ಜೀವನದಲ್ಲಿ ಕೆಲವೊಂದನ್ನು ಮರಿಬೇಕು ಇನ್ನೂ ಕೆಲವೊಂದನ್ನ ಮರೆಯೋಕಾಗದೆ ಇದ್ದರು, ಮರೆತಿರುವ ಹಾಗೆ ಬದುಕುವುದೇ ಜೀವನ. ಬದುಕಿನ ಸಿಹಿ ಹಾಗೂ ಕಹಿಗಳ ಸಮನ್ವಯವೇ ನೆನಪು. ಸಂಬಂಧಗಳು ಹೇಗೆಂದರೆ ಒಡಹುಟ್ಟಿದವರೇ ಆಗಬೇಕೆಂದಿಲ್ಲ ಹಿತ ಬಯಸುವ, ಎಲ್ಲ ಸಮಯದಲ್ಲೂ ಜತೆ ನಡೆಯುವ ನಂಟು ಎನ್ನಬಹುದು. ಕೆಲವು ಸಂಬಂಧಗಳು ಕಟ್ಟಿದ ಮೂಟೆಯಂತೆ, ಬಿಗಿಯಾಗಿದ್ದರೆ ಮಾತ್ರ ನಮ್ಮದು, ಇಲ್ಲವಾದಲ್ಲಿ ಪರರ ಪಾಲಾಗುವುದು.
ಹಾಗಂತ ಎಲ್ಲ ಸಮಯದಲ್ಲು ಬಿಗಿ ಭದ್ರತೆ ಸೂಕ್ತವಲ್ಲ ಬದಲಿಗೆ ಪ್ರೀತಿ ಮುಖ್ಯವಾಗುತ್ತದೆ. ನಂಬಿಕೆ, ಪ್ರೀತಿ, ಸಹನೆ ಒಂದಿದ್ದರೆ ಎಲ್ಲವನ್ನು ತಮ್ಮದಾಗಿಸಬಹುದೇ ಹೊರತು ಅಹಂಕಾರದಿಂದಲ್ಲ. ಜೀವನದಲ್ಲಿ ಕೆಲವು ಸಂಬಂಧಗಳಿಗೆ ಬೆಲೆಕಟ್ಟಲಾಗದಷ್ಟು ಮಹತ್ವವಿದೆ ಯಾರು? ಏನು? ಜಾತಿ? ಯಾವುದು ನೋಡದೆ ಆಗುವ ಸಂಬಂಧಗಳೇ ನಮ್ಮ ಜೀವನ ಪೂರ್ತಿ ಇರುತ್ತೆ. ಅದು ನಮ್ಮ ರಕ್ತಸಂಬಂಧಗಳಿಗಿಂತಲೂ ಮೇಲು.
ಆದರೇ ಇತ್ತೀಚಿನ ದಿನಗಳಲ್ಲಿ ಯಾವ ಸಂಬಂಧಕ್ಕೂ ಬೆಲೆ ಇಲ್ಲ. ಲಾಭ ಇದ್ದಲ್ಲಿ ನಮ್ಮ ಜೊತೆ ಮಾತು, ಖುಷಿ, ಸುತ್ತಾಟ, ಅದೇ ಬೇಡವಾದಲ್ಲಿ ಯಾವುದು ಇಲ್ಲ. ಸಂಬಂಧಗಳು ಕೇವಲ ಸ್ವಾರ್ಥ ಹಾಗೂ ದುಡ್ಡಿನ ಆಸರೆಗಷ್ಟೇ ಮೀಸಲು ಎನ್ನುವಂತಾಗಿದೆ.ಒಬ್ಬರ ಜತೆಗೆ ಉತ್ತಮ ಸ್ನೇಹವಾಗಲು ಕಾಗದಲ್ಲಿನ ಬರವಣಿಗೆಯಷ್ಟೇ ಸುಲಭ, ಆದರೇ ಅದನ್ನು ಉಳಿಸಿಕೊಳ್ಳುವುದು ನೀರಿನ ಮೇಲೆ ಬರೆಯುವಷ್ಟೇ ಕಷ್ಟ.
ಜೀವನ ನಮ್ಮದು, ನನ್ನದು ಅನ್ನುವುದು ಯಾವುದು ಇಲ್ಲ ಎಲ್ಲಾ ಬದುಕಿನ ಪಾಠ ಅಷ್ಟೇ. ಎಲ್ಲಾ ಮರೆತು ಹೊಸ ಅಧ್ಯಾಯ ಪಾರಂಭ ಮಾಡುವಾಗ ಹಳೆ ಅಧ್ಯಾಯ ಮುಗಿದು ನೆನಪುಗಳಷ್ಟೇ ಉಳಿದಿರುತ್ತವೆ.ಆಧುನಿಕತೆಗೆ ಮರುಳಾಗಿರುವ ಈ ಕಾಲದಲ್ಲಿ ನೆನಪುಗಳಷ್ಟೇ ಶಾಶ್ವತ. ಹೇಗೆ ಎಂದು ಯೋಚಿಸುತ್ತಿದ್ದೀರಾ ನಾವು ಒಬ್ಬ ವ್ಯಕ್ತಿಯ ಮೇಲೆ ಅಪಾರವಾದ ಪ್ರೀತಿ ಇಟ್ಟರೆ ಅವರ ಸಣ್ಣ ಪುಟ್ಟ ಬದಲಾವಣೆಗಳು ಮನಸ್ಸಿಗೆ ತುಂಬಾ ನೋವುಂಟು ಮಾಡುತ್ತದೆ. ಆದರೇ ಅದು ಅವರಿಗೆ ತಿಳಿಯುವಷ್ಟರಲ್ಲಿ ಜಗಳಗಳಾಗಿ ಸಂಬಂಧಗಳೇ ಕಡಿದುಹೋಗಿರುತ್ತವೆ.ಹಾಗಾಗಿ ಮಿತಿಯೊಳಗಿನ ಬದುಕು ನೆಮ್ಮದಿಯ ಬುನಾದಿಯಾಗಿದೆ.
ಕಾವ್ಯಾ ಪ್ರಜೇಶ್
ಪೆರುವಾಡು, ಕುಂಬಳೆ