ಪಣಜಿ : ಬಿಜೆಪಿಯ ಸಜ್ಜನ ಸರಳ ರಾಜಕಾರಣಿ, ಮಾಜಿ ರಕ್ಷಣಾ ಸಚಿವ, ಹಾಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರು ತನ್ನ ತಾರುಣ್ಯದಲ್ಲಿ ಎಲ್ಲ ಪಡ್ಡೆಹುಡುಗರಂತೆ ವಯಸ್ಕರ ಚಿತ್ರಗಳನ್ನು ನೋಡುತ್ತಿದ್ದರಂತೆ. ಈ ಅನುಭವವನ್ನು ಮಕ್ಕಳ ದಿನಾಚರಣೆಯಂದು ಪರ್ರಿಕರ್ ಅವರೇ ಬಹಿರಂಗಪಡಿಸಿದ್ದಾರೆ.
ಪಣಜಿಯಲ್ಲಿ ಶಾಲಾ ಮಕ್ಕಳೊಂದಿಗೆ ಮಾತನಾಡಿದ ಪರ್ರಿಕರ್ ‘ನಾನು ಆ ಕಾಲದ ವಯಸ್ಕರ ಚಿತ್ರಗಳನ್ನು ಚಿತ್ರಮಂದಿರದಲ್ಲಿ ನೋಡಿದ್ದೆ. ನೀವೀಗ ಮನೆಗಳಲ್ಲಿ ಟಿವಿಯಲ್ಲಿ ಏನು ನೋಡುತ್ತಿದ್ದಿರೋ ಅದು ನನ್ನ ತಾರುಣ್ಯದ ಕಾಲದಲ್ಲಿ ವಯಸ್ಕರ ಚಿತ್ರ ವಾಗಿತ್ತು’ ಎಂದರು.
‘ಆ ಕಾಲದಲ್ಲಿ ನಾನು ಮತ್ತು ನನ್ನ ಸಹೋದರ ವಯಸ್ಕರ ಚಿತ್ರ ನೋಡಲೆಂದು ಚಿತ್ರ ಮಂದಿರಕ್ಕೆ ತೆರಳಿದ್ದೆವು. ಇಂಟರ್ವಲ್ ವೇಳೆ ಚಿತ್ರಮಂದಿರದಲ್ಲಿ ಲೈಟ್ ಹಾಕಿದಾಗ ನಮ್ಮ ಸೀಟ್ ಪಕ್ಕದಲ್ಲೇ ನೆರೆಮನೆಯ ವ್ಯಕ್ತಿಯೊಬ್ಬ ಪ್ರತ್ಯಕ್ಷವಾಗಿದ್ದ. ಆ ವ್ಯಕ್ತಿ ಪ್ರತಿ ದಿನ ನನ್ನ ತಾಯಿಯನ್ನು ಮಾತನಾಡಿಸಿಕೊಂಡೇ ಹೋಗುತ್ತಿದ್ದ. ಆತನನ್ನು ನೋಡಿ ನಾನು, ನನ್ನ ಸಹೋದರನ ಬಳಿ ನಾವಿಂದು ಸತ್ತೆವು ಎಂದಿದ್ದೆ’ ಎಂದು ಹಾಸ್ಯ ಚಟಾಕಿ ಹಾರಿಸಿ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.
ಕೂಡಲೇ ತಮ್ಮ ಅವಧೂತ್ ಮತ್ತು ನಾನು ಚಿತ್ರಮಂದಿರದಿಂದ ಪಲಾಯನಗೈದು ಮನೆಗೆ ಹೋಗಿ ಒಂದು ಕಥೆ ಕಟ್ಟಿದೆವು. ‘ಅಮ್ಮಾ ನಾವಿಂದು ಸಿನಿಮಾಗೆಂದು ಹೋಗಿದ್ದೆವು, ಆದರೆನಮಗೆ ಅಲ್ಲಿ ಹೋದ ಬಳಿಕ ಆ ಚಿತ್ರ ಅಸಹ್ಯ ಎಂದು ತಿಳಿದು ಅರ್ಧದಲ್ಲೇ ವಾಪಾಸ್ ಬಂದೆವು’ ಎಂದು ಪಾರಾಗಿದ್ದೆವು.
ಮರು ದಿನ ಆ ವ್ಯಕ್ತಿ ಬಂದು ‘ನಿಮ್ಮ ಮಕ್ಕಳು ಚಿತ್ರ ನೋಡಲು ತೆರಳಿದ್ದರು’ ಎಂದು ಚಾಡಿ ಹೇಳಿದ. ಅದಕ್ಕೆ ನಮ್ಮ ತಾಯಿ ಪ್ರತಿಕ್ರಿಯಿಸಿ ‘ನನಗೆ ಗೊತ್ತು ನನ್ನ ಮಕ್ಕಳು ಹೋಗಿ ವಾಪಾಸ್ ಬಂದಿದ್ದು, ನೀನೇಕೆ ಆ ಚಿತ್ರ ನೋಡಲು ಹೋಗಿದ್ದೆ ಎಂದು ಆತನನ್ನೇ ಮರು ಪ್ರಶ್ನಿಸಿ ಶಾಕ್ ನೀಡಿದರು’ ಎಂದು ಪರ್ರಿಕರ್ ತಮ್ಮ ಅನುಭವವನ್ನು ಸಂಕೋಚವಿಲ್ಲದೆ ಬಿಚ್ಚಿಟ್ಟರು.