Advertisement

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

11:33 PM Nov 21, 2024 | Team Udayavani |

ಹುಬ್ಬಳ್ಳಿ/ಮಣಿಪಾಲ: ವಕ್ಫ್ ಅವಾಂತರದ ವಿರುದ್ಧ ಸಮರ ಸಾರಿರುವ ಬಿಜೆಪಿ ಗುರುವಾರ ಉತ್ತರ ಕರ್ನಾಟಕದ 6 ಜಿಲ್ಲೆಗಳು, ಉಡುಪಿ ಸೇರಿ ಹಲವೆಡೆ ಪ್ರತಿಭಟನೆ ನಡೆಸಿ ಅನ್ನದಾತರು, ಮಠಗಳ ಆಸ್ತಿಗೆ ಕನ್ನ ಹಾಕಿರುವ ರಾಜ್ಯ ಸರಕಾರಕ್ಕೆ ಹಿಡಿಶಾಪ ಹಾಕಿತು.

Advertisement

ರಾಯಚೂರು, ಬಳ್ಳಾರಿ, ಕಲಬುರಗಿ, ಉತ್ತರ ಕನ್ನಡ, ಹಾವೇರಿ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು ಸರಕಾರ ರೈತರ ಜಮೀನು ಕಬಳಿಸಿ ದ್ರೋಹ ಮಾಡಲು ಹೊರಟಿದೆ. ನೂರಾರು ವರ್ಷಗಳ ಇತಿಹಾಸ ಇರುವ ಮಠಗಳಿಗೂ ವಕ್ಫ್ ಮೊಹರು ಹಾಕಿ ಹಿಂದೂ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

“ನಮ್ಮ ಭೂಮಿ ನಮ್ಮ ಹಕ್ಕು’ ಹೆಸರಿನಲ್ಲಿ ಬಹುತೇಕ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್‌ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು ಸಚಿವ ಜಮೀರ್‌ ಅಹಮದ್‌ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಸಿ.ಟಿ. ರವಿ ನೇತೃತ್ವದಲ್ಲಿ ಪ್ರತಿಭಟಿಸಿದ ಕಾರ್ಯಕರ್ತರು ರೈತರ ಬದುಕು ಕಸಿಯುವ, ಮಠಗಳ ಆಸ್ತಿಗೆ ಕನ್ನ ಹಾಕುವ ಕರಾಳ ಕಾಯ್ದೆ ರದ್ದಾಗಬೇಕೆಂದು ಆಗ್ರಹಿಸಿದರು. ರಾಯಚೂರು ಜಿಲ್ಲೆ ಸಿರಿವಾರದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ದೇ.ಜವರಾಜಗೌಡ ಪ್ರತಿಭಟಿಸಿ ಕಾಂಗ್ರೆಸ್‌ ಸರಕಾರ ಮತ ಬ್ಯಾಂಕ್‌ಗಾಗಿ ಒಂದು ಸಮುದಾಯವನ್ನು ಓಲೈಸುತ್ತಿದೆ ಎಂದು ಆರೋಪಿಸಿದರು.

ಕಾರವಾರದಲ್ಲಿ ಡಿಸಿ ಕಚೇರಿ ಎದುರು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಿದ ಬಿಜೆಪಿ ಕಾರ್ಯಕರ್ತರು ಸಚಿವ ಜಮೀರ್‌ ಆಧುನಿಕ ಭಸ್ಮಾಸುರ ಇದ್ದಂತೆ. ಕಾಂಗ್ರೆಸ್‌ ಸರಕಾರ ಬಡವರ ಪರ ಇಲ್ಲ. ರೈತರ ಭೂಮಿ ಕಬಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಕಲಬುರಗಿಯಲ್ಲಿ “ವಕ್ಫ್ ಹಠಾವೋ ಅನ್ನದಾತ ಬಚಾವೋ’ ಘೋಷವಾಕ್ಯದಡಿ ಶ್ರೀಗಳ ನೇತೃತ್ವದ ಪ್ರತಿಭಟಿಸಿದರೆ, ಹಾವೇರಿಯ ಸಿದ್ದಪ್ಪ ಹೊಸಮನಿ ವೃತ್ತದಲ್ಲಿ ಪ್ರತಿಭಟಿಸಿ ರೈತರ ಭೂಮಿ, ಮಠ ಮಂದಿರ, ಸರ್ಕಾರಿ ಶಾಲೆಯ ಭೂಮಿಗಳ ಮೇಲೆ ವಕ್ಫ್  ಆಸ್ತಿ ಎಂದು ನಮೂದಿಸಿ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಹೊರಭಾಗದಲ್ಲಿ ಪ್ರತಿಭಟನೆ ನಡೆಯಿತು.

ಕಲಬುರಗಿ: ವಕ್ಫ್ ವಿರುದ್ಧ ಸ್ವಾಮೀಜಿಗಳ ಧರಣಿ
ವಕ್ಫ್ ವಿರುದ್ಧ ಸಿಡಿದೆದ್ದಿರುವ ಮಠಾಧೀಶರು ಕಲಬುರಗಿಯಲ್ಲಿ ಗುರುವಾರದಿಂದ ಮೂರು ದಿನಗಳ ಕಾಲ “ವಕ್ಫ್ ಹಠಾವೋ-ಅನ್ನದಾತ ಬಚಾವೋ’ ಘೋಷಣೆಯೊಂದಿಗೆ ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆ. 35ಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗವಹಿಸಿದ್ದು ನಗರದ ನೆಹರು ಗಂಜ್‌ನಿಂದ ಜಗತ್‌ ವೃತ್ತದವರೆಗೂ ಕಾಲ್ನಡಿಗೆ ಮೂಲಕ ಯಾತ್ರೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next