ತನೆ ಹೊಸತೇನಲ್ಲ.
2015ರ ಏಕದಿನ ವಿಶ್ವಕಪ್ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ ವಿರುದ್ಧ ಬಾಂಗ್ಲಾ ಸೋತು ಹೋಗಿತ್ತು. ಆ ಪಂದ್ಯದಲ್ಲಿ ರೋಹಿತ್ ಶರ್ಮ 90 ರನ್‌ಗಳಾಗಿದ್ದಾಗ ಎಲ್ಬಿ ಮೂಲಕ ಔಟಾಗಿದ್ದರು. ಆದರೆ ಆ ಎಸೆತವನ್ನು ಅಂಪೈರ್ ನೋಬಾಲ್ ಎಂದು ಹೇಳಿದರು. ಇಲ್ಲಿ ರೋಹಿತ್ ಔಟಾಗಿದ್ದರೂ, ಆಗದಿದ್ದರೂ ಭಾರತೀಯರ ಗೆಲುವನ್ನೇನು ತಪ್ಪಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅದನ್ನು ಗಣಿಸದೇ ಬಾಂಗ್ಲಾದವರು ಗಲಾಟೆ ಮಾಡಿ,
ಅಂಪೈರ್ ತೀರ್ಪನ್ನು ಭಾರತೀಯರ ಪಿತೂರಿ ಎಂಬಂತೆ ಬಣ್ಣಿಸಿದರು. ಮುಂದೆ ಧೋನಿ ನಾಯಕತ್ವದಲ್ಲಿ ಬಾಂಗ್ಲಾಕ್ಕೆ ತೆರಳಿದ ಭಾರತ, ಏಕದಿನ ಸರಣಿಯಲ್ಲಿ 2-1ರಿಂದ ಸೋತುಹೋಯಿತು. ಆಗ ಅಲ್ಲಿನ ಪತ್ರಿಕೆ ಪ್ರಾಥೋಮ್ ಆಲೋ, ಭಾರತೀಯ ಕ್ರಿಕೆಟಿಗರ ತಲೆಬೋಳಿಸಿದ ಚಿತ್ರವನ್ನು ಹಾಕಿತು. ಈ ಕೀಳು ಅಭಿರುಚಿ ಕಟು ಟೀಕೆಗೆ ಕಾರಣವಾಯಿತು. 2016ರಲ್ಲಿ ಭಾರತದ ವಿರುದ್ಧ ಟಿ20 ವಿಶ್ವಕಪ್‌ನಲ್ಲಿ ಸೋತ ನಂತರವೂ ಬಾಂಗ್ಲನ್ನರು ಟೀವಿಯನ್ನೇ ಒಡೆದು ಹಾಕುವ ಮಟ್ಟಕ್ಕೆ ಹೋಗಿದ್ದರು!