Advertisement

ಕಣಬರ್ಗಿ ರಸ್ತೆ ಪೂರ್ಣ ಆಗೋದು ಯಾವಾಗ? ಸಾರ್ವಜನಿಕರ ಆಕ್ರೋಶ

04:14 PM May 13, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ನಗರದ ಹೊರ ವಲಯದ ಕಣಬರ್ಗಿಯಲ್ಲಿ ಒಂದೂವರೆ ವರ್ಷದಿಂದ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿ ವಿಳಂಬಕ್ಕೆ ಸ್ಥಳೀಯ ನಿವಾಸಿಗಳು ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಕಣಬರ್ಗಿ ಬಸ್‌ ನಿಲ್ದಾಣದಿಂದ ಶ್ರೀ ಸಿದ್ದೇಶ್ವರ ದೇವಸ್ಥಾನದವರೆಗೆ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಆದರೆ ರಸ್ತೆ ನಿರ್ಮಾಣ ಕೊನೆಯ ಹಂತಕ್ಕೆ ತಲುಪಿದ್ದರೂ ಮುಗಿಸಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ. ಕಾಮಗಾರಿ ಅರ್ಧಕ್ಕೆ ನಿಂತಿದ್ದರಿಂದ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕಣಬರ್ಗಿಯ ಪ್ರಮುಖ ಮಾರ್ಗವಾಗಿರುವ ಈ ರಸ್ತೆ ನಿರ್ಮಾಣ ವಿಳಂಬದಿಂದ ವಾಹನ ಸವಾರರಿಗೆ ತೀವ್ರ ತೊಂದರೆ ಆಗುತ್ತಿದೆ. ಈ ಮಾರ್ಗದಲ್ಲಿ ಹೆಚ್ಚಿನ ಜನದಟ್ಟಣೆ ಇರುತ್ತದೆ. ರಸ್ತೆ ಮೇಲೆ ಕಲ್ಲು, ಮಣ್ಣು ಬಿದ್ದಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ವಾಹನ ದಟ್ಟಣೆಯಿಂದಾಗಿ ಜನರಿ ತೊಂದರೆ ಅನುಭವಿಸುತ್ತಿದ್ದಾರೆ.

ಎರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ನೀರು ತಗ್ಗುಗಳಲ್ಲಿ ನಿಂತಿದೆ. ಕೆಲಸ ಅರ್ಧಕ್ಕೆ ನಿಂತಿದ್ದರಿಂದ ಮಳೆ ನೀರು ಅಂಗಡಿಗಳ ಎದುರು ನಿಂತು ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಮಳೆ ನೀರಿನಿಂದ ರಸ್ತೆ ಪಕ್ಕದ ಮಣ್ಣುಗಳಿಂದ ರಾಡಿ ಆಗಿದೆ. ಎರಡು ದಿನಗಳಿಂದ ಜನರು ತಿರುಗಾಡುವುದೂ ಕಷ್ಟಕರವಾಗಿದೆ.

ಕಾಮಗಾರಿ ಮುಗಿಸುವಂತೆ ಗ್ರಾಮಸ್ಥರು ಅನೇಕ ಬಾರಿ ಸಂಬಂಧಿಸಿದ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಒಂದೂವರೆ ವರ್ಷದಿಂದ ಸಾರ್ವಜನಿಕರ ಸಮಸ್ಯೆ ಯಾರೂ ಕೇಳುತ್ತಿಲ್ಲ. ರಾತ್ರಿ ಹೊತ್ತಿನಲ್ಲಿ ಸಂಚರಿಸುವಾಗ ಸಣ್ಣಪುಟ್ಟ ಅಪಘಾತಗಳು ಸಂಭವಿಸಿ ಜನರು ಗಾಯಗೊಂಡಿದ್ದಾರೆ. ದೊಡ್ಡ ದೊಡ್ಡ ಕಲ್ಲುಗಳು ರಸ್ತೆ ಮೇಲೆ ಬಿದ್ದಿದ್ದರಿಂದ ಜನರು ಗಾಯಗೊಂಡಿದ್ದಾರೆ. ವಾಹನ ಸವಾರರು ಸ್ಕಿಡ್‌ ಆಗಿ ಬಿದ್ದು ತೊಂದರೆ ಅನುಭವಿಸಿದ್ದಾರೆ. ಪಾದಚಾರಿಗಳಿಗೂ ಅಡ್ಡಾಡಲು ಸಮಸ್ಯೆ ಆಗುತ್ತಿದೆ.

Advertisement

ಗ್ರಾಮದಲ್ಲಿ ಪ್ರಮುಖ ಮಾರ್ಗವಾಗಿರುವ ಈ ರಸ್ತೆ ಕಾಮಗಾರಿ ಮುಗಿಸಲು ವಿಳಂಬ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ರಸ್ತೆ ಕಾಂಗಾರಿ ಬೇಗ ಮುಗಿಸಿ ಸಾರ್ವಜನಿಕರು ನಿಟ್ಟುಸಿರು ಬಿಡುವಂತೆ ಮಾಡಬೇಕು ಎಂದು ಸ್ಥಳೀಯರು
ಆಗ್ರಹಿಸಿದ್ದಾರೆ.

ಕಣಬರ್ಗಿ ಬಸ್‌ ನಿಲ್ದಾಣದಿಂದ ಶ್ರೀ ಸಿದ್ದೇಶ್ವರ ದೇವಸ್ಥಾನವರೆಗೆ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿ ಇನ್ನೂ ಮುಗಿದಿಲ್ಲ. ಒಂದೂವರೆ ವರ್ಷದಿಂದ ಕೆಲಸ ಆಮೆಗತಿಯಲ್ಲಿ ಸಾಗುತ್ತಿದೆ. ಕೆಲಸ ಮುಗಿಸಿ ಜನರಿಗೆ ಅನುಕೂಲ ಮಾಡಿಕೊಡುವಂತೆ ಅನೇಕ ಸಲ ಕೇಳಿಕೊಂಡರೂ ಸಂಬಂಧಿಸಿದವರು ಸ್ಪಂದಿಸುತ್ತಿಲ್ಲ. ಸಾರ್ವಜನಿಕರ ಸಮಸ್ಯೆ ಬೇಗ ಸ್ಪಂದಿಸಿ ಕೆಲಸ ಮುಗಿಸಬೇಕು.
ಅಂಜನಕುಮಾರ ಗಂಡಗುದ್ರಿ,
ಕಣಬರ್ಗಿ ಗ್ರಾಮದ ಹಿರಿಯರು

Advertisement

Udayavani is now on Telegram. Click here to join our channel and stay updated with the latest news.

Next