ತೆಲಸಂಗ: ಮುಂಗಾರು ಹಂಗಾಮಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಆನ್ ಲೈನ್ ಅರ್ಜಿ ಹಾಕುವಾಗ ಉಂಟಾಗಿದ್ದ ಸಮಸ್ಯೆ ಪರಿಹಾರವಾಗಿದ್ದಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದು, ಆದರೆ ಒಂದಕ್ಕಿಂತ ಹೆಚ್ಚು ಖಾತೆ ಹೊಂದಿದ ಬೆಳೆಗಾರರಿಗೆ ಮತ್ತೂಂದು ಸಮಸ್ಯೆ ಎದುರಾಗಿದೆ.
ಪ್ರಸಕ್ತ ವರ್ಷ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಯೋಜನೆಯ ಆನ್‌ಲೈನ್ ಅರ್ಜಿ ಆ್ಯಪ್ ಮರುವಿನ್ಯಾಸಗೊಳಿಸಿದ್ದರಿಂದ ರೈತರು ವಿಮೆ ಭರಿಸಲು ಪರದಾಡುವಂತಾಗಿತ್ತು. ಪಹಣಿ ಪತ್ರದಲ್ಲಿನ ಹೆಸರು, ಆಧಾರ ಕಾರ್ಡ್‌ಲ್ಲಿನ ಹೆಸರು ತಿರುವು ಮುರುವಾಗಿದ್ದರೂ ವಿಮೆ ಅರ್ಜಿ ತಿರಸ್ಕಾರಗೊಳ್ಳುತ್ತಿತ್ತು. ಬುಧವಾರ ಮಧ್ಯಾಹ್ನದ ಹೊತ್ತಿಗೆ ಅಧಿಕಾರಿಗಳು ಸಮಸ್ಯೆ ಪರಿಹರಿಸಿದ್ದು, ಎಲ್ಲ ರೈತರು ವಿಮೆ ಪಾವತಿಸಬಹುದಾಗಿದೆ. ಆದರೆ ಇದೀಗ ಅದೇ ಆ್ಯಪ್‌ಲ್ಲಿ ಮತ್ತೂಂದು ಸಮಸ್ಯೆ ಎದುರಾಗಿದೆ.
ಏನದು ಸಮಸ್ಯೆ: ಒಬ್ಬ ರೈತ ಬೇರೆ ಬೇರೆ ಸರ್ವೇ ನಂ. ನ ಒಂದಕ್ಕಿಂತ ಹೆಚ್ಚು ಭೂಮಿ ಹೊಂದಿದ್ದರೆ ಒಂದು ಜಮೀನಿನ ಬೆಳೆ ವಿಮೆ ಪಾವತಿಸಿದ ಬಳಿಕ ಇನ್ನೊಂದು ಸರ್ವೇ ಸಂಖ್ಯೆಯ ಬೆಳೆಗೆ ವಿಮೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ಆನ್‌ಲೈನ್ ಅರ್ಜಿ ಹಣ ಪಾವತಿ ಮಾಡುವಾಗ ರಿಜೆಕ್ಟ್ ಮಾಡುತ್ತಿದೆ. ಇದರಿಂದ ಒಂದಕ್ಕಿಂತ ಹೆಚ್ಚು ಜಮೀನು ಹೊಂದಿದ ರೈತರು ವಿಮೆ ಭರಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಅನೇಕ ರೈತರು ಈ ಯೋಜನೆಯಿಂದ ವಂಚಿತರಾಗುತ್ತಿದ್ದು, ಸಮಸ್ಯೆ ಸರಿಪಡಿಸಲು ಆಗ್ರಹಿಸಿದ್ದಾರೆ.
ಹೆಸರು ಮ್ಯಾಚ್ ಆಗದ್ದನ್ನು ಸರಿಪಡಿಸಲಾಗಿದೆ. ರೈತರು ಇವತ್ತಿನಿಂದ ಈ ಯೋಜನೆಯ ಸದುಪಯೋಗಪಡೆದುಕೊಳ್ಳಬೇಕು. ಸದ್ಯ ಇವತ್ತಿಂದ ಒಂದೇ ಭೂಮಿಯ ಬೆಳೆಗೆ ಮಾತ್ರ ವಿಮೆ ಪಾವತಿ ಆಗುತ್ತಿರುವುದು ಗಮನಕ್ಕೆ ಬಂದಿದ್ದು, ಅದನ್ನೂ ಸರಿಪಡಿಸುವ ಕೆಲಸ ಮಾಡುತ್ತೇವೆ. –
ಶ್ವೇತಾ ಹಾಡಕರ್, ತೋಟಗಾರಿಕಾ ನಿರ್ದೇಶಕರು, ಅಥಣಿ.
ನಮ್ಮದು ಮೂರು ದ್ರಾಕ್ಷಿ ತೋಟಗಳಿವೆ. ಸದ್ಯ ಒಂದಕ್ಕೆ ವಿಮೆ ಪಾವತಿಸಿದ್ದೇನೆ. ಇನ್ನೂ ಎರಡು ದ್ರಾಕ್ಷಿ ತೋಟಗಳಿಗೂ ವಿಮೆ ಪಾವತಿಸಬೇಕಿದೆ. ಆನ್‌ಲೈನ್ ಅರ್ಜಿ ಸ್ವೀಕರಿಸುತ್ತಿಲ್ಲ. ಈ ಹಿಂದೆ ಹೀಗಿರಲಿಲ್ಲ. ಪ್ರಸಕ್ತ ವರ್ಷ ಈ ಸಮಸ್ಯೆ ಎದುರಾಗಿದ್ದು, ತಕ್ಷಣದಿಂದಲೇ ಸರಿಪಡಿಸಿದರೆ ಅನುಕೂಲವಾಗುತ್ತದೆ. –
ಬಸೀರಹ್ಮದ ಮುಜಾವರ, ದ್ರಾಕ್ಷಿ ಬೆಳೆಗಾರ, ತೆಲಸಂಗ